ರಾಮನಗರ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ‘ಮೇಘಮೈತ್ರಿ ಶಿಕ್ಷಕರ ಸಾಹಿತ್ಯ ಸಮ್ಮೇಳನ 2024’ವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ರಾಮನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಿಂಭಾಗ, ನ್ಯೂ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ, ಕನ್ನಡ ಧ್ವಜ ಮೆರವಣಿಗೆ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕನಕಪುರದ ಹಿರಿಯ ಸಾಹಿತಿಗಳು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಾ. ಕೂ.ಗಿ. ಗಿರಿಯಪ್ಪ ಇವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.
ಹಿರೇಮಠ ಕಮತಗಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮ್ಮೇಳನದ ಉದ್ಘಾಟನೆಯನ್ನು ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡ ಇವರು ನೆರವೇರಿಸಲಿದ್ದಾರೆ. ಡಾ. ಕೂ.ಗಿ. ಗಿರಿಯಪ್ಪ ಇವರ ‘ರಾಣಿ ಕಿತ್ತೂರು ಚೆನ್ನಮ್ಮ’ ಎಂಬ ಕೃತಿಯನ್ನು ಭಾರತೀಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಸರವನ ಇವರು ಲೋಕಾರ್ಪಣೆಗೊಳಿಸಲಿರುವರು. ‘ಸಮ್ಮೇಳನಾಧ್ಯಕ್ಷರ ಬದುಕು ಬರಹ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಸಾಹಿತಿ ಶ್ರೀ ಕೆ.ಸಿ. ಶಿವಪ್ಪ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ರಾಜ್ಯ ಮಟ್ಟದ ‘ಶಿಕ್ಷಣ ರತ್ನ ಪ್ರಶಸ್ತಿ’ ಹಾಗೂ ‘ಕರುನಾಡ ನಕ್ಷತ್ರ ಪ್ರಶಸ್ತಿ’ ಪ್ರದಾನ, ಸಮಾರೋಪ ಸಮಾರಂಭ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.