ಮಂಗಳೂರು : ಕಟೀಲು ಮೇಳಗಳ ಕಲಾವಿದರಿಂದ ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್ ಇವರಿಗೆ ‘ಮಂಡೆಚ್ಚ ಪ್ರಶಸ್ತಿ ಪ್ರದಾನ’ ಹಾಗೂ ‘ಕುಬಣೂರು ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ : 15-07-2023ರಂದು ಸಂಜೆ ಗಂಟೆ 4ಕ್ಕೆ ಕಟೀಲು ಸರಸ್ವತೀ ಸದನದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ವಾಸುದೇವ ಆಸ್ರಣ್ಣ, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀ ಸನತ್‌ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಶ್ರೀ ಐಕಳ ಗಣೇಶ ಶೆಟ್ಟಿ ಮುಂಬೈ, ಶ್ರೀ ದೊಡ್ಡಯ್ಯ ಮೂಲ್ಯ ಕಟೀಲು ಹಾಗೂ ಶ್ರೀ ಶ್ರೀಕಾಂತ ಕುಬಣೂರು ಉಪಸ್ಥಿತರಿರುವರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತರಾಗಿದ್ದ ದಾಮೋದರ ಮಂಡೆಚ್ಚ ಇವರ ಹೆಸರಿನಲ್ಲಿ ನೀಡಲಾಗುವ ಈ ವರುಷದ ‘ಮಂಡೆಚ್ಚ ಪ್ರಶಸ್ತಿ’ಯನ್ನು ಮಂಡೆಚ್ಚರ ಒಡನಾಡಿ ಖ್ಯಾತ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ನೀಡಿ ಗೌರವಿಸಲಾಗುವುದು. ಇವರು ಸುಂಕದಕಟ್ಟೆ, ಕರ್ನಾಟಕ, ಕದ್ರಿ, ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ನಾಲ್ಕು ದಶಕಗಳಿಂದ ಸಮರ್ಥ ಮದ್ಲೆಗಾರರಾಗಿ ಗುರುತಿಸಲ್ಪಟ್ಟವರು. ಕಟೀಲು ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಪ್ರಯೋಜಕತ್ವದ ಈ ಪ್ರಶಸ್ತಿಯು ರೂ. ಹತ್ತು ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಖ್ಯಾತ ಭಾಗವತ, ಪ್ರಸಂಗಕರ್ತ ಕುಬಣೂರು ಶ್ರೀಧರ ರಾವ್ ಇವರ ಸಂಸ್ಮರಣೆಯನ್ನೂ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಕಟೀಲು ಮೇಳಗಳ ಕಲಾವಿದರಿಂದ ಕೃಷ್ಣ ಸಂಧಾನ, ದುಶ್ಯಾಸನ ವಧೆ, ಸೈಂಧವ ವಧೆ ಹಾಗೂ ಕರ್ಣಪರ್ವ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಾಮೋದರ ಮಂಡೆಚ್ಚರು 1956ರಲ್ಲಿ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ನಾಟಕ ಸಭಾದಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿ, ಇರಾ ಸೋಮನಾಥೇಶ್ವರ ಮೇಳ, ರಾಜರಾಜೇಶ್ವರಿ ಮೇಳ ಹಾಗೂ ಕರ್ನಾಟಕ ಮೇಳದಲ್ಲಿ ನಿರಂತರವಾಗಿ ಭಾಗವತರಾಗಿ ಸೇವೆ ಸಲ್ಲಿಸಿದರು. ಯಕ್ಷಗಾನದ ಭಾಗವತಿಕೆ ಮತ್ತು ಹಿಮ್ಮೇಳ ನುಡಿಸುವಿಕೆಯಲ್ಲಿ ಪರಿಣತರಾಗಿದ್ದ ಇವರು ವೇಷಗಾರಿಕೆ, ಅರ್ಥಗಾರಿಕೆಗಳೆಂಬ ಎಲ್ಲಾ ವಿಭಾಗದಲ್ಲೂ ಪರಿಪೂರ್ಣ ಜ್ಞಾನವುಳ್ಳವರಾಗಿದ್ದರು. ನಾಟಕಗಳಲ್ಲಿ ಪಾತ್ರವಹಿಸುವುದರೊಂದಿಗೆ ಹಾಡುಗಾರಿಕೆಯನ್ನೂ ಮಾಡುತ್ತಿದ್ದರು.
ಕುಬಣೂರು ಶ್ರೀಧರ ರಾವ್ ಕದ್ರಿ ಮೇಳ, ನಂದಾವರ ಮೇಳ, ಆರುವ ಮೇಳ, ಬಪ್ಪನಾಡು ಮೇಳದಲ್ಲಿ ಮತ್ತೆ ಕದ್ರಿ ಮೇಳ, ಕಾಂತಾವರ ಮೇಳ ಮತ್ತು 1990ರಿಂದ ಕಟೀಲು ಮೇಳದಲ್ಲೇ ಮೂರು ದಶಕಗಳ ಕಾಲ, ಹೀಗೆ ಹತ್ತು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಕಲಾಸಾಧಕರು. ದಾಶರಥೀದರ್ಶನ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ಮಹಾಸತಿ ಮಂದಾಕಿನಿ ಮುಂತಾದ ಕನ್ನಡ ಪ್ರಸಂಗಗಳನ್ನೂ ‘ಪಟ್ಟದ ಮಣೆ’ ತುಳು ಪ್ರಸಂಗವನ್ನು ಬರೆದವರು. ಕಲ್ಲಾಡಿ ವಿಠಲ ಶೆಟ್ಟರ ಜೀವನ ಚರಿತೆಯಾದ ‘ಯಕ್ಷವಿಜಯ ವಿಠಲ’ವನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ‘ಯಕ್ಷಪ್ರಭಾ’ ಮಾಸಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದವರು.