ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 23 ಅಕ್ಟೋಬರ್ 2025ರಂದು ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವದಲ್ಲಿ ಎ. ಅನಂತ ಪದ್ಮನಾಭನ್ ಇವರ ವೀಣಾ ಕಛೇರಿ ಪ್ರೇಕ್ಷಕರಿಗೆ ರಸದೌತಣ ನೀಡಿತು. ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ ಸಂಗೀತವನ್ನು ಏಕಕಾಲದಲ್ಲಿ ಕೇಳುವಾಗ ಅದು ಸಂಗೀತದ ತ್ರಿವೇಣಿ ಸಂಗಮವಾಗಿತ್ತು. ನಾಟ್ಟ, ಗಾನಮೂರ್ತಿ, ಸರಸ್ವತಿ, ಕಪಿ, ಸಿಂಧು ಭೈರವಿ ರಾಗಗಳಲ್ಲಿ ಕೀರ್ತನೆಗಳನ್ನು ತಮ್ಮದೇ ಶೈಲಿಯಲ್ಲಿ ವೀಣೆಯನ್ನು ನುಡಿಸಿದರು. ಪಕ್ಕ ವಾದ್ಯದಲ್ಲಿ ಚೇರ್ತಲ ದಿನೇಶ್ ಮೃದಂಗ, ಡಾ. ಸುರೇಶ್ ವೈದ್ಯನಾಥನ್ ಘಟವನ್ನು ಹಾಗೂ ಪಯ್ಯನ್ನೂರು ಗೋವಿಂದ ಪ್ರಸಾದ್ ಮೋರ್ಸಿಂಗ್ ನುಡಿಸಿದರು.
ಕಲಾವತಿಯವರ ಸೋಪಾನ ಸಂಗೀತ, ಬದರಿ ವಿಶ್ವನಾಥ್ ಇವರ ಸಂಗೀತೋತ್ಸವದೊಂದಿಗೆ ಐದನೇ ದಿನದ ಸಂಗೀತೋತ್ಸವ ಆರಂಭವಾಯಿತು. ವರುಣ ಲಕ್ಷ್ಮಿ, ವಿದ್ಯಾ ಹರಿಕೃಷ್ಣ, ಯೋಗ ಕೀರ್ತನೆ, ರಮ್ಯಾ ನಂಬೂತಿರಿ, ಹೃದಯೇಶ್ ಕೃಷ್ಣನ್, ಮಾತಂಗಿ ಸತ್ಯಮೂರ್ತಿ ಮತ್ತು ಎನ್.ಜೆ. ನಂದಿನಿ ಇವರಿಂದ ಸಂಗೀತ ಕಛೇರಿಗಳು, ಯೋಗ ವಂದನಾ ಇವರಿಂದ ವೀಣಾ ಕಛೇರಿ ಮತ್ತು ಘಟ ವಿದ್ವಾಂಸ ಡಾಕ್ಟರ್ ಸುರೇಶ್ ವೈದ್ಯನಾಥನ್ ಇವರ ಮೃತ್ತಿಕಾ ವೈಭವ ಎಂಬ ತಾಳವಾದ್ಯ ಸಂಗಮವು ನಂದಿ ಮಂಟಪದಲ್ಲಿ ಜರಗಿತು.
