ಮಂಗಳೂರು : ರೋಟರಿ ಕ್ಲಬ್ ಸುರತ್ಕಲ್ ಆಶ್ರಯದಲ್ಲಿ ಸುರತ್ಕಲ್ಲಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರವು ದಿನಾಂಕ 29-06-2024ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ “ಅಂತರಂಗಿಕ ಶಕ್ತಿಯ ವರ್ಧನೆಗೆ ಏಕಾಗ್ರತೆ ಅಗತ್ಯವಿದ್ದು ದೃಢ ಪ್ರಯತ್ನದಿಂದ ಯಶಸ್ಸನ್ನು ಪಡೆಯಲು ಸಾಧ್ಯ. ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ನೆನಪುಗಳು, ಗ್ರಹಣ ಶಕ್ತಿಗಳ ಸಮೂಹವಾಗಿರುವ ಮನಸ್ಸಿನ ಶಕ್ತಿಯ ವರ್ಧನೆಯನ್ನು ಮಾಡಿಕೊಳ್ಳಬೇಕು. “ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ವೈ. ರಮಾನಂದ ರಾವ್ ಮಾತನಾಡಿ “ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗಳಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಸಂದೀಪ್ ರಾವ್ ಇಡ್ಯಾ ಮಾತನಾಡಿ “ಏಕಾಗ್ರತೆಯ ಕಲೆಯನ್ನು ರೂಢಿಸಿಕೊಂಡಾಗ ಪ್ರತಿಭಾವಂತರಾಗಲು ಸಾಧ್ಯ.” ಎಂದರು.ಶಾಲಾ ಸಂಚಾಲಕ ಹಾಗೂ ಕಾರ್ಯಾಗಾರದ ಪ್ರಾಯೋಜಕ ಸತೀಶ್ ರಾವ್ ಇಡ್ಯಾ ಶುಭ ಹಾರೈಸಿದರು.
ಮುಖ್ಯ ಶಿಕ್ಷಕಿ ಮಾಲಿನಿ ಬಂಗೇರ ಸ್ವಾಗತಿಸಿ, ಕ್ಯಾಬಿನೇಟ್ ಲೀಡರ್ ಸ್ಪೂರ್ತಿ ಬಂಗೇರ ವಂದಿಸಿದರು.
ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮಣ್ ಸಾಲ್ಯಾನ್, ಸಮಿತಿ ಸದಸ್ಯರಾದ ಮಧುಸೂಧನ್ ರಾವ್, ಪುಂಡಲೀಕ ಹೊಸಬೆಟ್ಟು, ಶ್ರೀಕಾಂತ್, ಡಾ. ಕೆ. ರಾಜಮೋಹನ ರಾವ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುದ್ರೋಳಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು.