ಸುರತ್ಕಲ್ : ಹಿರಿಯ ಸಂಗೀತ ಗುರುಗಳಾದ ದಿವಂಗತ ಪಡುಬಿದ್ರೆ ಸುಬ್ರಾಯ ಮಾಣಿ ಭಾಗವತರ್ ಇವರ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 12-05-2024ರಂದು ಸುರತ್ಕಲ್ಲಿನ ‘ಅನುಪಲ್ಲವಿ’ಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುರತ್ಕಲ್ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀಮತಿ ಗುಣವತಿ ಇವರು ಮೆಚ್ಚಿಗೆಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿಭಾಗದ ಸ್ಪಿಕ್ ಮೆಕೆ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳ ಕಾಲ ದುಡಿದ ಸೂರ್ಯ ಗಣೇಶ್ ಮತ್ತು ಪ್ರಣವ್ ಸುಬ್ರಹ್ಮಣ್ಯ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಗೀತ ಕಛೇರಿಗೆ ಮೊದಲು ದೀಕ್ಷಾ ಶೆಟ್ಟಿ ಇವರು ಪ್ರಾರ್ಥನೆಯ ರೂಪದಲ್ಲಿ ಕೃತಿಗಳು ಹಾಗೂ ನಾಮ ಸಂಕೀರ್ತನೆಯನ್ನು ಪ್ರಸ್ತುತಪಡಿಸಿದರು.
ಸಂಗೀತ ಕಛೇರಿ ನಡೆಸಿಕೊಟ್ಟ ಶ್ರೇಯಾ ಕೊಳತ್ತಾಯ ತನ್ನ ಶಾಸ್ತ್ರೀಯತೆ ಹಾಗೂ ಗಾಂಭೀರ್ಯದಿಂದ ಎಲ್ಲರ ಮನ ಸೆಳೆದರು. ಪಿ. ನಿತ್ಯಾನಂದ ರಾವ್ ಇವರ ಸಾಹಿತ್ಯಕ್ಕೆ ಡಾ. ರಾಜಕುಮಾರ್ ಭಾರತಿಯವರಿಂದ ರಾಗ ಸಂಯೋಜನೆಗೊಂಡ ‘ನಾಟಕುರುಂಜಿ’ ರಾಗ ವರ್ಣದ ಪ್ರಕೃತಿಯು ಸಂಗೀತ ಕಚೇರಿಗೆ ಉತ್ತಮ ಮುನ್ನುಡಿಯನ್ನು ಬರೆಯಿತು. ಪ್ರಧಾನವಾಗಿ ಆಯ್ದುಕೊಂಡ ತ್ಯಾಗರಾಜರ ಶಂಕರಾಭರಣ ರಾಗದ ‘ವರ ರಾಗ ಸುಧಾ’ ಕೃತಿಗೆ ಹಾಡಿದ ಆಲಾಪನೆ, ಕೃತಿ ಪ್ರಸ್ತುತಿ, ನೆರವಲ್ ಹಾಗೂ ಸ್ವರ ಪ್ರಸ್ತಾರಗಳು ಶಂಕರಾಭರಣ ರಾಗದ ಗಾಂಭೀರ್ಯವನ್ನು ಎತ್ತಿ ಹಿಡಿಯುವಂತಿತ್ತು. ಸುನಾದ ಪಿ. ಎಸ್. ಅವರ ವಯಲಿನ್ ಮತ್ತು ಪ್ರಣವ್ ಸುಬ್ರಮಣ್ಯ ಅವರ ಮೃದಂಗವಾದನವು ಹಿತಮಿತವಾಗಿ ಮುಖ್ಯ ಕಲಾವಿದೆಯ ಮನೋಧರ್ಮಕ್ಕೆ ಪೂರಕವಾಗಿತ್ತು. ಅತ್ಯಂತ ಗಂಭೀರವಾದ ಸಂಗೀತದ ಒಂದು ಆಯಾಮವನ್ನು ಶ್ರೋತೃಗಳ ಮುಂದೆ ತೆರೆದಿಡುವಲ್ಲಿ ಎಲ್ಲಾ ಕಲಾವಿದರು ಯಶಸ್ವಿಯಾಗಿ ಶೋತೃಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಪಡುಬಿದ್ರೆಯ ಶ್ರೀನಿವಾಸ ಭಾಗವತ, ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ರಾಜ್ ಮೋಹನ್ ರಾವ್, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ವಿದ್ವಾನ್ ನಾಗೇಶ್ ಎ. ಬಪ್ಪನಾಡು ಮುಂತಾದವರು ಉಪಸ್ಥಿತರಿದ್ದರು.