12 ಏಪ್ರಿಲ್ 2023, ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ ಮತ್ತು ತುಳುಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಸೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 08-04-2023 ಶನಿವಾರದಂದು ನಡೆದ ‘ತುಳು ಮಹಾಕೂಟ-2023’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಇವರು ಉದ್ಘಾಟಿಸಿ ”ಎಲ್ಲ ಜಾತಿ, ಮತ, ಧರ್ಮದವರು ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ತುಳು ಭಾಷೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಬೇಕು. ಈ ಕುರಿತು ಯಾವುದೇ ಸರಕಾರ ಬಂದರೂ ಇದಕ್ಕೆ ಆದ್ಯತೆ ನೀಡಬೇಕು. ತುಳುವರು ಹಕ್ಕೊತ್ತಾಯ ಮಾಡಬೇಕು. ಯಾವುದೇ ಭಾಷೆಗೆ ತುಳುವರ ವಿರೋಧವಿಲ್ಲ, ಆದರೆ ತುಳು ಭಾಷೆಗೆ ಮಾನ್ಯತೆ ನೀಡಬೇಕು” ಎಂದು ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಇಂದು ಕೇವಲ 36ರಷ್ಟಿರುವ ತುಳು ಕೂಟಗಳ ಸಂಖ್ಯೆ ನೂರಕ್ಕೆ ಏರ ಬೇಕಾಗಿದೆ, ಆಗ ತುಳುವಿಗೆ ಅಧಿಕೃತ ಮಾನ್ಯತೆ ಸಿಗುವ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ನ್ಯಾಯ ಒದಗಿಬರುತ್ತದೆ”ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ತುಳುಕೂಟ ಕುಡ್ಲ ಅಧ್ಯಕ್ಷ ದಾಮೋದರ ನಿಸರ್ಗ, ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ, ಕೆ.ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ವಿಜಯ ಲಕ್ಷ್ಮೀ ಬಿ. ಶೆಟ್ಟಿ, ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಎಂ. ಚಂದ್ರಹಾಸ ದೇವಾಡಿಗ, ಜತೆ ಕಾರ್ಯದರ್ಶಿಗಳಾದ ಪಿ.ಎ. ಪೂಜಾರಿ ಮತ್ತು ಹರೀಶ್ ನೀರುಮಾರ್ಗ, ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ ಆಳ್ವ ಬದಿಯಡ್ಕ ಉಪಸ್ಥಿತರಿದ್ದರು.
ಪೆರ್ಮೆದ ತುಳುವೆರ್ ಪುರಸ್ಕೃತ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಧರ್ಮಪಾಲ್ ಯು. ದೇವಾಡಿಗ ಮುಂಬಯಿ, ಡಾ. ಭಾಸ್ಕರಾನಂದ ಕುಮಾರ್ ಕಟೀಲು, ದಿವಾಕರ ಎಸ್. ಶೆಟ್ಟಿ ಸಾಂಗ್ಲಿ, ಎಂ. ರತ್ನಕುಮಾರ್ ಮಂಗಳೂರು ಮತ್ತು ಬಿ.ಎನ್. ಹರೀಶ್ ಬೋಳೂರು ಅವರನ್ನು ‘ಪೆರ್ಮೆದ ತುಳುವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ತುಳುಕೂಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿ, ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ ವಂದಿಸಿದರು.