ಮಡಿಕೇರಿ : ಶ್ರೀಮತಿ ರಮ್ಯ ಕೆ.ಜಿ. ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದವರು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮೂರ್ನಾಡಿನಲ್ಲಿ ಪಡೆದಿದ್ದು, ವಿರಾಜಪೇಟೆಯ ಸರ್ವೋದಯ ಡಿ.ಇಡಿ ಕಾಲೇಜಿನಲ್ಲಿ ಟೀಚರ್ ಟ್ರೈನಿಂಗ್ ಪಡೆದು, ಪ್ರಸ್ತುತ ಎಮ್ಮೆಮಾಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಪ್ರಕಟಿತ ಕೃತಿ ‘ದಾಹಗಳ ಮೈ ಸವರುತ್ತಾ…’ ಎಂಬ ಕವನ ಸಂಕಲನ. ಈ ಕೃತಿಗೆ ಈ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಸಿಕ್ಕಿದೆ. ‘ಗಾಳಿಯಾಡುತ್ತಿರಲಿ ಗಾಯ’ (ಕವನ ಸಂಕಲನ), ‘ಅಮ್ಮ ಚೂರು ನಿಟಿಕೆ ಮುರಿಯೆ’ (ಮಕ್ಕಳಿಗಾಗಿ ಕವಿತೆಗಳು), ‘ಬೆನ್ನ ಹಾದಿಯ ಚಿಟ್ಟೆ’ (ಗಜ಼ಲ್ ಸಂಕಲನ) ಈಗಾಗಲೇ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು. ಓದು, ಬರಹ, ತಿರುಗಾಟ ಇವರ ಮೆಚ್ಚಿನ ಹವ್ಯಾಸ. ಈ ಬಾರಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡುವ ಇವರಿಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಿನ ಸದಸ್ಯರ ಪರವಾಗಿ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಅಭಿನಂದಿಸಿರುತ್ತಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಿಳಿಸಿದೆ.