ಪುತ್ತೂರಿನ ಪಾಂಗಳಾಯಿಯ ಶ್ರೀಮತಿ ಕೃಷ್ಣವೇಣಿ ಮತ್ತು ಶ್ರೀ ಕೇಶವ ಪ್ರಸಾದ್ ಮುಳಿಯ ದಂಪತಿಗಳ ನಿವಾಸ ‘ಶ್ಯಾಮಲೋಚನ’ದಲ್ಲಿ ದಿನಾಂಕ 27 ಅಕ್ಟೋಬರ್ 2024ರಂದು ಒಂದು ಸಂಗೀತಾರಾಧನೆ ನಡೆಯಿತು. ಅದು, ಉಡುಪಿಯ ‘ರಾಗಧನ’ ಸಂಸ್ಥೆಯು ನಡೆಸುತ್ತಿರುವ ‘ರಾಗರತ್ನಮಾಲಿಕೆ’ ಸರಣಿಯ 30ನೇ ಗೃಹ ಸಂಗೀತ ಕಾರ್ಯಕ್ರಮವಾಗಿತ್ತು.
ಉದ್ಘಾಟನಾ ಪೂರ್ವ ಕಛೇರಿ ಶ್ರೀಮತಿ ಅರುಣಾ ಸರಸ್ವತಿ ಅಮೈಯವರಿಂದ ನಡೆಯಿತು. ಪ್ರಸನ್ನ ಮುಖ ಮುದ್ರೆ, ಕೇಳಲು ಖುಷಿಯೆನಿಸುವ ಕಂಠಸಿರಿ ! ಪ್ರಾರಂಭದ ನಾಟಕುರಂಜಿ ವರ್ಣದಿಂದ ಹಿಡಿದು, ಕೊನೆಯಲ್ಲಿ ಹಾಡಲಾದ ಮಧವಂತಿ (ಸರ್ವಂ ಬ್ರಹ್ಮಮಯಂ) ಲಘು ಪ್ರಸ್ತುತಿಯವರೆಗೆ ಶ್ರೋತೃಗಳ ಆಸಕ್ತಿಯನ್ನು ಏಕಪ್ರಕಾರವಾಗಿ ಕಾದುಕೊಂಡ ಸರಳವಾದ ಕಛೇರಿ !
ಪ್ರಧಾನ ರಾಗ ‘ಪಂತುವರಾಳಿ’ (ರಾಮನಾಥಂ) ಶುದ್ಧವಾದ, ಗಮಕಯುಕ್ತ ಆಲಾಪನೆ, ನೆರವಲ್, ಅಚ್ಚುಕಟ್ಟಾದ ಸ್ವರ ಕಲ್ಪನೆಗಳ ಸಹಿತ ಹಿತವಾಗಿ ಮೂಡಿ ಬಂತು. ಆರಭಿ (ಗಣರಾಜೇನ) ಆಹಿರ್ ಭೈರವ್ (ಶ್ರೀ ಜಗದೀಶ್ವರಿ) ರಚನೆಗಳು ಹೃದ್ಯವಾಗಿದ್ದು ರಸಿಕರಿಗೆ ಸಂತೃಪ್ತಿಯನ್ನು ನೀಡಿವೆ. ಶ್ರೀ ಗೌತಮ್ ಭಟ್ ಪ್ರಬುದ್ಧವಾದ ಸಹವಾದನ ನೀಡಿದ್ದಾರೆ. ಮೃದಂಗ ವಿದ್ವಾನ್ ಶ್ರೀ ಸುನಾದಕೃಷ್ಣ ಅಮೈ ಕಲಾವಿದೆಯ ಇಂಗಿತವರಿತು ಮೃದುವಾಗಿ ಅನುಸರಿಸಿದ್ದಾರೆ; ಅಂತೆಯೇ ವಿದ್ವತ್ಪೂರ್ಣವಾದ ತನಿ ಆವರ್ತನ ನೀಡಿದ್ದಾರೆ.
ಈ ಕಾರ್ಯಕ್ರಮದ ನಂತರ ‘ಭಕ್ತಿ ಭಾವ ಲಹರಿ’ ಲಘು ಶಾಸ್ತ್ರಿಯ ಸಂಗೀತವನ್ನು ನಡೆಸಿದವರು ಮಣಿಪಾಲದ ಶ್ರೀ ಕೆ.ಆರ್. ರಾಘವೇಂದ್ರ ಆಚಾರ್ಯ ಮತ್ತು ಶ್ರೀಮತಿ ಶ್ರುತಿ ಗುರುಪ್ರಸಾದ್. ಇಬ್ಬರು ಕಲಾವಿದರದ್ದೂ ಸುಗಮ ಸಂಗೀತಕ್ಕೆ ಹೊಂದಿಕೊಳ್ಳುವಂತಹ ಶಾರೀರ; ಅಂತೆಯೇ ಪ್ರಸ್ತುತಿಗಳೂ ಪರ್ಯಾಯವಾಗಿಯೇ ಮೂಡಿ ಬಂದವು.
‘ಶರಣು ಸಿದ್ಧಿವಿನಾಯಕ’, ‘ಶೃಂಗಪುರಾಧೀಶ್ವರಿ’ ದೇವತಾ ಸ್ತುತಿಗಳ ನಂತರ ಹಾಡಲಾದ ‘ಹೇ ಗೋವಿಂದ… ಹೇ ಗೋಪಾಲ’, ‘ಕೃಷ್ಣ ದೀವಾನೀ’ ಭಜನೆಗಳು ರಸಿಕರ ಮೆಚ್ಚುಗೆಯನ್ನು ಪಡೆದವು. ‘ನೆಚ್ಚದಿರು…’, ‘ಕಷ್ಟ ಪಟ್ಟರು ಇಲ್ಲ’, ‘ಹೌದಪ್ಪ ಹೌದು’ ಮುಂತಾದ ತತ್ವಪದಗಳ ನಂತರ ಭಾವಗೀತೆಗಳನ್ನು ಎತ್ತಿಕೊಳ್ಳಲಾಯಿತು. ‘ಏನೀ ಮಹಾನಂದವು’, ‘ನೀರೇ, ನೀ ಕರೆತಾರೇ’, ‘ನೀಲ ನಭಕ್ಕೆ ನೂಲ ಏಣಿ’, ‘ಮರೆಸದಿರು ನೆನಪುಗಳ’, ‘ಬಯಲಿನೊಳಗೆ ಯಾರೋ ಇಬ್ಬರು’, ‘ನನ್ನ ಎದೆಯ ಒಲವಧಾರೆ’ ಮುಂತಾದ ಭಾವಗೀತೆಗಳಿಗೆ ಇಲ್ಲಿಯ ಸಭಿಕರು ಸಂತಸದಿಂದ ಸ್ಪಂದಿಸಿದರು. ಅಲ್ಲದೆ ಜಾನಪದ ಸೊಗಡಿನ ‘ಸೋಜಿಗದ ಸೂಜುಮಲ್ಲಿಗೆ’, ‘ಇನ್ನೂ ಯಾಕ ಬರಲಿಲ್ಲವಾ’ ಹಾಡುಗಳು ಜನರಂಜನೀಯ ಎನಿಸಿದವು. ‘ರಂಗಬಾರೋ ಪಾಂಡುರಂಗಬಾರೋ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡುಗಳೊಂದಿಗೆ ಕಾರ್ಯಕ್ರಮ ಮಂಗಳವಾಗಿ ಕೊನೆಗೊಂಡಿತು.
ಇವರಿಗೆ ತಬಲಾದಲ್ಲಿ ಶ್ರೀ ಮಾಧವ ಆಚಾರ್ಯ, ಹಾರ್ಮೋನಿಯಂನಲ್ಲಿ ಶ್ರೀ ಪ್ರಸಾದ್ ಕಾಮತ್, ಕೊಳಲಿನಲ್ಲಿ ಶ್ರೀ ಲೋಕೇಶ್ ಮೂಡಬಿದರೆ ಮತ್ತು ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ಇನ್ನಂಜೆ ಸಹವಾದನ ನೀಡಿರುತ್ತಾರೆ.
ಸರೋಜಾ ಆರ್. ಆಚಾರ್ಯ