ಧಾರವಾಡ : ಮನೋಹರ ಗ್ರಂಥ ಮಾಲಾ ಇದರ ವತಿಯಿಂದ ಶ್ರೀನಿವಾಸ ವಾಡಪ್ಪಿ ಇವರ ‘ಮಿಗಿಲಹುದು ಭುವಿಯಬಣ್ಣ’ ಲಲಿತ ಪ್ರಬಂಧಗಳ ಸಂಕಲನ ಕೃತಿಯು ದಿನಾಂಕ 28 ಡಿಸೆಂಬರ್ 2025ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಲೋಕಾರ್ಪಣೆಗೊಂಡಿತು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಕುರಿತು ಡಾ. ಕೃಷ್ಣ ಕಟ್ಟಿ ಮಾತನಾಡಿದ “ಕಥೆ, ಕವನ ಅಥವಾ ವಿಮರ್ಶೆಯಂತೆ ಲಲಿತ ಪ್ರಬಂಧಗಳು ಗಂಭೀರವಾಗಿರದೆ ವೈಯಕ್ತಿಕ ಅನುಭವ, ಹಾಸ್ಯ, ವಿಡಂಬನೆ ಮತ್ತು ತತ್ವಗಳ ಮಿಶ್ರಣದೊಂದಿಗೆ ಲಲಿತ ಪ್ರಬಂಧಗಳು ಶ್ರೀನಿವಾಸ ವಾಡಪ್ಪಿಯವರಿಂದ ರಚಿತಗೊಂಡಿವೆ. ಈ ಪ್ರಬಂಧ ಸಂಕಲನದಲ್ಲಿ 15 ಲೇಖನಗಳಿಗೆ. ಈ ಪ್ರಬಂಧಗಳು ವೈಯಕ್ತಿಕ ಸ್ಪರ್ಶ, ಅನೌಪಚಾರಿಕತೆ, ಹಾಸ್ಯ ಮತ್ತು ವಿಡಂಬನೆ, ಮನೋಲಹರಿಯು ಈ ಪ್ರಬಂಧಗಳಲ್ಲಿವೆ. ಸಂಸ್ಕೃತಿ, ಇತಿಹಾಸ ಮತ್ತು ಮಾನವ ಭಾವನೆಗಳನ್ನು ಈ ಪ್ರಬಂಧಗಳು ಪ್ರತಿಬಿಂಬಿಸುತ್ತವೆ. ಸಮಾಜದ ಮೌಲ್ಯಗಳನ್ನು ತೋರಿಸುತ್ತವೆ. ಇವು ಕೇವಲ ಸೌಂದರ್ಯದ ಪ್ರಬಂಧಗಳಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿಷಯ ಮತ್ತು ಘಟನೆಗಳು ಇದರಲ್ಲಿವೆ. ಸೃಜನಾತ್ಮಕ ಹಾಗೂ ಸಾಮಾಜಿಕ ಸಂಹವನಕ್ಕೆ ಇವು ಪೂರಕವಾಗಿವೆ. ಅಂತಃಕರಣದ ಅಭಿವ್ಯಕ್ತಿಯನ್ನು ಪ್ರಬಂಧಗಳು ಹೇಳುತ್ತವೆ. ಜನರ ಮತ್ತು ವ್ಯಕ್ತಿಯ ಅನುಭವಗಳು ಇಲ್ಲಿ ದಾಖಲೆಯಾಗಿವೆ. ಓದುಗರ ಹೃದಯವನ್ನು ಅರಳಿಸಿ ಜೀವನವನ್ನು ಸಮೃದ್ದಗೊಳಿಸುವ ಚಿಂತನಾ ಪರ ಲೇಖನಗಳು ಈ ಸಂಕಲನದಲ್ಲಿವೆ.” ಎಂದು ಹೇಳಿದರು.
