ಮಂಗಳಾದೇವಿ : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಸ್ಮರಣಾರ್ಥ ಇಲ್ಲಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ವಿಶಿಷ್ಟ ಸಂಗೀತ ಕಛೇರಿಯನ್ನು ದಿನಾಂಕ 07-04-2024ರಂದು ಆಯೋಜಿಸಲಾಗಿತ್ತು. ಮೊದಲು ನಡೆದ ಉಡುಪಿಯ ಕಡಿಯಾಳಿ ಸಹೋದರರಾದ ಪ್ರಭವ್ ಉಪಾಧ್ಯ ಮತ್ತು ಸೌರವ್ ಉಪಾಧ್ಯ ಇವರ ಕೊಳಲು ವಾದನ ಕಛೇರಿಗೆ ಧನಶ್ರೀ ಶಬರಾಯ ವಯೋಲಿನ್ ಹಾಗೂ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಿದರು.
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವ ಬಾಲಪ್ರತಿಭೆ 10 ವರ್ಷ ವಯಸ್ಸಿನ ಗಂಗಾ ಶಶಿಧರನ್ ಮತ್ತು ಅವರ ಗುರು ಸಿ. ಅನುರೂಪ್ ಅವರ ವಯೋಲಿನ್ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಕೃತಿ ವಾತಾಪಿಯಿಂದ ಕಛೇರಿ ಆರಂಭಿಸಿದ ತಂಡದ ಪ್ರಸ್ತುತಿ ಶೋತೃಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಮೃದಂಗ, ತವಿಲ್ ಮತ್ತು ಘಟಂಗಳ ಕಲಾವಿದರ ಚಾತುರ್ಯವನ್ನೂ ತೋರ್ಪಡಿಸಿದರು. ಪುಟ್ಟಬಾಲೆ ಗಂಗಾ ತನ್ನ ಚಾತುರ್ಯ, ಆಕರ್ಷಕ ನುಡಿಸಾಣಿಕೆ, ಭಾವಪೂರ್ಣ ಅಭಿವ್ಯಕ್ತಿಗಳಿಂದ ಪ್ರೇಕ್ಷಕರ ಮನಸೂರೆಗೊಂಡಳು.
ಆನಂತರ ವಿಳಂಬ ಕಾಲದ ದ್ವಿಜವಂತಿಯ ಅಖಿಲಾಂಡೇಶ್ವರಿಯನ್ನು ನುಡಿಸಿ, ತೋಡಿಯ ತಾಯೇ ಯಶೋದವನ್ನು ಆಲಾಪನೆ, ಸ್ವರಗಳ ಮತ್ತು ತನಿಯಾ ವರ್ತನದ ಮೂಲಕ ಸವಿಸ್ತಾರವಾಗಿ ಪ್ರಸ್ತುತ ಪಡಿಸಿದರು. ಮೃದಂಗದಲ್ಲಿ ಬಾಂಬೆ ಗಣೇಶ್, ತವಿಲ್ ನಲ್ಲಿ ಕುಮಾರ್, ಘಟದಲ್ಲಿ ಶ್ರೀಜಿತ್ ಸಾಥ್ ನೀಡಿದರು. ದೇವಗಾಂಧಾರಿಯ ಕ್ಷೀರ ಸಾಗರ ಶಯನ, ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾದ ಅಭೇರಿಯ ‘ನಗುಮೋಮು’ವನ್ನು ಕೌಶಲ ಪೂರ್ಣವಾಗಿ ಗಂಗಾ ಪ್ರಸ್ತುತ ಪಡಿಸಿದರು. ‘ಭಾಗ್ಯದಲಕ್ಷ್ಮೀ ಬಾರಮ್ಮ’ ಮೂಲಕ ಕಛೇರಿ ಸಂಪನ್ನಗೊಂಡಿತು.