ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ದಿನಾಂಕ 08 ಫೆಬ್ರವರಿ 2025ರಂದು ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಿತು.
ಈ ಸಮ್ಮೇಳನವನ್ನು ಉದ್ಘಾಟನೆಗೊಳಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ “ಕನ್ನಡ ನಾಡಿನ ಸಾಹಿತಿಗಳು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಕನ್ನಡಕ್ಕೆ ಸಾಕಷ್ಟು ಮಾನ್ಯತೆ ಸಿಕ್ಕಿದ ಹಾಗೆ ತುಳುವಿಗೂ ಸಿಗಬೇಕು. ತುಳು ಉತ್ಸವಗಳು ನಡೆಯಬೇಕು. ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶ್ರೀಧರ ಡಿ.ಎಸ್. ಇವರು ಮಾತನಾಡಿ “ಕನ್ನಡವು ಕಲಿಕೆಯ ಭಾಷೆಯಾಗಿದ್ದು, ಆಂಗ್ಲ ಭಾಷೆಯು ಆವರಿಸಿಕೊಂಡು ಕನ್ನಡವು ಸಮಗ್ರವಾಗಿ ಹಿನ್ನೆಲೆಗೆ ಸರಿಯುತ್ತಿರುವ ವಿಷಾದದ ಸನ್ನಿವೇಶದಲ್ಲಿ ನಾವಿದ್ದೇವೆ. ಕನ್ನಡವನ್ನು ಸ್ಮರಿಸಿ, ಉಳಿಸಿ ಬೆಳೆಸೋಣ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದರು.
ಕನ್ನಡ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಸಾಲಂಕೃತ ಮೆರವಣಿಗೆಗೆ ಮೂರು ಕಾವೇರಿಯಲ್ಲಿ ಉದ್ಯಮಿ ಶ್ರೀನಿವಾಸ ಆಚಾರ್ಯ ಇವರು ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್., ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಮೂಲ್ಕಿ ತಾಲೂಕು ಕ.ಸಾ.ಪ. ಅಧ್ಯಕ್ಷ ಮಿಥುನ ಕೊಡೆತ್ತೂರು ಇವರುಗಳು ಕ್ರಮವಾಗಿ ರಾಷ್ಟ್ರಧ್ವಜ, ಪರಿಷತ್ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ಮಾಡಿದರು. ಪೊಂಪೈ ಕಾಲೇಜಿನ ಸಂಚಾಲಕ ರೆ.ಫಾ. ಓಸ್ವಲ್ಡ್ ಮೊಂತೆರೋ ವಸ್ತು ಪ್ರದರ್ಶನ ಉದ್ಘಾಟಿಸಿದರು.
ವಿಚಾರಗೋಷ್ಠಿಯಲ್ಲಿ ‘ಮೂಲ್ಕಿ ತಾಲೂಕಿನಲ್ಲಿ ಯಕ್ಷಗಾನ ವೈಭವ’ ಎಂಬ ವಿಷಯ ಬಗ್ಗೆ ವಿಚಾರ ಮಂಡಿಸಿದ ದೇವಿಪ್ರಕಾಶ್ ರಾವ್ ಕಟೀಲು “ಕನ್ನಡ ಭಾಷೆ, ಸಾಹಿತ್ಯ ಮತ್ತು ಯಕ್ಷಗಾನಕ್ಕೆ ಮೂಲ್ಕಿ ತಾಲೂಕಿನ ಕೊಡುಗೆ ಅನನ್ಯವಾಗಿದ್ದು. ಮೂಲ್ಕಿ ತಾಲೂಕಿನಲ್ಲಿ ಕಟೀಲು, ಮೂಲ್ಕಿ, ಬಪ್ಪನಾಡು, ಪಾವಂಜೆ, ಸಸಿಹಿತ್ಲು ಹೀಗೆ ಅನೇಕ ಯಕ್ಷಗಾನ ಮೇಳಗಳಿವೆ. ಮಕ್ಕಳ ಮೇಳಗಳಿವೆ. ಪ್ರಸಂಗಕರ್ತರಿದ್ದಾರೆ. ತಾಳಮದ್ದಲೆ, ಯಕ್ಷಗಾನದ ಪ್ರಭಾವ ಇಲ್ಲಿ ಬಹಳಷ್ಟಿದೆ” ಎಂದು ಹೇಳಿದರು. ಪ್ರಕಾಶ ಸುವರ್ಣ, ಐಕಳ ಜಯಪಾಲ ಶೆಟ್ಟಿ, ಸುನಿಲ್ ಅಂಚನ್ ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್ ವೇದಿಕೆಯಲ್ಲಿದ್ದರು. ಶ್ರೀ ಕೃಷ್ಣರಾಜ್ ಭಟ್ ನಿರೂಪಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ’ ಗೋಷ್ಟಿಯಲ್ಲಿ ನಡುಗೋಡು ಶಾಲೆಯ ವಿದ್ಯಾರ್ಥಿ ಯಕ್ಷ, ಮೂಲ್ಕಿ ಸರಕಾರಿ ಕಾಲೇಜಿನ ಲಕ್ಷ್ಮೀ, ಐಕಳ ಪೊಂಪೈ ಕಾಲೇಜಿನ ಸನ್ನಿಧಿ ವಿಷಯ ಮಂಡಿಸಿದರು. ವೇದವ್ಯಾಸ ಉಡುಪ ಉಪಸ್ಥಿತರಿದ್ದರು.
ಈ ಸಮ್ಮೇಳನದಲ್ಲಿ ಓದುವ ಸೊಬಗು, ಕೇಳುವ ಸೊಗಸು ವಿಚಾರಗೋಷ್ಟಿಯಲ್ಲಿ ಮಾತನಾಡಿದ ಡಾ. ರುಡಾಲ್ಫ್ ನೊರೊನ್ಹ “ಜ್ಞಾನಾರ್ಜನೆಯ ಆಸಕ್ತಿ ಇರುವವರಿಗೆ ಓದುವ ಆಸಕ್ತಿ ಸಹಜ. ಆಧುನಿಕ ಕಾಲದ ಈ ಧಾವಂತದಲ್ಲಿ ಪುಸ್ತಕ ಓದುವುದು ಅಸಾಧ್ಯವಾಗಬಹುದು. ಸಮಯದ ಕೊರತೆ ಇರಬಹುದು. ಅಂತಹವರಿಗೆ ಕೇಳುವ ಅವಕಾಶಕ್ಕಾಗಿ ಆಡಿಬಲ್, ಯೂಟ್ಯೂಬ್, ಫೋಡ್ ಕಾಸ್ಟ್, ಆಡಿಯೋ ಬುಕ್, ವಾಚ್, ಮೊಬೈಲ್ ಫೋನ್ ಹೀಗೆ ತಂತ್ರಜ್ಞಾನದಿಂದ ಜ್ಞಾನವನ್ನು ಕೇಳಿಯೂ ಹೆಚ್ಚಿಸಿಕೊಳ್ಳುವ ವ್ಯವಸ್ಥೆಗಳು ಬಂದಿವೆ. ಓದುವಾಗ ಗಮನ ಸಂಪೂರ್ಣ ಪುಸ್ತಕದಲ್ಲಿರಬೇಕು. ಸಾಹಿತ್ಯ ಕೇಳುವಾಗ ಹಾಗಲ್ಲ, ಕೆಲಸ ಮಾಡುತ್ತ ಮಾಡುತ್ತ ಕೇಳಬಹುದು. ವಾಹನ ಚಲಾಯಿಸುವಾಗಲೂ ಭಾಷಣ, ಉಪನ್ಯಾಸಗಳನ್ನು ಕೇಳುವ ಸುಖ ಚೆನ್ನಾಗಿರುತ್ತದೆ” ಎಂದು ಹೇಳಿದರು.
ವಿಶ್ವನಾಥ ಕೆ. ಕವತ್ತಾರು ಮಾತನಾಡಿ “ಓದುವ ಪ್ರವೃತ್ತಿ ನಮ್ಮ ಜ್ಞಾನವನ್ನು, ಬೌದ್ಧಿಕ ಸಂವೇದನಾಶೀಲತೆಯನ್ನು ಹೆಚ್ಚಿಸುತ್ತದೆ” ಎಂದರು. ಪಾಂಡುರಂಗ ಭಟ್ ಮಾತನಾಡಿ “ಹೈಸ್ಕೂಲಿನಲ್ಲಿ ಪತ್ತೇದಾರಿ ಕಥೆಗಳನ್ನು ಓದುವ ಮೂಲಕ ಓದುವ ಹವ್ಯಾಸ ಆರಂಭಿಸಿದೆ. ಆನಂದಕ್ಕೆ ಓದು ನಿಜ. ನಿದ್ದೆಗೂ ಓದುವಿಕೆ ಬೇಕು. ಭೈರಪ್ಪರ ಎಲ್ಲ ಪುಸ್ತಕಗಳನ್ನೂ ಓದಿದೆ. ಇತ್ತೀಚಿಗೆ ಅವರನ್ನು ಕಂಡು ಸಂಭ್ರಮಿಸಿದ್ದೇನೆ. ಓದುವ ಸುಖ ಓದಿದವರಿಗೇ ಗೊತ್ತು” ಎಂದರು. ಡಾ. ಸೋಂದಾ ಭಾಸ್ಕರ ಭಟ್ ಸಮನ್ವಯದ ಮಾತುಗಳನ್ನಾಡಿದರು. ಕೆ.ಎ. ಅಬ್ದುಲ್ಲ, ಡೇನಿಯಲ್ ದೇವರಾಜ್, ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಉಪಸ್ಥಿತರಿದ್ದರು. ಧನಲಕ್ಷ್ಮೀ ಡಿ. ಶೆಟ್ಟಿಗಾರ್ ನಿರೂಪಿಸಿದರು.
