ಮಂಗಳೂರು : ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಗಾಯಕ ಇಶಾನ್ ಫೆರ್ನಾಂಡಿಸ್ ಇವರ ‘ಟ್ರಾನ್ಸೆಂಡಿಗ್ ಬೌಂಡರೀಸ್ – 3’ ಸಂಗೀತ ಕಾರ್ಯಕ್ರಮ ದಿನಾಂಕ 22 ಡಿಸೆಂಬರ್ 2024ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಂಬಾರ, ಅರೇಬಿಕ್, ಸ್ವೀಡಿಶ್, ಇಟಾಲಿಯನ್, ಪೋರ್ಚುಗೀಸ್, ಕೊಂಕಣಿ, ಸ್ಪಾನಿಷ್, ಹಿಂದೂಸ್ತಾನಿ, ಇಂಗ್ಲೀಷ್, ಕಜಕ್, ತುಳು ಹಾಗೂ ಅರ್ಮೇನಿಯನ್ ಹೀಗೆ 12 ಭಾಷೆಗಳ ಸುಮಧುರ ಹಾಡುಗಳನ್ನು ಹಾಡಿ ಮನರಂಜಿಸಿದರು. ಪ್ರತಿ ಹಾಡುಗಳ ಮಧ್ಯೆ ದೇಶ-ಭಾಷೆಗಳ ಸಂಸ್ಕೃತಿ ಹಾಗೂ ಹಾಡುಗಳು ಒಳಗೊಂಡ ಭಾವಗಳ ಬಗ್ಗೆ ವಿವರಿಸಿ, ಕೇಳುಗರಿಗೆ ಹಾಡುಗಳನ್ನು ಅರ್ಥೈಸಲು ಅನುವು ಮಾಡಿ ಕೊಟ್ಟರು.
ಹಾಡುಗಾರನಿಗೆ ಬಾಸ್ ಗಿಟಾರಿನಲ್ಲಿ ಜೆರೊಮ್ ಕುವೆಲ್ಲೊ, ಕೀ ಬೋರ್ಡ್ ನಲ್ಲಿ ಸಂಜಯ್ ರೊಡ್ರಿಗಸ್, ಡ್ರಮ್ಸ್ ನಲ್ಲಿ ಸಂಜೀತ್ ರೊಡ್ರಿಗಸ್, ಲೀಡ್ ಗಿಟಾರ್ ನಲ್ಲಿ ಜೊಸ್ವಿನ್ ಡಿಕುನ್ಹಾ ಹಾಗೂ ಪಕ್ಕ ವಾದ್ಯದಲ್ಲಿ ಜೀವನ್ ಸಿದ್ದಿ ಇವರುಗಳು ಸಹಕರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಪ್ರಸ್ತಾವನೆಗೈದು, ಅಧ್ಯಕ್ಷ ಲುವಿ ಜೆ. ಪಿಂಟೊ ಕಲಾವಿದರನ್ನು ಗೌರವಿಸಿದರು.
ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದ ಇಶಾನ್ ಫೆರ್ನಾಂಡಿಸ್ ಚರಿತ್ರೆ, ಭಾಷಾಶಾಸ್ತ್ರ, ಕಲೆ ಹೀಗೆ ಬಹುಮುಖಿ ಆಸಕ್ತಿಯ ಯುವಕ. ಸಂಗೀತದಲ್ಲಿ ಸಾಧನೆಗೈಯಬಹುದಾದ ಅನಂತ ಸಾಧ್ಯತೆಗಳ ಬಗ್ಗೆ ಒಲವುಳ್ಳವರು. ತನ್ನ ತಂದೆ ಗಿಟಾರ್ ಮಾಯೆಸ್ಟ್ರೋ ಬಿರುದಾಂಕಿತ ಆಲ್ವಿನ್ ಫೆರ್ನಾಂಡಿಸ್ ಇವರಿಂದ ಪ್ರೇರಣೆ ಪಡೆದರೂ, ಗಿಟಾರಿನಲ್ಲಿ ಹಲವು ವಿಭಿನ್ನ ಪ್ರಯೋಗಗಳನ್ನು ಮಾಡಿ ಭಿನ್ನ ಜಾಡಿನಲ್ಲಿ ಸಾಗುತ್ತಿದ್ದಾರೆ. ಯು. ಎ. ಇ. ಯ ಪ್ರಖ್ಯಾತ ಬ್ಯಾಂಡ್ ‘ಒಲಿವ್ ಹೇಝ್’ ಇದರ ಸದಸ್ಯರಾಗಿರುವ ಇವರು ಸ್ವಆಸಕ್ತಿಯಿಂದ ಹಲವು ಭಾಷೆಗಳನ್ನು ಕಲಿತು, ಆ ಭಾಷೆಗಳ ಸಂಗೀತದ ನಾಡಿ ಮಿಡಿತವನ್ನು ಅರಿತು ಅವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.