ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಆಕೃತಿ ಆಶ್ರಯ ಪಬ್ಲಿಕೇಷನ್ಸ್ ಇವರ ಸಹಯೋಗದಲ್ಲಿ ಲೇಖಕಿ ಸುಖಲಾಕ್ಷಿ ವೈ. ಸುವರ್ಣ ಇವರ ‘ಮುಂಬಯಿ ಮತ್ತು ಮಹಿಳೆ’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 24 ಡಿಸೆಂಬರ್ 2024 ರಂದು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಎಸ್. ಡಿ. ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಳಾ ಟಿ. ಶೆಟ್ಟಿ ಮಾತನಾಡಿ “ನಮ್ಮೂರಿನ ಸಮಾಜದಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳನ್ನು ನಾವು ಕಂಡಿದ್ದೇವೆ ಆದರೆ ಮುಂಬಯಿ ಮಹಿಳೆಯರು ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎನ್ನುವ ವಿಚಾರವನ್ನು ಕೃತಿಯ ಮೂಲಕ ಸುಖಲಾಕ್ಷಿ ವೈ. ಸುವರ್ಣ ತಿಳಿಸಿದ್ದಾರೆ.” ಎಂದರು.
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀ ನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಂಬಯಿ ವಿ. ವಿ. ಇದರ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ್ ಕೃತಿ ಲೋಕಾರ್ಪಣೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃತಿ ಪರಿಚಯ ಮಾಡಿದ ಹಿರಿಯ ಸಾಹಿತಿ ಸಂಶೋಧಕ ಡಾ. ಕೊಳ್ಳಪ್ಪೆ ಗೋವಿಂದ ಭಟ್ “‘ಮುಂಬಯಿ ಮತ್ತು ಮಹಿಳೆ’ ಕೃತಿ ಸಾಕಷ್ಟು ಪೂರ್ವ ತಯಾರಿಯೊಂದಿಗೆ ರಚನೆಯಾದ ಕೃತಿಯಾಗಿದ್ದು, ಸಂಶೋಧಕರಿಗಿಂತಲೂ ಹೆಚ್ಚಿನ ಕ್ಷೇತ್ರ ಕಾರ್ಯವನ್ನು ಕೃತಿಕರ್ತೆ ಮಾಡಿದ್ದಾರೆ. ಇದು ಸಂಶೋಧಕರಿಗೆ ಆಕರ ಗ್ರಂಥವಾಗಿದೆ. ಮುಂಬಯಿ ನಗರದ ಜತೆಗೆ ಅಲ್ಲಿನ ಸಂಸ್ಕೃತಿ, ಇತಿಹಾಸ, ಜನ ಜೀವನದ ಬಗ್ಗೆ ವಿವರಣೆ ಈ ಕೃತಿಯಲ್ಲಿದೆ.” ಎಂದು ಹೇಳಿದರು.
ಲೇಖಕಿ ಸುಖಲಾಕ್ಷಿ ವೈ. ಸುವರ್ಣ ಮಾತನಾಡಿ “30 ವರ್ಷದ ಮುಂಬಯಿ ಬದುಕು, ಅಲ್ಲಿನ ಮಹಿಳೆಯರ ಜೀವನದ ಕುರಿತು ನಮ್ಮ ಜನರಿಗೆ ಮಾಹಿತಿ ನೀಡಬೇಕು ಎನ್ನುವ ತುಡಿತದಿಂದ ರಚನೆಯಾದ ಕೃತಿಯೇ ‘ಮುಂಬಯಿ ಮತ್ತು ಮಹಿಳೆ’. ಮುಂಬಯಿ ಮಹಿಳೆಯ ಬದುಕಿನ ಕುರಿತ ಪ್ರಥಮ ಕೃತಿ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಈ ಕೃತಿಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಕೆಲಸವೂ ಶೀಘ್ರ ನಡೆಯಲಿದೆ.” ಎಂದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ, ಹಿರಿಯ ಲೇಖಕಿ ಬಿ. ಎಂ. ರೋಹಿಣಿ, ‘ನಮ್ಮ ಕುಡ್ಲ’ ವಾಹಿನಿಯ ನಿರ್ದೇಶಕರಾದ ಲೀಲಾಕ್ಷಾ ಬಿ.ಕರ್ಕೇರ, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆಯಾದ ಸುಮಲತಾ ಎನ್. ಸುವರ್ಣ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆಯಾದ ಚಂಚಲಾ ತೇಜೋಮಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ ರೇವಣ್ಕರ್, ನಿವೃತ್ತ ಸರಕಾರಿ ಅಭಿಯೋಜಕಿ ರೋಹಿಣಿ ಸಾಲ್ಯಾನ್, ಪ್ರಕಾಶಕ ಕಲ್ಲೂರು ನಾಗೇಶ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ರೇಖಾ ಶಂಕರ್ ಸ್ವಾಗತಿಸಿ, ಅಕ್ಷತಾ ರಾಜ್ ಪೆರ್ಲ ನಿರೂಪಿಸಿ, ರೇಖಾ ಶೆಟ್ಟಿ ವಂದಿಸಿದರು.