ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ‘ಬಹುವಚನಂ’ನ ಪದ್ಮಿನಿ ಸಭಾಭವನದಲ್ಲಿ ದಿನಾಂಕ 22 ಡಿಸೆಂಬರ್ 2024ರ ಸಂಜೆ ಸಂಪನ್ನಗೊಂಡ ಹಿಂದೂಸ್ಥಾನೀ ಶಾಸ್ತ್ರೀಯ ಬಾನ್ಸುರಿ ವಾದನವು ಪ್ರೇಕ್ಷಕರಾಗಿ ಬಂದ ಸಂಗೀತಾಸ್ವಾದಕರನ್ನು ಸುಮಾರು ಎರಡು ಗಂಟೆಗಳ ಕಾಲ – ಒಂದರ್ಥದಲ್ಲಿ – ಸೆರೆಹಿಡಿದಿಟ್ಟಿತು.
ಕಲೆಯೇ ಕಲಾವಿದನ ಉಸಿರು! ಹಾಗೆ ನೋಡಿದರೆ ಶ್ರುತಿಪ್ರಧಾನವಾಗಿರುವ ಹಾಡುವಿಕೆಯೋ ಗಾಳಿವಾದ್ಯದ ನುಡಿಸಾಣಿಕೆಯೋ ಉಸಿರಿನ ಮೇಲಿನ ಹತೋಟಿಯನ್ನೇ ಅವಲಂಬಿಸಿರುವುದು ಸುಸ್ಪಷ್ಟ. ಆ ದೃಷ್ಟಿಯಲ್ಲಿ, ಹಾಡುಗಾರಿಕೆಯಾಗಲಿ, ಗಾಳಿವಾದ್ಯ ವಾದನವಾಗಲಿ ಪ್ರಾಣಾಯಾಮವೇ ಆಗಿದೆ. ಕಲಾವಿದ ಕಿರಣ್ ಹೆಗ್ಡೆ ತಮ್ಮ ಬಾನ್ಸುರಿ ವಾದನದ ಮೂಲಕ ‘ಪ್ರಾಣಾಯಾಮ’ ಮಾಡಿ ಸೇರಿದ್ದ ಸಂಗೀತಾಸ್ವಾದಕರಿಗೆಲ್ಲ ‘ಸಂಗೀತ ಯೋಗ’ವನ್ನೊದಗಿಸಿದರು. ಅವರ ‘ನಾದ ತಾದಾತ್ಮ್ಯ’ವಂತೂ ಅದ್ಭುತ ! ತಾವು ಧ್ಯಾನಸ್ಥರಾದುದಲ್ಲದೆ ನೆರೆದಿದ್ದ ಅಷ್ಟೂ ಪ್ರೇಕ್ಷಕರನ್ನು ಧ್ಯಾನಸ್ಥರಾಗುವಂತೆ ಮಾಡಿದರು. ಆಸ್ವಾದಕರನ್ನೆಲ್ಲ ತನ್ನ ಬಾನ್ಸುರಿಯ ಸ್ವರದೊಂದಿಗೆ ಬೆಸೆದರು. ತಾವು ಬೆವೆತರೂ ಕಲಾಸ್ವಾದಕರಿಗೆ ತಂಪನ್ನೇ ಹಂಚಿದರು. ಪ್ರೇಕ್ಷಕರನ್ನೆಲ್ಲ ತಮ್ಮ ‘ರಾಗ’ದ ಮಾಲೆಯಲ್ಲಿ ಪೋಣಿಸಿದರು. ಬಾನ್ಸುರಿ ಮತ್ತು ತಬಲಾ ‘ದ್ವೈತ’ವನ್ನು ಪ್ರತಿನಿಧಿಸಿದರೂ ಅವು ಸೃಷ್ಟಿಸಿದ ಸಂಗೀತತತ್ತ್ವವು ‘ಅದ್ವೈತ’ವೇ ಸರಿ.
