ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ತ್ರಿಂಶತ್ ಸಂಭ್ರಮದ ಪ್ರಯುಕ್ತ ಕೇರಳದ ವಿವೇಕ್ ಮೂಝಿಕುಳಮ್ ಅವರಿಂದ ವಿದ್ವತ್ ಪೂರ್ಣ ಸಂಗೀತ ಕಛೇರಿಯು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ದಿನಾಂಕ 24-02-2024ರಂದು ನಡೆಯಿತು. ಉತ್ತಮ ಶಾರೀರ ಹಾಗೂ ಕೃತಿಗಳ ಪ್ರಸ್ತುತಿಯು ಕೇಳುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಇವರಿಗೆ ಪಕ್ಕವಾದ್ಯದಲ್ಲಿ ಕೇಶವ ಮೋಹನ್ ಕುಮಾರ್ ಬೆಂಗಳೂರು ಪಿಟೀಲು, ಸುನಾದಕೃಷ್ಣ ಅಮೈ ಮಂಗಳೂರು ಮೃದಂಗ, ಬಾಲಕೃಷ್ಣ ಹೊಸಮನೆ ಪುತ್ತೂರು ಮೋರ್ಸಿಂಗ್ ಅವರ ಸಹಕಾರವು ಉತ್ತಮವಾಗಿತ್ತು.

ಇದಕ್ಕೂ ಮೊದಲು ಉಡುಪಿಯ ಶ್ರೀಯುತ ರಾಘವೇಂದ್ರ ರಾಯರ ಶಿಷ್ಯ ಯುವ ಪ್ರತಿಭೆ ಪ್ರಣವ್ ಅಡಿಗ ಅವರಿಂದ ಕೊಳಲು ವಾದನ ಕಛೇರಿಯು ಮಂಗಳೂರಿನ ಗೌತಮ್ ಭಟ್ ಪಿಟೀಲು ಹಾಗೂ ಕಟೀಲಿನ ಶೈಲೇಶ್ ರಾವ್ ಮೃದಂಗ ಸಹಕಾರದೊಂದಿಗೆ ನಡೆಯಿತು. ಸಂಗೀತ ಪರಿಷತ್ತಿನ ಸದಸ್ಯೆ ಸೀತಾಲಕ್ಷ್ಮಿ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿದ್ಯಾಭವನ ಸಂಯೋಗದೊಂದಿಗೆ ಈ ಕಾರ್ಯಕ್ರಮ ನೆರವೇರಿತು.

