ಮಂಗಳೂರು : ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ಲು ಇವರ ‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ಎಂಬ ತುಳುವಿನಲ್ಲಿ ಪ್ರಕಟಿತ ಮೊದಲ ಪಿ.ಎಚ್.ಡಿ. ಅಧ್ಯಯನಪೂರ್ಣ ಗ್ರಂಥವೊಂದನ್ನು ರಚಿಸಿದ್ದು, ತುಳು ಭಾಷೆಯಲ್ಲೂ ಸಂಶೋಧನಾ ಗ್ರಂಥ ಬಂತು ಎಂಬುದು ತುಳು ನಾಡಿಗೆ ಹೆಮ್ಮೆಯನ್ನು ತಂದಿದೆ. ದಿನಾಂಕ 27-08-2023ರಂದು ಅಪರಾಹ್ನ 2.45ಕ್ಕೆ ಈ ಗ್ರಂಥ ಬಪ್ಪನಾಡು ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಸಾಂಸ್ಕೃತಿಕ ಹರಿಕಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಾಡೋಜ ಡಾ. ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಕೆ. ಅವರು ಗ್ರಂಥವನ್ನು ಪರಿಚಯಿಸುವರು. ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ಶುಭ ಹಾರೈಸಲಿದ್ದು, ಶಾಸಕರಾದ ಉಮಾನಾಥ ಕೋಟ್ಯಾನ್, ಯಶ್‌ಪಾಲ್ ಸುವರ್ಣ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಪರಾಹ್ನ 2 ಘಂಟೆಗೆ ಬಜಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಶ್ರೀ ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಯಲಿದೆ. ನಾಡಿನ ಪ್ರಸಿದ್ಧ 12 ಮಂದಿ ಉದಯೋನ್ಮುಖ ಕವಿಗಳು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತುಳುನಾಡಿನ ಸಾಹಸಿ ಸಮುದಾಯವಾದ ಮೊಗವೀರರ ಬದುಕು, ಕಸುಬು, ಸಾಂಸ್ಕೃತಿಕತೆ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾದುದು ಬಹಳ ಕಡಿಮೆ. ಈ ಕೊರತೆಯೇ ತಮ್ಮ ಈ ಅಧ್ಯಯನಕ್ಕೆ ಸ್ಪೂರ್ತಿ ನೀಡಿತು ಎನ್ನುವ ಡಾ.ಯಾದವ್ ಇವರ ಈ ಅಧ್ಯಯನವನ್ನು ಮಾನ್ಯ ಮಾಡಿ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯು 2021ರಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಇದು ತುಳು ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮೊದಲ ಸಂಶೋಧನಾ ಗ್ರಂಥವಾಗಿದ್ದು, ಅಧ್ಯಯನವನ್ನು ಗ್ರಂಥರೂಪದಲ್ಲಿ ಹೊರತಂದ ಹೆಗ್ಗಳಿಕೆ ಡಾ.ಯಾದವ್ ಅವರದ್ದು. ತುಳು ಭಾಷೆಗೆ ಸಾಂವಿಧಾನದಲ್ಲಿ ಮಾನ್ಯತೆ ಸಿಗಬೇಕು ಎಂಬ ತುಳು ನಾಡಿನ ಜನತೆಯ ಹಂಬಲಕ್ಕೆ ಇನ್ನಷ್ಟು ಒತ್ತು ಸಿಗುವಂತಾಗಲು ಈ ಗ್ರಂಥ ಆಶಾದಾಯಕವಾಗಿದೆ.
ಸಮುದ್ರದ ನೀರಿನ ನಡುವೆಯೇ ದುಡಿಯುವ ಮೊಗವೀರರ ಜೀವನದ ಪೂರ್ಣ ಚಿತ್ರಣವನ್ನು ಡಾ.ಯಾದವ್ ಅವರು ಈ ಗ್ರಂಥದಲ್ಲಿ ಪರಿಚಯಿಸಿದ್ದಾರೆ. ಮೊಗವೀರ ಕುಲಕಸುಬು, ಧೈರ್ಯ, ಸಾಹಸ, ಮುಗ್ಧತೆ, ಮನೋಧರ್ಮ, ದೈವ ದೇವರುಗಳ ಬಗೆಗಿನ ಶ್ರದ್ಧಾ ಭಕ್ತಿ ಇವುಗಳ ಬಗ್ಗೆ ಈ ಗ್ರಂಥ ಬೆಳಕು ಚೆಲ್ಲುತ್ತದೆ.
ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದ ಸುಮಾರು 38 ವರ್ಷ ಇಂಗ್ಲಿಷ್ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಉಪ್ಪುಂದದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾಗಿ ಇತ್ತೀಚೆಗೆ ನಿವೃತ್ತರಾದ ಡಾ.ವಿ.ಕೆ.ಯಾದವ್ ಉಡುಪಿಯ ತುಳುಕೂಟ ಹಾಗೂ ಇತರ ಸಂಘಟನೆಗಳ ಮೂಲಕ ತುಳು ಭಾಷೆಗಾಗಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ.