ಮಂಗಳೂರು : ಮಂಗಳೂರಿನ ಖ್ಯಾತ ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಭಾಗವತ, ಹಿಮ್ಮೇಳ ವಾದಕ, ಸಂಘಟಕ ಮುಂಡ್ಕೂರು ನಾಗೇಶ್ ಪ್ರಭುಗಳು ದಿನಾಂಕ 09-02-2024ರಂದು ಮಂಗಳೂರು ಕೊಡಿಯಾಲಬೈಲ್ ಸ್ವಗೃಹದಲ್ಲಿ ನಿಧನರಾದರು. 86 ವರ್ಷ ಸಾರ್ಥಕ ಜೀವನ ನಡೆಸಿದ್ದ ಪ್ರಭುಗಳು ಶ್ರೀ ರಾಮ ಯಕ್ಷಗಾನ ಸಂಘ, ಬಿ.ಸಿ. ರೋಡ್ ಇದರ ಸ್ಥಾಪಕ ಆಧ್ಯಕ್ಷರಾಗಿದ್ದರು. ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು.
ವಾಗೀಶ್ವರಿ ಸಂಘದ ಶತಮಾನೋತ್ಸವವು ಮಂಗಳೂರು ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಪ್ರಭುಗಳ ಮಾರ್ಗದರ್ಶನದಲ್ಲಿ 50 ಸನ್ಮಾನ, 50 ಸಂಸ್ಮರಣೆ, 50 ತಾಳಮದ್ದಲೆ ಕಾರ್ಯಕ್ರಮದೊಂದಿಗೆ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಶ್ರೀಯುತರು 50 ವರ್ಷಗಳ ಕಲಾ ಸೇವೆಯನ್ನು ಗೈದಿದ್ದಾರೆ. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಮಾತುಗಾರಿಕೆಯ ಸೊಗಡು ಸ್ಮರಣೀಯ.
ಮೃತರು ಈರ್ವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಾಗೀಶ್ವರಿ ಸಂಘದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಪಿ. ಸಂಜಯ್ ಕುಮಾರ್, ಶ್ರೀನಾಥ್ ಪ್ರಭು, ಮಹಾಮಾಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಂತಾಪ ವ್ಯಕ್ತಪಡಿಸಿದ್ದಾರೆ.