‘ಚಿತ್ರ ಮತ್ತು ಸಾಹಿತ್ಯ : ಪ್ರಭಾವ ಪ್ರತಿಫಲನ’ ಗೋಷ್ಟಿಯಲ್ಲಿ ಡಾ. ಇ. ವಿಕ್ಟರ್ ವಾಸ್ “ಸಾಹಿತ್ಯದ ಸೃಷ್ಟಿಗೆ ಚಿತ್ರಗಳು ಹಾಗೂ ಛಾಯಚಿತ್ರಗಳು ಪ್ರೇರಣೆ ನೀಡಿ ಉತ್ತಮ ಸಾಹಿತ್ಯಗಳು ಕವನಗಳು ಬರಹಗಳು ರಚಿಸಲ್ಪಟ್ಟಿವೆ” ಎಂದು ಹೇಳಿ ಚಿತ್ರ ಛಾಯಾಚಿತ್ರಗಳು ಸಾಹಿತ್ಯಕ್ಕೆ ಹೇಗೆ ಪ್ರೇರಣೆ ಎಂಬುದನ್ನು ವಿವರಿಸಿದರು. ರಾಮದಾಸ ಶೆಣೈ ಉಪಸ್ಥಿತರಿದ್ದರು.
ಸಾಹಿತಿ ಶ್ರೀಧರ ಡಿ.ಎಸ್. ಅವರ ನೂತನ ಕೃತಿ ‘ಪುರಾಣ ಲೋಕದ ವಿಶಿಷ್ಟ ಪಾತ್ರಗಳು’, ಉದಯ ಕುಮಾರ್ ಹಬ್ಬುರವರ ರವೀಂದ್ರನಾಥ್ ಟಾಗೋರ್ ರವರ ಮೂಲಕೃತಿಯನ್ನು ಅನುವಾದಿಸಿ ಪ್ರಕಟಿಸಿದ ‘ಚದುರಂಗ’ ಮತ್ತು ‘ಈ ಮನೆಯು ಆ ಜಗವು’ ಎಂಬ ಕೃತಿಗಳನ್ನು ಖ್ಯಾತ ಬರಹಗಾರ ಅಬ್ದುಲ್ ರಶೀದ್ ಪುಸ್ತಕದ ಕಪಾಟಿನಿಂದ ಕೃತಿಯನ್ನು ಆರಿಸುವ ಮೂಲಕ ಬಿಡುಗಡೆಗೊಳಿಸಿದರು. ಡಾ. ಎಂ.ಪಿ. ಶ್ರೀನಾಥ್, ಕ.ಸಾ.ಪ.ದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಲ್ಕಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಗಣೇಶ ಅಮೀನ್ ಸಂಕಮಾರ್, ದ. ಕ. ಹಾಲು ಉತ್ಪಾದಕರ ಒಕ್ಕೂಟದ ಕೆ.ಪಿ. ಸುಚರಿತ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಪೃಥ್ವಿರಾಜ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ವಿನಯಾಚಾರ್, ಮಾಧವ ಎಂ.ಕೆ. ರೆ.ಫಾ. ಓಸ್ವಾಲ್ಡ್ ಮೊಂತೆರೋ, ಮಿಥುನ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿ ಅಧ್ಯಕ್ಷ ಪೃಥ್ವಿರಜ್ ಆಚಾರ್ಯ ಸ್ವಾಗತಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿಲ್ಡಾ ಡಿ’ಸೋಜ ವಂದಿಸಿ, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತು ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು.