ಉಡುಪಿ : ಉಡುಪಿಯ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ದಿನಾಂಕ 18 ಮೇ 2025 ಭಾನುವಾರದಂದು ಕುಮಾರಿ ತನ್ಮಯಿ ಉಪ್ಪಂಗಳ ಇವರ ಹಾಡುಗಾರಿಕೆ ಕಛೇರಿಯು ಉತ್ತಮವಾಗಿ ನಡೆಯಿತು. ವಯೊಲಿನ್ ನಲ್ಲಿ ಶ್ರೀ ಜನಾರ್ದನ್ ಎಸ್. ಹಾಗೂ ಮೃದಂಗದಲ್ಲಿ ಶ್ರೀ ಸುನಾದ ಕೃಷ್ಣ ಅಮೈ ಅಚ್ಚುಕಟ್ಟಾಗಿ ಸಹಕರಿಸಿದರು.
ಚಲಮೇಲ ದರ್ಬಾರ್ ಆದಿತಾಳದ ವರ್ಣವನ್ನು ತ್ರಿಶ್ರದಲ್ಲಿ ಪ್ರಸ್ತುತ ಪಡಿಸಿದ ಕುಮಾರಿ ತನ್ಮಯಿ ‘ರಾಗವರ್ಧನಿ’ ಎಂಬ ಅಪರೂಪದ ‘ಸುಂದರ ವಿನಾಯಕ’ ಕೃತಿಯನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿ ಸಭಿಕರ ಪ್ರಶಂಸೆಗೆ ಪಾತ್ರರಾದರು. ಮುಂದೆ ‘ಮಾಮವ ಸದಾ ವರದೇ’ ನಾಟಕುರಂಜಿ ರೂಪಕ ತಾಳದಲ್ಲಿ ಸ್ವರಪ್ರಸ್ತಾರ ಮುಕ್ತಾಯಗಳೊಂದಿಗೆ ಸೊಗಸಾಗಿ ಮೂಡಿ ಬಂತು. ಆಭೋಗಿಯ ರಾಗದಲ್ಲಿ ಸುಂದರವಾದ ಚಿಟ್ಟೆಸ್ವರದೊಂದಿಗೆ ‘ನನು ಬ್ರೋವವೇ’ ಕೃತಿಯ ಸೊಗಸೇ ಬಲುಚಂದವಾಗಿತ್ತು. ತದನಂತರ ಕನ್ನಡಗೌಳದ ಚಂದದ ಆಲಾಪನೆಯೊಂದಿಗೆ ‘ಸೊಗಸುಜೂಡತರಮಾ’ ಕೃತಿಯು ಹೊರಹೊಮ್ಮಿದ್ದು ಕೇಳುಗರಿಗೆ ತುಂಬಾ ಹಿಡಿಸಿದ್ದಂತೂ ನಿಜ. ವಸಂತ ರಾಗಾಲಾಪನೆಯ ಝಲಕ್ ನ್ನು ನೀಡಿ ‘ರಾಮಚಂದ್ರ ಭಾವಯಮಿ’ ಕೃತಿ ನಿರೂಪಣೆಯೂ ಮುದ್ದಾಗಿತ್ತು. ಹರಿಕಾಂಬೋಜಿಯ ಆಲಾಪನೆ ಮತ್ತು ದಿನಮಣಿ ವಂಶ ಕೃತಿಯು ನೆರವಲ್ ಸ್ವರಪ್ರಸ್ತಾರ, ತನಿ ಆವರ್ತನದೊಂದಿಗೆ ಮೂಡಿಬಂದದ್ದು ಕಲಾವಿದೆಯ ಪ್ರೌಢಿಮೆಯನ್ನು ಎದ್ದು ತೋರಿಸುತ್ತಿತ್ತು.
