1 ಏಪ್ರಿಲ್ 2023, ಮುಂಬೈ: ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ – 2022ರ ಫಲಿತಾಂಶ ಪ್ರಕಟಗೊಂಡಿದೆ.
ಡಾ. ಬೇಲೂರು ರಘುನಂದನ್ ಅವರ “ಶರ್ಮಿಷ್ಟೆ” ನಾಟಕಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ.
ನಾಟಕಕಾರ, ನಟ, ನಿರ್ದೇಶಕ, ಲೇಖಕ ಡಾ. ಬೇಲೂರು ರಘುನಂದನ್ ಇವರು ಶ್ರೀ ರಮೇಶ್ ಬಿ. ಆರ್. ಮತ್ತು ಶ್ರೀಮತಿ ಸುಬ್ಬಲಕ್ಷ್ಮೀ ದಂಪತಿಗಳ ಸುಪುತ್ರ. ಬೆಂಗಳೂರಿನ ವಿಜಯನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ಇವರಿಗೆ ಕಾಜಾಣ ