ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕಲೀನಾ ಕ್ಯಾಂಪಸ್ ನ ಜೆ.ಪಿ, ನಾಯಕ್ ಸಭಾ ಭವನದಲ್ಲಿ ಕನ್ನಡ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳೊಂದಿಗೆ ‘ಸಾಹಿತ್ಯ ಸಂವಾದ’ ಕಾರ್ಯಕ್ರಮವು ದಿನಾಂಕ 21-07-2023ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ “ಯಾವುದೇ ಪದಬಳಕೆಯನ್ನು ವಿವಿಧ ಸನ್ನಿವೇಶಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಮಾಡುವಾಗ ಯೋಚಿಸಿ ಮಾಡಬೇಕು. ಕತೆ, ಕಾದಂಬರಿ, ಪ್ರಬಂಧ ಅಥವಾ ಇತರ ಯಾವುದೇ ಲೇಖನಗಳನ್ನು ಬರೆದಾಗ ಅದನ್ನು ಪುನಃ ಪುನಃ ಪರಿಷ್ಕರಿಸಬೇಕಾದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಾವು ಭಾಷೆಯ ಸರಿಯಾದ ಅಧ್ಯಯನವನ್ನು ಮಾಡಿರಬೇಕು. ಬರಹಗಾರರು ಕಲ್ಪನಾಶೀಲರಾಗಿರಬೇಕು ಮತ್ತು ತತ್ವಶಾಸ್ತ್ರವನ್ನು ತಿಳಿದಿರಬೇಕು. ಕಥೆಯ ಮೂಲಕ ತತ್ವಶಾಸ್ತ್ರದ ಬಗ್ಗೆ ಹೇಳಲು, ತಿಳಿಯಲು ಸಾಧ್ಯ. ವೇದೋಪನಿಷತ್ತುಗಳ ಕಾಲದಿಂದಲೂ ತತ್ವಜ್ಞಾನವನ್ನು ಋಷಿಮುನಿಗಳು ಕಥೆಗಳ ಮೂಲಕವೇ ಹೇಳುತ್ತಾ ಬಂದರು. ಕಥೆ ಇಲ್ಲದೆ ಹೋದರೆ ಗಂಭೀರ ತತ್ವಗಳನ್ನು ಹೇಳುವುದಕ್ಕೆ ಆಗಲಾರದು. ಕಾದಂಬರಿಗಳಲ್ಲಿ ವಾಸ್ತವಾಂಶಗಳ ಜೊತೆಗೆ ಕಲ್ಪನಾಶಕ್ತಿಯೂ ಮುಖ್ಯ, ಆಳವಾದ ಚಿಂತನೆ, ಕಲ್ಪನೆ ಇವೆರಡೂ ಅಧ್ಯಯನದಿಂದ ಮಾತ್ರ ಸಾಧ್ಯ. ಕಾದಂಬರಿಗೆ ತೂಕ ಬರಬೇಕಾದರೆ ಅದಕ್ಕೆ ಆಳವಾದ ಚಿಂತನೆ ಬೇಕು” ಎಂದು ಅಭಿಪ್ರಾಯಪಟ್ಟರು.
ಅವರು ಇದೇ ಸಂದರ್ಭದಲ್ಲಿ ಡಾ. ಜಿ.ಎನ್. ಉಪಾಧ್ಯ ಹಾಗೂ ಡಾ. ಉಮಾ ರಾಮ ರಾವ್ ಅವರು ಸಂಪಾದಿಸಿ ಮುಂಬೈ ವಿವಿ ಕನ್ನಡ ವಿಭಾಗದ ಮೂಲಕ ಪ್ರಕಟಿಸಿದ ‘ಭಾಷೆಗಳ ಗಡಿ ಗೆದ್ದ ಭಾರತೀಯ’ ಗೌರವ ಗಂಥವನ್ನು ಡಾ. ಭೈರಪ್ಪನವರಿಗೆ ಸಮರ್ಪಿಸಲಾಯಿತು. ಡಾ. ಜಿ.ಎನ್. ಉಪಾಧ್ಯ ವಿರಚಿತ ‘ಮುಂಬಯಿ ಕನ್ನಡ ಪರಿಸರ’ ಗ್ರಂಥವನ್ನು ಶ್ರೀಯುತ ಅಶೋಕ ಸುವರ್ಣ ಅವರು ಬಿಡುಗಡೆಗೊಳಿಸಿದರು. ಡಾ. ಉಮಾ ರಾಮ ರಾವ್ ಬರೆದ ಕೃತಿ ‘ಸಂಶೋಧನೆಯಲ್ಲಿ ಶಿಸ್ತು ಮತ್ತು ನೈತಿಕ ಪ್ರಜ್ಞೆ’ ಹಾಗೂ ಕಲಾ ಭಾಗ್ವತ್ ಅವರ ‘ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ’ ಕೃತಿಗಳನ್ನು ಶ್ರೀಯುತ ಎಸ್.ಎಲ್. ಭೈರಪ್ಪ ಅವರು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಅವರು ಅತಿಥಿಗಳನ್ನು ಸ್ವಾಗತಿಸುತ್ತಾ, “ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿರುವ ಭೈರಪ್ಪನವರು ಓದುಗರನ್ನು ಚುಂಬಕ ಶಕ್ತಿಯಂತೆ ಸೆಳೆಯುವ ಕಾದಂಬರಿಕಾರರು, ತಮ್ಮ ಮಾತು- ಕೃತಿಗಳ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಮಾಡಿದವರು, ನಮ್ಮ ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಜಗದಗಲ ಪಸರಿಸಿದ ಸಾಹಿತಿ ಭೈರಪ್ಪನವರು. ವಿದ್ವಾಂಸರೆಂದರೆ, ಸಾಹಿತಿಗಳೆಂದರೆ ಹೀಗಿರುತ್ತಾರೆ ಎಂಬುದಕ್ಕೆ ಮಾದರಿಯಾದ ಅವರು ದೊಡ್ಡ ಓದುಗ ವರ್ಗವನ್ನು ಬೆಳೆಸಿದ, ತಾರಾ ಮೆರುಗನ್ನು ಹೊಂದಿರುವ ಶ್ರೇಷ್ಟ ಲೇಖಕರು. ಡಾ.ಭೈರಪ್ಪನವರ ಕೃತಿಗಳ ಆಳ, ಅಗಲ, ವೈಭವಗಳ ಕುರಿತು ಉಪನ್ಯಾಸ ನೀಡುವ ಮರಾಠಿಗರಾದ ಡಾ. ಸುಪ್ರಿಯಾ ಸಹಸ್ರಬುದ್ಧೆ ಅವರೇ ಇದಕ್ಕೆ ಸಾಕ್ಷಿ” ಎಂಬುದಾಗಿ ಅಭಿಪ್ರಾಯಪಟ್ಟರು. ಡಾ.ಭೈರಪ್ಪನವರನ್ನು ಮುಂಬೈಗೆ ಬರಮಾಡಿಕೊಂಡು ಅವರ ಉಪಸ್ಥಿತಿಗೆ ಕಾರಣಕರ್ತರಾದ ಉಮಾ ರಾಮರಾವ್ ಅವರಿಗೆ ಅಭಿವಂದಿಸಿದರು. ಆಶೋಕ ಸುವರ್ಣ ಅವರಿಗೆ ಸ್ವಾಗತ ಕೋರಿದರು.
