ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂಪಾಯಿ 25000/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಫೆಬ್ರವರಿ 2025ರಂದು ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.
1963ರಲ್ಲಿ ಎಸ್. ಮೊಯ್ದಿನ್ ಕುಂಞ ಹಾಗೂ ಬೀಫಾತಿಮ ಅವರ ಮಗನಾಗಿ ಸಂಪಾಜೆಯಲ್ಲಿ ಎಸ್. ಎಂ. ಜಬ್ಬಾರ್ ಅವರು ಜನಿಸಿದರು. ಬಾಲ್ಯದಲ್ಲಿಯೇ ಕತೆ ಓದುವುದು, ಕೇಳುವುದರ ಜೊತೆಗೆ ಯಕ್ಷಗಾನ ಕಲೆಯೂ ಕರಗತವಾಯಿತು. ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ‘ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ದನುಜ ಗುರುವಿನ ವೇಷ ಹಾಕುವುದರೊಂದಿಗೆ ಆರಂಭವಾದ ಇವರ ಕಲಾಜೀವನ ಮುಂದೆ ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡುವ ಮಟ್ಟಿಗೆ ಬೆಳೆಯಿತು. ಇದರೊಂದಿಗೆ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.
ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟ ಹಾಗೂ ದಿವಾಣ ಭೀಮ ಭಟ್ಟರ ಹಿಮ್ಮೇಳದಲ್ಲಿ ಮಾಲಿಂಗಜ್ಜನಂತಹ ಹಿರಿಯ ಕಲಾವಿದರೊಂದಿಗೆ ವಿವಿಧ ಪಾತ್ರಗಳನ್ನು ಮಾಡುವುದರೊಂದಿಗೆ ಅರ್ಥಧಾರಿಗಳಾದರು. ಬಲಿ, ಶುಕ್ರಾಚಾರ್ಯ, ಕಾರ್ತವೀರ್ಯ, ವಾಲಿ, ಸುಗ್ರೀವ, ರಾವಣ, ಪ್ರಹಸ್ತ, ಅಂಗದ, ಇಂದ್ರಜಿತು, ವೀರಮಣಿ, ಅರ್ಜುನ, ಕರ್ಣ, ಶಲ್ಯ, ಭೀಮ, ಕೌರವ, ಶ್ರೀ ಕೃಷ್ಣ, ಭೀಷ್ಮ, ಸುಧನ್ವ, ತಾಮ್ರಧ್ವಜ ಇತ್ಯಾದಿ ಪಾತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ.
ಕರ್ನಾಟಕ ಸರಕಾರದ ರೇಷ್ಮೆ ಇಲಾಖೆಯಲ್ಲಿ 28 ವರ್ಷಗಳ ಅವಧಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ನೇಮಕಗೊಂಡಿರುತ್ತಾರೆ.
ಮಂಗಳೂರು ‘ಸಂದೇಶ ಪ್ರತಿಷ್ಠಾನ ಪ್ರಶಸ್ತಿ’’ , ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ , ‘ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ಉಡುಪಿ ಕಲಾರಂಗದಿಂದ ಪ್ರಶಸ್ತಿ’, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ’ಗಳಂತಹ ಹತ್ತು ಹಲವಾರು ಪ್ರಶಸ್ತಿ ಸಮ್ಮಾನಗಳಿಗೆ ಇವರು ಭಾಜನರಾಗಿದ್ದಾರೆ.