ವಿಶಿಷ್ಟ ಕಲೆಯಾದ ಜಾದೂವಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜನರ ಮನದಲ್ಲಿ ರಾರಾಜಿಸುತ್ತಿರುವ ಪ್ರಸಿದ್ಧ ಜಾದೂಗಾರ ಶ್ರೀಯುತ ಕುದ್ರೋಳಿ ಗಣೇಶ್. ಈಗಾಗಲೇ ಶಾಸಕರನ್ನು ಮಾಯಮಾಡಿ, ತುಳುನಾಡು ಭೂತಕೋಲ ಜಾದೂ ಹಾಗೂ ತಮ್ಮ ಕ್ಲೋಸ್ಅಪ್ ಮ್ಯಾಜಿಕ್ ಮತ್ತು ಇಲ್ಯುಷನ್ ಗಳಿಂದ ಹೆಸರುವಾಸಿಯಾಗಿರುವ ಗಣೇಶ್ ಅವರು ಇದೀಗ ಮ್ಯಾಜಿಕ್ ಲೋಕದ ಇನ್ನೊಂದು ಮಜಲನ್ನು ಜಗತ್ತಿಗೆ ಪರಿಚಯಿಸುವ ಮೂಲಕ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾದೂಗಾರ ಕುದ್ರೋಳಿ ಗಣೇಶ್ ಇವರ ‘ಮೈಂಡ್ ಮಿಸ್ಟರಿ’ ಮೆಂಟಲಿಸಮ್ ಕಲಾಧಾರಿತ ನವೀನ ಪ್ರಯೋಗದ ಮೂರು ಪ್ರದರ್ಶನಗಳು ಡಿಸೆಂಬರ್ 21 ಹಾಗೂ 22 ರಂದು ಯಕ್ಷ ಕಲಾರಂಗದ ಐ. ವೈ. ಸಿ.ಸಭಾಂಗಣ, ಉಡುಪಿಯಲ್ಲಿ ಜರಗಿತು. ಸಮಾಜದ ಪ್ರಮುಖರಾದ ಪ್ರಮೋದ್ ಮಧ್ವರಾಜ್, ರಘುಪತಿ ಭಟ್, ಲಾಲಾಜಿ ಮೆಂಡನ್ ಹಾಗೂ ಉದ್ಯಮಿಗಳು, ವೈದ್ಯರು, ಇಂಜಿನಿಯರ್ ಗಳು, ಕಲಾಸಕ್ತರ ಸಮ್ಮುಖದಲ್ಲಿ ನಡೆದ ಈ ಚೊಚ್ಚಲ ಕಾರ್ಯಕ್ರಮ ಎಲ್ಲರನ್ನು ನಿಬ್ಬೆರುಗಾಗಿಸಿದ್ದು ‘ಮೈಂಡ್ ಮಿಸ್ಟರಿ’ಯ ಯಶಸ್ಸಿಗೆ ಸಾಕ್ಷಿಯಾಗಿದೆ.
‘ಮೈಂಡ್ ಮಿಸ್ಟರಿ – ಸುಪ್ತ ಮನಸ್ಸಿನ ಅನಾವರಣ’ – ಈ ವಿಶೇಷ ಜಾದೂ ಕಾರ್ಯಕ್ರಮದಲ್ಲಿ ಮೈಂಡ್ ರೀಡಿಂಗ್, ಮನಸ್ಸಿನಿಂದ ಮನಸ್ಸಿನ ಮಧ್ಯ ಅಗೋಚರ ಸಂಪರ್ಕ (ಟೆಲಿಪತಿ), ಆರನೇ ಇಂದ್ರಿಯದ ಅನುಭೂತಿ, ವ್ಯಕ್ತಿಯ ವರ್ತನೆಯ ಮೇಲೆ ಧನಾತ್ಮಕ ಪ್ರಭಾವ ಬೀರುವ ಪ್ರಯೋಗ, ಭವಿಷ್ಯವಾಣಿ ಇತ್ಯಾದಿ ಚಮತ್ಕಾರಗಳು ಎಳೆ ಎಳೆಯಾಗಿ ವೇದಿಕೆಯಲ್ಲಿ ತೆರೆದುಕೊಂಡವು. ಸಭಿಕರೆಲ್ಲರೂ ಎದ್ದು ನಿಂತು ನೀಡಿದ ಚಪ್ಪಾಳೆ ಕುದ್ರೋಳಿ ಗಣೇಶ್ ಇವರ ಪ್ರಬುದ್ಧ ಪ್ರದರ್ಶನಕ್ಕೆ ಇಟ್ಟ ಹೊನ್ನ ಕಿರೀಟದಂತಿತ್ತು. ವಿಜ್ಞಾನ – ಮನಶಾಸ್ತ್ರ – ಜಾದೂ ಕಲೆಯ ಸಂಗಮದ ‘ಮೈಂಡ್ ಮಿಸ್ಟರಿ’ ಇನ್ನೂ ಹಲವಾರು ಕಡೆಗಳಲ್ಲಿ ಪ್ರದರ್ಶನ ಕಾಣಲಿವೆ. ಕಲಾಸಕ್ತರು ಈ ವಿಶೇಷ ಪ್ರಯೋಗವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ ಆಸ್ವಾದಿಸುವುದು ಅತ್ಯಗತ್ಯ.
