ಮೂಲ್ಕಿ : ಕಾರ್ನಾಡಿನಲ್ಲಿ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕ.ಸಾ.ಪ. ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 27-12-2023ರಂದು ನಡೆಯಿತು. ಈ ಸಮ್ಮೇಳನ ಉದ್ಘಾಟಿಸಿದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು “ಆಧುನೀಕರಣದ ಭರಾಟೆಯಲ್ಲಿ ಅಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು” ಎಂದರು.
ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಮೂಲ್ಕಿ ತಾಲೂಕಿನಲ್ಲಿ ಒಂಭತ್ತು ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ಭಾಷೆಗೆ ದೊಡ್ಡ ಕೊಡುಗೆ ಸಿಕ್ಕಿದೆ. ಮೂಲ್ಕಿಯಲ್ಲಿ ಆಯುರ್ವೇದ ಗಿಡಗಳಿದ್ದ ಕಾರಣ ಮೂಲಿಕಾ ಪುರವಾಗಿ ಪ್ರಸಿದ್ದವಾಗಿದೆ, ಮೂಲ್ಕಿ ತಾಲೂಕು ಅನೇಕ ಕವಿಗಳನ್ನು ಕೊಟ್ಟಿದೆ. ಇಲ್ಲಿನ ಜನಪದ ಮೌಖಿಕ ಸಂಪತ್ತು, ಕಂಬಳಗಳು, ದೇವಾಲಯಗಳು, ಪತ್ರಿಕೆಗಳು ಮಹತ್ವದ್ದು. ಏಳಿಂಜೆ, ಸೀಮಂತೂರು, ಪೊಸ್ರಾಲು, ಪಾವಂಜೆ, ಕೊಡೆತ್ತೂರು, ಬಪ್ಪನಾಡು ಮುಂತಾದ ಕಡೆ ಸಿಕ್ಕಿರುವ ಶಾಸನಗಳು ಇಲ್ಲಿಯ ಐತಿಹಾಸಿಕ ಶ್ರೀಮಂತಿಕೆಯನ್ನು ತೋರಿಸುತ್ತವೆ. ಇಲ್ಲಿನ ಸೌಹಾರ್ದತೆ, ಆಲಡೆಗಳು, ಕಾಂತಾಬಾರೆ ಬೂದಾಬಾರೆಯಂತಹ ವೀರಪುರುಷರು ಎಲ್ಲವೂ ಅಧ್ಯಯನ ಯೋಗ್ಯವಾದ ಸಂಗತಿಗಳು. ಅತಿ ಕ್ರಿಯಾಶೀಲವಾಗಿರುವ ಸಾಮಾಜಿಕ ಜಾಲತಾಣಗಳು, ಪ್ರಸಾರ ಮಾಧ್ಯಮಗಳು, ದೃಶ್ಯಮಾಧ್ಯಮಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕೃತಿಗೆ ಕಾರಣವಾಗುವ ಬಗ್ಗೆ ಜಾಗೃತೆ ವಹಿಸಬೇಕು” ಎಂದು ಹೇಳಿದರು.
ದ.ಕ. ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಅವರು ಆಶಯದ ನುಡಿಗಳನ್ನಾಡಿದರು. ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮೂಲ್ಕಿ ತಾಲೂಕು ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಗುರುಶಾಂತಪ್ಪ, ಮಾಧವ ಎಂ.ಕೆ., ಮಂಜುನಾಥ್ ರೇವಣಕರ್, ಧನಂಜಯ ಕುಂಬ್ಳೆ, ವೇಣುಗೋಪಾಲ ಶೆಟ್ಟಿ, ಮೂಲ್ಕಿ ನ.ಪಂ. ಮುಖ್ಯಾಧಿಕಾರಿ ಇಂದು ಎಂ., ಕ.ಸಾ.ಪ.ದ ಡಾ. ಮುರಳಿ ಮೋಹನ ಚೂಂತಾರು, ದ.ಕ. ಕ.ಸಾ.