ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದಲ್ಲಿ ಲೇಖಕಿ ದೇವಿಕಾ ನಾಗೇಶ್ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏಪ್ರಿಲ್ 22ರಂದು ಅಪರಾಹ್ನ ಸಂಘದ ಕಚೇರಿ ಉರ್ವಾಸ್ಟೋರಿನ ಸಾಹಿತ್ಯ ಸದನದಲ್ಲಿ ನೆರವೇರಿತು. ‘ಮೌನ ಹೊದ್ದವಳು’ ಕವನ ಸಂಕಲನವನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಹಾಗೂ ‘ಕಸ್ತೂರಿ ಚಿಕ್ಕಿ’ ಮತ್ತು ‘ಪುನುಗು ಬೆಕ್ಕು’ ಕಥಾ ಸಂಕಲನವನ್ನು ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಹಿಲ್ಡಾ ರಾಯಪ್ಪನ್ ಅವರು ಅನಾವರಣಗೊಳಿಸಿದರು. ಲೇಖಕಿ ಅ.ನಾ ಪೂರ್ಣಿಮಾ ಅವರು ಕವನ ಸಂಕಲನದ ಪರಿಚಯ ಹಾಗೂ ಲೇಖಕಿ ಯಶೋದಾ ಮೋಹನ್ ಅವರು ಕಥಾಸಂಕಲನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮಾತನಾಡಿ “ದೇವಿಕಾ ನಾಗೇಶ್ ಅವರ ಕವನ ಸಂಕಲನ ಉತ್ತಮ ಸಂದೇಶಗಳನ್ನು ಒಳಗೊಂಡಿದ್ದು, ಕೃತಿಯು ಅದ್ಭುತವಾಗಿ ಮೂಡಿ ಬಂದಿದೆ. ಇನ್ನಷ್ಟು ಇಂತಹ ಕೃತಿಗಳು ಬರ್ಬೇಕು” ಎಂದು ಆಶಿಸಿದರು. ಕಥಾಸಂಕಲನ ಅನಾವರಣಗೊಳಿಸಿದ ಪ್ರೊ. ಹಿಲ್ಡಾ ರಾಯಪ್ಪನ್ ಮಾತನಾಡಿ, “ದೇವಿಕಾ ನಾಗೇಶ್ ಅವರ ಬಗ್ಗೆ ಬಹಳ ಅಭಿಮಾನವೆನಿಸುತ್ತಿದೆ. ಸಾಹಿತ್ಯಿಕವಾಗಿ ಹಾಗೂ ಸಮಾಜಮುಖಿಯಾಗಿ ಅವರು ಮಾಡುತ್ತಿರುವ ಕೆಲಸಗಳನ್ನು ಇಷ್ಟ ಪಟ್ಟು, ಅವರ ಮೇಲೆ ಪ್ರೀತಿ, ಅಭಿಮಾನ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಂತಹ ಕೆಲಸ ಅವರಿಂದ ಇನ್ನಷ್ಟು ಆಗಲಿ” ಎಂದು ಯಶಸ್ಸನ್ನು ಹಾರೈಸಿದರು.
ಮುಖ್ಯ ಅಭ್ಯಾಗತರಾಗಿದ್ದ ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಅವರು ಮಹಿಳೆಯರ ಅಸ್ಮಿತೆಯನ್ನು ಉಳಿಸಿಕೊಂಡಿರುವ ಸಂಘದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಅವರು ಅಧ್ಯಕ್ಷ ನುಡಿಗಳನ್ನಾಡಿ ಶುಭ ಹಾರೈಸಿದರು. ಕೃತಿಗಳ ಲೇಖಕಿ ದೇವಿಕಾ ನಾಗೇಶ್ ತಮ್ಮ ಅನುಭವವನ್ನು ಹಂಚಿಕೊಂಡರು.
ಲೇಖಕಿ ಶಶಿಲೇಖಾ ಬಿ. ಅವರು ಸ್ವಾಗತ ಮತ್ತು ಪ್ರಸ್ತಾವನೆ ಮಾಡಿ, ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದಿಸಿದರು. ಕುಮಾರಿ ಜ್ಯೋತ್ಸ್ನಾ ಆಶಯ ಗೀತೆಯನ್ನು ಹಾಡಿ, ಲೇಖಕಿ ರೂಪಕಲಾ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಜಾತಾ ಕೊಡ್ಮಣ್, ಉಪಾಧ್ಯಕ್ಷರಾದ ವಿಜಯಲಕ್ಷ್ಮೀ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಆಕೃತಿ ಭಟ್, ದೇವಿಕಾ ನಾಗೇಶ್ ಅವರ ಬಂಧುಗಳು, ಹಿತೈಷಿಗಳು ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.