ಸಾಹಿತಿ, ವಿಮರ್ಶಕರಾದ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಎಂಬ ವಿಷಯದ ಕುರಿತು ‘ವಿಶೇಷ ಉಪನ್ಯಾಸ’ ನೀಡಿದರು. ಡಾ.ಭೈರಪ್ಪ ಅವರ ಕಾದಂಬರಿಗಳ ಕುರಿತು ಮಾತನಾಡಿದ ಅವರು ‘ದೈತ್ಯ ಪ್ರತಿಭೆ’ ಎಂಬ ಪದ ಭೈರಪ್ಪನನರಿಗೆ ಸರಿಯಾಗಿ ಒಪ್ಪುತ್ತದೆ. ಅವರು ಬರಿಯ ಕನ್ನಡದ ಸಾಹಿತಿಯಲ್ಲ. ಅವರು ವಿಶ್ವಸಾಹಿತಿ ಎಂಬ ಉಪಾಧಿಗೆ ಪಾತ್ರರಾದವರು. ಪ್ರತಿಯೊಬ್ಬ ಸಾಹಿತಿಯೂ ತಾನು ಬರೆಯುವಾಗ ಒಂದು ವೃತ್ತವನ್ನು ನಿರ್ಮಿಸಿಕೊಂಡು ಅದರೊಳಗೆ ಬರೆಯುತ್ತಿರುತ್ತಾನೆ. ಆದರೆ, ಭೈರಪ್ಪನವರು ಆ ವೃತ್ತವನ್ನು ದಾಟಿ ವಿಶ್ವಮಾನ್ಯರಾಗಿ ಜನರನ್ನು ತಲುಪಿದವರು. ಅವರ ಕೃತಿಗಳಲ್ಲಿ ಸಾರ್ವತ್ರಿಕ ವಿಷಯಗಳು ಅಡಕವಾಗಿರುವುದರಿಂದ ಲೋಕದೆಲ್ಲೆಡೆಯ ಜನರನ್ನು ತಲುಪಲು ಸಾಧ್ಯವಾಯಿತು. ಅವರ ಕಾದಂಬರಿಗಳಲ್ಲಿ ವೈವಾಹಿಕ, ಕೌಟುಂಬಿಕ, ಸಾಮಾಜಿಕ, ಕರುಣೆ, ಮಾನವತೆ ಇತ್ಯಾದಿ ಹಲವಾರು ಅಂಶಗಳಿವೆ. ಅವರು ಕೇವಲ ಕನ್ನಡದ ಸಾಹಿತಿಯಲ್ಲ, ಅವರು ನಮ್ಮೆಲ್ಲರ ಸಾಹಿತಿ. ನೋಬೆಲ್ ಪ್ರಶಸ್ತಿ ಪಡೆಯಲು ಯೋಗ್ಯರಾದವರು ಎಂಬುದಾಗಿ ಭೈರಪ್ಪನವರ ಬರವಣಿಗೆ, ಚಿಂತನೆಗಳ ವಿಶೇಷತೆಯನ್ನು ಎತ್ತಿ ಹೇಳಿದರು.
ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮ ರಾವ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕಾರರಾದ ಸುಪ್ರಿಯಾ ಸಹಸ್ರಬುದ್ಧೆ ಅವರನ್ನು ಪರಿಚಯಿಸುತ್ತ “ಡಾ. ಸಹಸ್ರಬುದ್ಧೆ ಅವರ ವಿದ್ವತ್ತು ಮತ್ತು ಡಾ.ಭೈರಪ್ಪನವರ ಕೃತಿಗಳನ್ನು ಓದಿ ಅವರು ಮಾಡಿದ ಪ್ರೌಢ ವಿಮರ್ಶೆಗಳು ಬೆರಗು ಮೂಡಿಸುವಂತಹುದು. ಸರಳ, ನಿಸ್ಪ್ರಹ ವ್ಯಕ್ತಿತ್ವದ ಅವರು ಭೈರಪ್ಪನವರ ಕಾದಂಬರಿಗೆ ಸರಿಸಾಟಿಯಾಗುವಂತಹ ಕಾದಂಬರಿಗಳು ಮರಾಠಿಯಲ್ಲಿಲ್ಲ ಎಂದು ಒಪ್ಪಿಕೊಳ್ಳುವ ಮುಕ್ತ ಮನಸ್ಸು, ಹೃದಯ ವೈಶಾಲ್ಯತೆ ಉಳ್ಳವರು” ಎಂದರು.
ಡಾ. ಎಸ್.ಎಲ್. ಭೈರಪ್ಪ, ಡಾ. ಸುಪ್ರಿಯಾ ಸಹಸ್ರಬುದ್ಧೆ, ಡಾ. ಜಿ.ಎನ್. ಉಪಾಧ್ಯ, ಡಾ. ಉಮಾ ರಾಮ ರಾವ್ ಅವರನ್ನು ಶಾಲು ಹೊದಿಸಿ, ಫಲಗಳನ್ನಿತ್ತು ಗೌರವಿಸಲಾಯಿತು. ಡಾ. ಭೈರಪ್ಪ ಅವರ ಕೃತಿಗಳ ಆಯ್ದ ಭಾಗಗಳನ್ನು ಕಂಠದಾನ ಕಲಾವಿದರಾದ ಸುರೇಂದ್ರ ಕುಮಾರ್ ಮಾರ್ನಾಡ್ ಮತ್ತು ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ವಾಚಿಸಿದರು. ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ಮುಂಬೈಯ ಅನೇಕ ಗಣ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾ ರಾಮಕೃಷ್ಣ ಅವರು ತಾಂತ್ರಿಕ ಸಹಕಾರ ನೀಡಿದರು.