ಪುಸ್ತಕ ಬಿಡುಗಡೆ ಮಾಡಿದ ವಿಶ್ರಾಂತ ಕುಲಪತಿ ಡಾ. ತೇಜಸ್ವಿ ಕಟ್ಟಿಮನಿ ಇವರು ಮಾತನಾಡುತ್ತ “ವಾಡಪ್ಪಿ ಇವರ ಪ್ರಬಂಧಗಳು ಧಾರವಾಡದ ಸಾಹಿತ್ಯ ಮತ್ತು ಸಂಸ್ಕೃತಿಯಿಂದ ರೂಪಗೊಂಡಿವೆ. ಇವರ ಪ್ರಬಂಧಗಳನ್ನು ಓದಿ ಆಸ್ವಾದಿಸಬೇಕು” ಎಂದು ಹೇಳಿದರು. ಹಿಂದಿ ಮತ್ತು ಕನ್ನಡ ಪ್ರಬಂಧ ಪರಂಪರೆಯನ್ನು ಹೋಲಿಸಿ ಈ ಪ್ರಬಂಧಗಳ ಮಹತ್ವವನ್ನು ತಿಳಿಸಿದರು.
“ಶ್ರೀನಿವಾಸ ವಾಡಪ್ಪಿಯವರು ನಾಡಿನ ಉತ್ತಮ ಪ್ರಬಂಧಕಾರರು ಹಾಗೂ ಒಳ್ಳೆಯ ವಾಗ್ಮಿಗಳು” ಎಂದು ಶಂಕರ ಹಲಗತ್ತಿ ಅವರು ಹೇಳಿದರು. ಲೇಖಕರಾದ ವಾಡಪ್ಪಿಯವರು ತಮ್ಮ ತಂದೆಯವರ ಹಾಗೂ ಧಾರವಾಡದ ಪ್ರಭಾವದಿಂದ ನನ್ನ ಪ್ರಬಂಧಗಳು ರೂಪಗಂಡಿವೆ. ನನ್ನ ಬರವಣಿಗೆಗೆ ನನ್ನ ಶ್ರೀಮತಿಯವರ ಪ್ರೋತ್ಸಾಹ ಬಹಳವಿದೆ. ನನ್ನ ಕುಟುಂಬ, ಗೆಳೆಯರು ಹಾಗೂ ಬಂಧು ಬಳಗ ಇವರ ಪ್ರೋತ್ಸಾಹದಿಂದ ನನ್ನ ಪುಸ್ತಕ ನಿಮ್ಮ ಕೈಸೇರಿದೆ ಎಂದು ಕೃತಜ್ಞತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ವಿನಾಯಕ ನಾಯಕರು ಜಗತ್ತಿನ ಪ್ರಬಂಧ ಪರಂಪರೆಯನ್ನು ವಿಶ್ಲೇಷಿಸಿ, ಭಾರತೀಯ ಹಾಗೂ ಕನ್ನಡದ ವೈಶಿಷ್ಟ್ಯತೆಯನ್ನು ಹೇಳಿ ಬಿ.ಆರ್. ವಾಡಪ್ಪಿ ಮತ್ತು ಶ್ರೀನಿವಾಸ ವಾಡಪ್ಪಿ ಇವರ ಪ್ರಬಂಧಗಳಲ್ಲಿರುವ ಮಹತ್ವವನ್ನು ತಿಳಿಸಿದರು. ಪ್ರಬಂಧ ಸಾಹಿತ್ಯ ಪ್ರಕಾರಕ್ಕೆ ‘ಮಿಗಿಲಹದು ಭುವಿಯಬಣ್ಣ’ ಒಳ್ಳೆಯ ಸೇರ್ಪಡೆ ಎಂದು ಹೇಳಿದರು. ಡಾ. ಶಶಿಧರ ನರೇಂದ್ರ ಸ್ವಾಗತಿಸಿ, ಜಯತೀರ್ಥ ಜಹಗೀರದಾರ ವಂದಿಸಿ, ಡಾ. ಚಿದಾನಂದ ಮಾಸನಕಟ್ಟೆ ಕಾರ್ಯಕ್ರಮ ನಿರೂಪಣೆ ಮಾಡಿದರು. ನಗರದ ಅನೇಕ ಸಾಹಿತಿಗಳು, ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