ಸಹ ಕಲಾವಿದರಾದ ಶ್ರೀ ಜನಾರ್ದನ್ ಅವರು ಕಲಾವಿದೆಯ ಮನೋಧರ್ಮವನ್ನು ಅರಿತು ವಯೊಲಿನ್ ನುಡಿಸಿದ್ದನ್ನು ಕೇಳಿ ಎಲ್ಲಾ ಕಲಾರಸಿಕರೂ ಮುಕ್ತವಾಗಿ ಕೈ ಚಪ್ಪಾಳೆ ಮೂಲಕ ಶ್ಲಾಘಿಸಿದರು. ಮೃದಂಗ ನುಡಿಸಿದ ಸುನಾದಕೃಷ್ಣ ಆಮೈಯವರ ಪ್ರತೀ ಸೊಲ್ಲಿಗೆ, ಮೃದಂಗದ ನಾದಕ್ಕೆ ಕುಳಿತಂತ ಶ್ರೋತೃಗಳೆಲ್ಲರೂ ತಲೆದೂಗಿದರು. ಮಾತ್ರವಲ್ಲ ಕೈ ಚಪ್ಪಾಳೆ ಮೂಲಕ ತಮ್ಮ ಭಾವನೆಯನ್ನು ಅಭಿವ್ಯಕ್ತ ಪಡಿಸಿದರು. ಸುನಾದಕೃಷ್ಣನ ತನಿ ಆವರ್ತನದ ವಿದ್ವತ್ಪೂರ್ಣ ನುಡಿಸಾಣಿಕೆಯನ್ನು ಕೇಳಿದ ರಸಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮುಂದೆ ತನ್ಮಯಿ ‘ಷಣ್ಮುಖಪ್ರಿಯ’ ರಾಗವನ್ನು ರಾಗಾಲಾಪನೆ, ಸಂಪ್ರದಾಯಬದ್ಧವಾದ ತಾನ ಹಾಗೂ ‘ಸದಾ ನೀ ಪಾದಮೇ ನಮ್ಮಿತಿ’ ಎಂಬ ಪಲ್ಲವಿಯ ಸಾಲುಗಳೊಂದಿಗೆ ಪ್ರಸ್ತುತಪಡಿಸಿದ್ದಂತೂ ಶ್ಲಾಘನೀಯವಾಗಿತ್ತು. ತಾನೋರ್ವ ವಯೊಲಿನ್ ಕಲಾವಿದೆಯಾಗಿ ಹಾಡುಗಾರಿಕೆಯಲ್ಲಿಯೂ ಅಷ್ಟೇ ಪ್ರಭುದ್ಧತೆಯನ್ನು ಪಡೆದಿರುವುದು, ತನ್ಮಯಿಗೆ ಸಂಗೀತದ ಮೇಲಿರುವ ಪ್ರೀತಿ, ಬದ್ಧತೆ ಮತ್ತು ಸಾಧನೆಯಿಂದ ಮಾತ್ರ ಸಾಧ್ಯ ಎಂದು ಶ್ರೋತೃಗಳಿಗೆ ತೋರಿಸಿದಳು. ನಂತರ ರಾಗಮಾಲಿಕೆಯಲ್ಲಿ ಮೋಹನ, ಚಾರುಕೇಶಿ, ವರಾಳಿ, ಮಧ್ಯಮಾವತಿ ರಾಗಗಳು ಮೂಡಿಬಂದದ್ದು ಮಾತ್ರವಲ್ಲ, ಕಲಾರಸಿಕರ ಮೈಮನಗಳನ್ನು ತಟ್ಟಿದವು. ‘ತನ್ನ ಪ್ರಾಪ್ತಿಯ ಫಲವ’- ವಿಜಯನಾಗರಿ ರಾಗದ ದೇವರ ನಾಮವು ಸೊಗಸಾಗಿ ಮೂಡಿಬಂತು. ರಾಗಮಾಲಿಕೆಯಲ್ಲಿ ದುರ್ಗಾ, ಸೂರ್ಯ, ಪಟ್ ದೀಪ್ ರಾಗಗಳಲ್ಲಿ ಅಂದವಾಗಿ ಮೂಡಿಬಂದ ಇನ್ನೊಂದು ದೇವರನಾಮ ಹಾಗೂ ‘ಬೃಂದಾವನ ಸಾರಂಗದ’ ಸೊಗಸಾದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನವಾಯಿತು.
ಮಂದ್ರಸ್ಥಾಯಿಯಲ್ಲಿ ಇನ್ನಷ್ಟು ಸಾಧನೆಯೊಂದಿಗೆ ಕು.ತನ್ಮಯಿ ನಮ್ಮಊರಿನ ಮಿನುಗು ತಾರೆಯಾಗುವಲ್ಲಿ ಯಾವುದೇ ಸಂಶಯವಿಲ್ಲ. ‘ಬಹುವಚನಂ’ ವೇದಿಕೆಯಲ್ಲಿ ನಿರಂತರವಾಗಿ ಕಲಾರಾಧನೆಯನ್ನು ನಡೆಸಿಕೊಂಡು ಬರುತ್ತಿರುವ ಡಾ. ಶ್ರೀಶ ಕುಮಾರ ಅವರನ್ನು ಎಲ್ಲರೂ ಅಭಿನಂದಿಸಲೇಬೇಕು.