ಉಡುಪಿ : ಉಡುಪಿಯ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ‘ರಾಗರತ್ನ ಮಾಲಿಕೆ -28’ನೇ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2024ರಂದು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಭಾಂಗಣದಲ್ಲಿ ನಡೆಯಿತು.
ಒಂದು ಹೃದ್ಯವಾದ ಕೊಳಲಿನ ತುತ್ತುಕಾರದೊಂದಿಗೆ ಮೃದುವಾದ ಚಿತ್ರವೀಣೆಯ ಉಲಿತ, ಉಡುಪಿ ಮಣಿಪಾಲದ ಸಂಗೀತಾಸಕ್ತರಿಗೆ ತುಂಬು ಸಂತಸವನ್ನು ನೀಡಿದವರು ಚಿತ್ರವೀಣಾ ಗಣೇಶ್ ಚೆನ್ನೈ ಮತ್ತು ಕೊಳಲಿನಲ್ಲಿ ಡಾ. ವಿಜಯ ಗೋಪಾಲ್ ಚೆನ್ನೈ. ಎರಡು ಬೇರೆ ಬೇರೆ ವಾದ್ಯಗಳ ಮಾಧುರ್ಯದ ಅಂಶಗಳನ್ನು ಹದವಾಗಿ ಬೆರೆಸಿ ನೀಡಿದ ಈ ಜೋಡಿ ಸಭಿಕರನ್ನು ಅಕ್ಷರಶಃ ಸಂಮೋಹನಗೊಳಿಸುವಲ್ಲಿ ಯಶಸ್ವಿಯಾಯಿತು. ನವರಾಗರ ಮಾಲಿಕಾ ವರ್ಣ, ಗಾನಮೂರ್ತಿ (ಗಾನಮೂರ್ತೇ) ಆರಭಿ (ಪಂಚ ರತ್ನ) ಆನಂದ ಭೈರವಿ (ಮರಿವೇರೆ) ಕೃತಿಗಳಲ್ಲದೆ ಪ್ರಧಾನವಾಗಿ ಹಂಸಾನಂದಿಯನ್ನು (ಪಾವನಗುರು ಪವನಪುರ) ಆಯ್ದುಕೊಳ್ಳಲಾಯಿತು.
ಒಮ್ಮೆ ಪಕ್ಕವಾದ್ಯದವರಾಗಿ ಮತ್ತೊಮ್ಮೆ ಸಹವಾದಕರಾಗಿ ಪರಸ್ಪರ ಅರಿತುಕೊಂಡು ಒಬ್ಬರಿಗೊಬ್ಬರು ಪೂರಕವಾಗಿ, ಈ ಕಲಾವಿದರು ಪರ್ಯಾಯವಾಗಿ ನೀಡಿದ ಆಲಾಪನೆಯ ಶ್ರಾವ್ಯತೆ, ಸ್ವರ ಕಲ್ಪನೆಗಳ ನಡೆ ಬೇಧಗಳು, ಎಲ್ಲೂ ಅಪಸ್ವರವಿಲ್ಲದ ನುಡಿತಗಳು ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರವಾದವು. ಆನಂತರ ‘ವರಮು’ ರಾಗವನ್ನು ‘ರಾಗಂ -ತಾನಂ -ಪಲ್ಲವಿ’ಗೆ ಆಯ್ದುಕೊಂಡ ಕಲಾವಿದರು ರಾಗ ವಿಸ್ತಾರ, ರಾಗ ಮಾಲಿಕೆಯಲ್ಲಿ ‘ತಾನಂ’ ನಂತರ ‘ಕೃಷ್ಣಾ ..ಮುಕುಂದಾ..ಮುರಾ..ರೇ… ರಾಗಧನ ಸೊಬಗಿನ ಉಡುಪಿ’ ಎಂಬ ಸ್ವರಚಿತ ಪಲ್ಲವಿಯನ್ನು ಚತುರಸ್ರ ತ್ರಿಪುಟ ತಾಳದಲ್ಲಿ ನುಡಿಸಿದರು. ಮತ್ತು ಮುಕ್ತಾಯಗಳೊಂದಿಗೆ ಸ್ವರವಿನಿಕೆ (ಕಲ್ಪನಾ ಸ್ವರ)ಗಳನ್ನು ನೀಡಿದರು. ಕಚೇರಿಯುದ್ದಕ್ಕೂ ತಮ್ಮ ಚುರುಕಾದ ಬೆರಳುಗಳಿಂದ ಮೃದಂಗ ವಾದನದಲ್ಲಿ ನಿಕ್ಷಿತ್ ಪುತ್ತೂರು ಮತ್ತು ಕಂಜೀರದಲ್ಲಿ ಕಾರ್ತಿಕ್ ಇನ್ನಂಜೆ, ಮುಂದೆ ತನಿ ಆವರ್ತನದಲ್ಲಿ ಮಿಂಚಿದರು. ಯಮುನಾ ಕಲ್ಯಾಣಿಯ ದೇವರನಾಮ ಹಾಗೂ ದೇಶ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ವಿದುಷಿ ಶ್ರೀಮತಿ ಸರೋಜಾ ಆರ್ ಆಚಾರ್ಯ
ಹಿರಿಯ ಸಂಗೀತ ಗಾಯಕಿ, ಸಂಗೀತ ವಿಮರ್ಶಕಿ ಹಾಗೂ ಕನ್ನಡ ಲೇಖಕಿ.