ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಜಶ್ರೀ ಟಿ. ರೈ ಪೆರ್ಲ ಬರೆದ ‘ಮುಸ್ರಾಲೊ ಪಟ್ಟೋ’ ಕಾದಂಬರಿ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮವು ದಿನಾಂಕ 20-10-2023ರಂದು ಮೂಡಬಿದಿರೆಯ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಕೃತಿ ಅವಲೋಕಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ಸಮಾಜದ ಸಂಬಂಧಗಳು ಛಿದ್ರಗೊಂಡು ನೈತಿಕ ಅಧಃಪಥನಕ್ಕೊಳಗಾದಾಗ ನಾವೇ ಕಟ್ಟಿ ಬೆಳೆಸಿದ ಸಮೃದ್ಧ ವ್ಯವಸ್ಥೆ ಹೇಗೆ ವಿನಾಶದ ಹಾದಿಯನ್ನು ಹಿಡಿಯುತ್ತದೆ ಎಂಬುದನ್ನು ರಾಜಶ್ರೀ ಟಿ. ರೈ ಪೆರ್ಲ ಬರೆದ ‘ಮುಸ್ತಾಲೊ ಪಟ್ಟೋ’ ಕಾದಂಬರಿ ತೆರೆದಿಡುತ್ತದೆ. ಒಂದು ಗುತ್ತಿನ ಮನೆಯ ನೈತಿಕ ಅಧಃಪತನಕ್ಕೆ ಹೇಗೆ ಗುತ್ತಿನ ಮನೆಯ ನಾಯಕನ ಅಹಂಕಾರ ಕಾರಣವಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸಿದ ತುಳುವಿನ ಶ್ರೇಷ್ಠ ಕಾದಂಬರಿಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಕಾದಂಬರಿ ಇದು. ಗುತ್ತಿನ ಮನೆಯ ಒಳಗಡೆ ಇರುವ ಹೆಣ್ಣಿನ ಅಸಹನೆ, ನೋವು, ಸಂಕಟ, ವೇದನೆ, ಅಸ್ತಿತ್ವದ ಪ್ರಶ್ನೆಗಳನ್ನೊಳಗೊಂಡ ಅಂತರಂಗದ ಪಿಸುಧ್ವನಿಯನ್ನು ಬಹಳ ಮಾರ್ಮಿಕವಾಗಿ ಈ ಕಾದಂಬರಿ ದಾಖಲಿಸಿದೆ. ಈ ಕಾದಂಬರಿ ಪ್ರತಿಯೊಬ್ಬರಲ್ಲೂ ಒಂದು ಗಾಢ ಮೌನ ಹಾಗೂ ವಿಷಾದ ಭಾವದ ಜೊತೆಗೆ ಹೊಸ ಚಿಂತನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ತುಳುವಿನ ಓದುಗರಿಗೆ ಹೊಸ ಸಂವೇದನೆಯನ್ನು ನೀಡಿ, ತುಳುವಿನ ಸಮೃದ್ಧ ಬದುಕನ್ನು ಮತ್ತು ಆರಾಧನಾ ಪದ್ಧತಿಯನ್ನು ತಿಳಿಸುವ ಒಂದು ಸಾಂಸ್ಕೃತಿಕ ಕಥನ. ಈ ಕಾದಂಬರಿ ಆರಾಮ ಖುರ್ಚಿಯಲ್ಲಿ (ಈಸೀ ಚೇರ್) ಕುಳಿತು ಬರೆದ ಕಥನವಲ್ಲ ಕಾದಂಬರಿಗಾರ್ತಿಯ ಶ್ರಮ ಪ್ರತಿ ಹಂತದಲ್ಲೂ ನಮ್ಮ ಅರಿವಿಗೆ ಬರುತ್ತದೆ.” ಎ೦ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈರೋಡಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಡಾ. ಜ್ಯೋತಿ ರೈ ವಂದಿಸಿ, ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.
ಪುಸ್ತಕದ ಪ್ರತಿಗಳು ಮಂಗಳೂರಿನ ನವಕರ್ನಾಟಕ ಪಬ್ಲಿಕೇಶನ್ ನಲ್ಲಿ ಲಭ್ಯವಿದ್ದು, ಬೆಲೆ ರೂಪಾಯಿ 450/-