ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶೋಧನ ಪ್ರಕಾಶನದ ಸಹಯೋಗದಲ್ಲಿ ಪ್ರೊ. ಎ.ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’ ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 16 ಅಕ್ಟೋಬರ್ 2024ರ ಬುಧವಾರದಂದು ಬೆಂಗಳೂರಿನಲ್ಲಿರುವ ಶೇಷಾದ್ರಿಪುರಂ ಸಂಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಹಿರಿಯ ವಿದ್ವಾಂಸ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ “ತಂದೆಯ ಅಚ್ಚಿನ ಮುಖ, ಅದೇ ಎರಕದ ಮೊಗ ನಮ್ಮ ವಾಸುದೇವ ನಾವಡ ಅವರದ್ದು. ತಂದೆಯ ಅಚ್ಚನ್ನು ಮಾತ್ರವಲ್ಲದೇ, ತಂದೆಯ ವಿದ್ವತ್ ಪರಂಪರೆಯನ್ನು ಅವರು ಉತ್ಕರ್ಷ ಸ್ಥಿತಿಗೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ತಮ್ಮ ಅಧ್ಯಯನದ ಮೂಲಕ ಮಾಡುತ್ತಿದ್ದಾರೆ. ಸ್ವತಃ ತಮ್ಮ ಅಧ್ಯಯನದಿಂದ ತಮ್ಮ ವಿದ್ವತ್ತನ್ನು ಬೆಳೆಸಿಕೊಂಡು, ಎಷ್ಟೆಷ್ಟೋ ಕ್ಷೇತ್ರಗಳಲ್ಲಿ ಅವರು ತಮ್ಮ ಬಹುಶ್ರುತತ್ವವನ್ನು ಪ್ರಕಟಿಸಿದ್ದಾರೆ ಎಂದರೆ, ಅದನ್ನು ನೋಡಿದ, ಓದಿದ, ತಿಳಿದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಹಜವಾಗಿಯೇ ಅವರ ವಿಚಾರದಲ್ಲಿ ಇರುವಂತಹ ಗೌರವ ಇಮ್ಮಡಿಯಾಗುತ್ತದೆ” ಎಂದು ತಿಳಿಸಿದರು.
‘ಮುದ್ದಣ ಕೃತಿ ಕರಜನ’ ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ ಕೃತಿಯ ಮೊದಲ ಗೌರವ ಪ್ರತಿಯನ್ನು ಕರ್ನಾಟಕ ಸರ್ಕಾರದ ಮಾನ್ಯ ಸಭಾಪತಿಗಳಾದ ಯು.ಟಿ. ಖಾದರ್ ಅವರಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಇದರ ಪ್ರಧಾನ ಕಾರ್ಯದರ್ಶಿಯಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ, ಲೇಖಕ ಸತ್ಯಮಂಗಲ ಮಹಾದೇವ ಉಪಸ್ಥಿತರಿದ್ದರು.
ಕೃತಿಯ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ನೆರೆದಿದ್ದರು.