ಜಾದೂಗಾರ ಕುದ್ರೋಳಿ ಗಣೇಶ್:
ಭಾರತೀಯ ಜಾದೂ ಕಲೆಗೆ ಕುದ್ರೋಳಿ ಗಣೇಶರ ಕೊಡುಗೆ ಅಪೂರ್ವ. ಜಾದೂ ಕಲೆಗೆ ತನ್ನದೇ ಛಾಪು ನೀಡಿ ಮೂರು ದಶಕಗಳಿಂದ ಜನರ ‘ವಿಸ್ಮಯ’ಕ್ಕೆ ಕಾರಣಕರ್ತರಾದ ಕುದ್ರೋಳಿ ಗಣೇಶ್ ದೇಶ ವಿದೇಶಗಳಲ್ಲಿ 2500ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ನೀಡಿದ್ದು ಮಾತ್ರವಲ್ಲದೆ, ಜಾದೂ – ಜನಪದ – ರಂಗಭೂಮಿ – ಸಂಗೀತದ ಮಿಶ್ರಣದ ಜಾದೂ ಪ್ರಸ್ತುತ ಪಡಿಸಿದ ಏಕೈಕ ಜಾದೂಗಾರ ಎಂದರೆ ತಪ್ಪಾಗಲಾರದು. ಹನ್ನೊಂದು ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಇವರು ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಹಾಗೂ ‘ಬಿಗ್ ಬಾಸ್ ಕನ್ನಡ’ದಲ್ಲೂ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದಾರೆ.
‘ವಿಸ್ಮಯ’ ಜಾದೂ ತಂಡದ ರೂವಾರಿಯಾಗಿರುವ ಇವರು ‘ಜಾದೂ ಜಾಥ’ ಎಂಬ ಜಾದೂ ಕಾರ್ಯಕ್ರಮದ ಮೂಲಕ ಪೋಲಿಯೋ, ಕುಡಿತದ ಚಟ, ಏಡ್ಸ್ ಹೀಗೆ ಸಮಾಜಕ್ಕೆ ಶಾಪವಾಗಿರುವಂಥಹ ಹಲವು ವಿಷಯಗಳ ಬಗ್ಗೆ ಧ್ವನಿಯೆತ್ತಿ, ಜನರಿಗೆ ಜಾದೂ ಮೂಲಕ ಅರಿವನ್ನು ಮೂಡಿಸಿ ತಮ್ಮ ಸಮಾಜಪರ ಕಳಕಳಿಯನ್ನು ಎತ್ತಿ ಹಿಡಿದಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2011ಕ್ಕೆ ಭಾಜನರಾದ ಇವರು ಥೈಲ್ಯಾಂಡ್, ಬ್ಯಾಂಕಾಕ್ ನಲ್ಲಿ ನಡೆದ ‘ಇಂಟರ್ನ್ಯಾಷನಲ್ ಸೊಸೈಟಿ ಆಫ್ ಮ್ಯಾಜಿಕ್ ಅಮೇರಿಕಾ’ದ ‘ಮರ್ಲಿನ್ ಮೆಡಲ್’ ಅನ್ನು ತಮ್ಮ ಬಗಲಿಗೇರಿಸಿಕೊಂಡು ದೇಶದ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಜಾದೂಗಾರ ಕುದ್ರೋಳಿ ಗಣೇಶ್ ಇವರ ಮುಂಬರುವ ವಿನೂತನ ಪ್ರದರ್ಶನಗಳಿಗಾಗಿ ಕಲಾಸಕ್ತರು ಸದಾ ಕಾತರದಿಂದ ಕಾಯುವಂತೆ ಮಾಡಿದ ‘ಮೈಂಡ್ ಮಿಸ್ಟರಿ’ಗೆ ‘ರೂವಾರಿ’ ತಂಡದ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.