ತಬಲಾವಾದನವು ಮೃದು ಮಧುರವಾಗಿತ್ತು. ಮೆಲುಧ್ವನಿಯ ಮಾಧುರ್ಯದಿಂದ ಮೋಡಿ ಮಾಡಿದ ವಾದಕ ಅಕ್ಷಯ್ ಭಟ್ ಎಲ್ಲೂ ಕೂಡಾ ಬಾನ್ಸುರಿಯ ನಾದವನ್ನು ಮೀರಿ ಹೋಗಲಿಲ್ಲ; ಅನುಸರಿಸಿದರು. ಅದು ಬಡಿತವಾಗಿರಲಿಲ್ಲ, ನುಡಿತವಾಗಿತ್ತು; ಮೃದು ತಾಡನವಾಗಿತ್ತು. ಸಂಗೀತ ವಾತಾವರಣದ ಸಹಜಮಿಡಿತವನ್ನು ಆ ತಬಲಾವಾದನ ಕಾಯ್ದುಕೊಂಡಂತಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ತುಸು ಸಮಯಾವಕಾಶ ದೊರೆತಾಗ ಪ್ರೇಕ್ಷಕರ ಕೋರಿಕೆಯ ಪ್ರಸ್ತುತಿಗೆ ಬಾನ್ಸುರಿ ವಾದಕರು ತಯಾರಿದ್ದ ಸಂದರ್ಭ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನಿಕಟವಿರುವ ರಾಗವೊಂದನ್ನು ನುಡಿಸುವಂತೆ ನಾನು ವಿನಂತಿಸಿಕೊಂಡಾಗ ಸಂತೋಷದಿಂದ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂಭಜೇ’ಯನ್ನು ಹಿಂದೂಸ್ಥಾನಿ ಶೈಲಿಯಲ್ಲೇ ನುಡಿಸಿ ನಮ್ಮನ್ನು ಹರ್ಷಗೊಳಿಸಿದರು.
ಹಾಗೆ ನೋಡಿದರೆ ನಾನು ‘ಸಂಗೀತ ಶಾಸ್ತ್ರಿ’ಯಲ್ಲ! ಕರ್ನಾಟಕ ಶಾಸ್ತ್ರೀಯ ಸಂಗೀತವಾಗಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವಾಗಲಿ ಅವುಗಳ ‘ಅಆಇಈ’ ನನಗೆ ಗೊತ್ತೇ ಇಲ್ಲ! ರಾಗವು ನಮ್ಮೊಳಗೆ ಇಳಿಯಬಹುದಾದರೆ, ನಮ್ಮ ಭಾವನೆಯ ನೆಲೆಯನ್ನು ಮುಟ್ಟಬಹುದಾದರೆ ಆ ರಾಗಕ್ಕೆ ಹೆಸರಿನ ಹಂಗಾದರೂ ಏಕೆ? ಭಾವವು ನಮ್ಮನ್ನು ತಟ್ಟಬಹುದಾದರೆ ಶೈಲಿ-ಪ್ರಭೇದಗಳ ಗೊಡವೆಯಾದರೂ ಏತಕ್ಕೆ? ಅಂತಿಮವಾಗಿ ರಾಗ – ದ್ವೇಷಾದಿಗಳನ್ನು ಮೀರುವಂತೆ ಸಾಗುವುದೇ ಸಂಗೀತಾದಿ ಕಾರ್ಯಕ್ರಮಗಳ ಗುರಿಯಲ್ವೇ ? ನಾದಾನುಸಂಧಾನದ ಮೂಲಕ ಆತ್ಮಾನುಸಂಧಾನವನ್ನು ಏರ್ಪಡಿಸುವುದೇ ಸಂಗೀತ !
ಪ್ರೇಕ್ಷಕರು ಕಲಾವಿದರನ್ನು ಮೆಚ್ಚಿಕೊಳ್ಳುವುದು ಸರ್ವೇಸಾಮಾನ್ಯ. ಕಲಾವಿದ ಕಿರಣ್ ಹೆಗ್ಡೆಯವರು ಪ್ರೇಕ್ಷಕರನ್ನೂ ಮೆಚ್ಚಿಕೊಂಡ ಪರಿ ಅನ್ಯಾದೃಶ. ಕಾರ್ಯಕ್ರಮದ ಯಶಸ್ಸಿನಲ್ಲಿ ತಾನ್ಪುರದಲ್ಲಿ ಸಹಕರಿಸಿದ ವಿದುಷಿ ನಂದಿನಿಯವರ ಪಾತ್ರವೂ ಉಲ್ಲೇಖನೀಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಸಂಗೀತ ಹಬ್ಬವನ್ನು ಏರ್ಪಡಿಸಿದ ‘ಚಿರಂತನ ಚಾರಿಟೇಬಲ್ ಟ್ರಸ್ಟ್’ ಹಾಗೂ ‘ಬಹುವಚನಂ’ಗಳಿಗೆ ಅಭಿನಂದನೆ ಸಲ್ಲುತ್ತದೆ.
ಜಯಪ್ರಕಾಶ್ ಎ. ನಾಕೂರು
ಪುತ್ತೂರು ಜೂನಿಯರ್ ಕಾಲೇಜಿನ ಉಪನ್ಯಾಸಕರು