ಪ. ಪದಾಧಿಕಾರಿಗಳಾದ ಮೋಹನ್ ದಾಸ್ ಸುರತ್ಕಲ್, ಸರ್ವೋತ್ತಮ ಅಂಚನ್, ಮುಲ್ಕಿ ಬಂಟರ ಸಂಘದ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ, ಮೊಗವೀರ ಪತ್ರಿಕೆಯ ಅಶೋಕ್ ಸುವರ್ಣ, ಕಸಾಪ ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ನಡೆದವು. ಡಾ. ಎನ್. ನಾರಾಯಣ ಶೆಟ್ಟಿ, ಗಣೇಶ್ ಕೊಲೆಕಾಡಿ, ಶ್ರೀಧರ್ ಡಿ.ಎಸ್. ಅವರ ಸಾಧನೆಯನ್ನು ಭಾವಗೀತೆಯಲ್ಲಿ ಆಶ್ವೀಜಾ ಉಡುಪ ಮತ್ತು ಇವರ ಯಕ್ಷಗಾನ ಪದ್ಯಗಳನ್ನು ದೇವರಾಜ ಆಚಾರ್ಯ ಇವರು ವಿಶಿಷ್ಟವಾಗಿ ಹಾಡಿದರು. ಪ್ರಕಾಶ್ ಸುವರ್ಣ ಮೂಲ್ಕಿ, ಸಂಜೀವ ದೇವಾಡಿಗ, ಭುಜಂಗ ಕವತ್ತಾರು ಕಾರ್ಯಕ್ರಮ ನಡೆಸಿಕೊಟ್ಟರು. ಮೂಲ್ಕಿ ತಾಲೂಕಿನ ಸಾಹಿತಿಗಳ ಬಗ್ಗೆ ಮಾತನಾಡಿದ ಕಟೀಲು ಕಾಲೇಜಿನ ವಿದ್ಯಾರ್ಥಿ ಅನಿಕೇತ್ ಉಡುಪ “ಇಲ್ಲಿನ ಹತ್ತಾರು ಸಾಹಿತಿಗಳು ಸಂಶೋಧನೆ, ಕಾವ್ಯ, ಕಾದಂಬರಿ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಲ್ಲಿನ ಪತ್ರಿಕೆಗಳು ಅನೇಕ ಸಾಹಿತಿಗಳನ್ನು ಬೆಳೆಸಿವೆ. ಪೇಜಾವರ ಸದಾಶಿವ ರಾವ್, ಡಾ. ವಸಂತ ಮಾಧವ, ಕೊ. ಅ. ಉಡುಪ, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಹೀಗೆ ಅನೇಕರು ಇಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ” ಎಂದರು. ಮೂಲ್ಕಿ ಜಯ ಕೆ. ಶೆಟ್ಟಿ, ಶ್ರೀಮತಿ ಶೀತಲ್ ಸುಶೀಲ್ ಮತ್ತು ಶಶೀಂದ್ರ ಕುಮಾರ್ ಪಾವಾಂಜೆ ಉಪಸ್ಥಿತರಿದ್ದು, ಶ್ರೀ ಮಾಧವ ಕೆರೆಕಾಡು ನಿರೂಪಿಸಿದರು.
ಮೂಲ್ಕಿ ಸರ್ಕಾರಿ ಶಾಲೆಗಳ ಅಳಿವು ಉಳಿವು ಬಗ್ಗೆ ಡಾ. ವಿ.ಕೆ. ಯಾದವ್ ವಿಷಯ ಮಂಡಿಸಿದರು, ಗಂಗಾಧರ ಶೆಟ್ಟಿ ಬರ್ಕೆ, ಸಂಧ್ಯಾ ಹೆಗಡೆ, ಜಯಲಕ್ಷ್ಮೀ ಟಿ. ನಾಯಕ್, ಶಿಕ್ಷಣ ಇಲಾಖೆಯ ಸಿ.ಡಿ. ಜಯಣ್ಣ ಉಪಸ್ಥಿತರಿದ್ದರು. ರಘುನಾಥ ಕಾಮತ್ ನಿರೂಪಿಸಿದರು. ಕವಿ ಸಮಯದಲ್ಲಿ ಶ್ರೀಮತಿ ಶಕುಂತಲಾ ಭಟ್, ವಿಲ್ಸನ್ ಕಟೀಲು, ದುರ್ಗಾಪ್ರಸಾದ ದಿವಾಣ, ರವೀಂದ್ರ ಪ್ರಭು, ಪುಷ್ಪರಾಜ್ ಚೌಟ ಭಾಗವಹಿಸಿದ್ದರು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ವಾಮನ ಕರ್ಕೇರ ಕೊಲ್ಲೂರು, ಡಾ. ಶ್ರೀಮಣಿ ಶೆಟ್ಟಿ, ವೈ.ಎನ್. ಸಾಲಿಯಾನ್, ಮೊಹಮ್ಮದ್ ಅಬೀಬುಲ್ಲಾ, ಉದಯ ಅಮೀನ್ ಮಟ್ಟು ಉಪಸ್ಥಿತರಿದ್ದರು.
ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಿಕ್ಷಣ ಪ್ರೋತ್ಸಾಹಕ ಸಿ.ಎ. ಚಂದ್ರಶೇಖರ ಶೆಟ್ಟಿ, ಕಿರುತರೆ ಚಲನಚಿತ್ರ ನಾಟಕದ ಕೃಷ್ಣಮೂರ್ತಿ ಕವಾತ್ತಾರ್, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಶ್ರೀ ಉದಯಕುಮಾರ ಹಬ್ಬು, ಪತ್ರಿಕೆ ಮತ್ತು ರಂಗಭೂಮಿಯ ಶ್ರೀ ಪರಮಾನಂದ ಸಾಲ್ಯಾನ್, ಯಕ್ಷಗಾನ ಕ್ಷೇತ್ರದ ಅಂಬರೀಶ್ ಶೆಟ್ಟಿಯವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ರಂಗನಟ ಕೃಷ್ಣಮೂರ್ತಿ ಕವತ್ತಾರು ಮಾತನಾಡಿ “ಸಾಹಿತ್ಯ ಕೇವಲ ಪುಸ್ತಕಗಳಿಗೆ ಮೀಸಲಾಗಿರದೆ ಕಲೆ ಹಾಗೂ ಸಾಂಸ್ಕೃತಿಕ ರಂಗಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ” ಎಂದರು. ಸಮ್ಮೇಳನಾಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್, ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ಉಪಸ್ಥಿತರಿದ್ದರು. ಜಿತೇಂದ್ರ ವಿ. ರಾವ್ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಜನರೆಡೆಗೆ ಸಾಹಿತ್ಯ ಪರಿಷತ್ತು ಸಾಗುವ ನಿಟ್ಟಿನಲ್ಲಿ ತಾಲೂಕು ಸಮ್ಮೇಳನಗಳು ಅಗತ್ಯವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಸಮ್ಮೇಳನ ಯಶಸ್ವಿಯಾಗಿದೆ. ಪರಿಷತ್ತಿಗೆ ಸದಸ್ಯರಾಗುವ ಮೂಲಕ ಎಲ್ಲರೂ ಕನ್ನಡ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಳ್ಳೋಣ” ಎಂದು ಹೇಳಿದರು.
ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿ ಆಸ್ರಣ್ಣ ಮಾತನಾಡಿ, “ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಕನ್ನಡ ಶಾಲೆಯನ್ನು ಉಳಿಸುವ ಪ್ರಯತ್ನವಾಗಬೇಕು. ಎಲ್ಲಾ ಸಮ್ಮೇಳನಗಳಲ್ಲೂ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರವನ್ನು ಎಚ್ಚರಿಸಬೇಕಾಗಿದೆ. 25 ವರ್ಷಗಳಿಂದ ಶಿಕ್ಷಕರನ್ನೇ ನೇಮಿಸದ ಸರಕಾರಗಳು ಸೈಕಲ್ ಮತ್ತಿತರ ಸವಲತ್ತುಗಳನ್ನು ನೀಡಿದರೂ ಅದು ವ್ಯರ್ಥ” ಎಂದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಕಟೀಲು ಕ್ಷೇತ್ರದ ಅರ್ಚಕ ಅನಂತ ಆಸ್ರಣ್ಣ, ಕಸಾಪ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ., ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾಯರು, ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಜೊಸ್ಸಿ ಪಿಂಟೊ, ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.
ಡಾ. ಎಚ್.ಬಿ. ಸುನಿತಾ ನಿರೂಪಿಸಿದರು. ಸಮ್ಮೇಳನಾಧ್ಯಕ್ಷಡಾ ಗಣೇಶ್ ಅಮೀನ್ ಸಂಕಮಾರ್ ಹಾಗೂ ಜಯಂತಿ ಸಂಕಮಾರ್ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು. ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸೆಲ್ಸಿಯಲ್ಲಿ ಕನ್ನಡದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು ಧನ್ಯವಾದ ಅರ್ಪಿಸಿ, ಶ್ರೀಮತಿ ಅರ್ಪಿತಾ ಶೆಟ್ಟಿ ನಿರೂಪಿಸಿದರು. ಸಮ್ಮೇಳನಕ್ಕೆ ಮೊದಲು ಕಾರ್ನಾಡು ಗಾಂಧಿ ಮೈದಾನದಿಂದ ಕಾಲೇಜು ಸಭಾಂಗಣದವರೆಗೆ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು. ಕೆ.ಪಿ. ರಾವ್ ಇವರು ಮಕ್ಕಳಿಗೆ ಪುಸ್ತಕಗಳನ್ನು ಉಚಿತವಾಗಿ ಹಂಚಿದರು. ಸಮ್ಮೇಳನದಲ್ಲಿ ಪುಸ್ತಕ ಮಳಿಗೆ, ಛಾಯಾಚಿತ್ರ ಪ್ರದರ್ಶನ, ವಿವಿಧ ಇಲಾಖೆಯ ಮಾಹಿತಿ ಮತ್ತು ಅನೇಕ ರೀತಿಯ ಮಳಿಗೆಗಳಿದ್ದವು. ಮುಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ರಾಷ್ಟ್ರ ಧ್ವಜಾರೋಹಣಗೈದರು. ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜ, ತಾಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಕನ್ನಡ ಧ್ವಜಾರೋಹಣ ನೆರವೇರಿಸಿದರು.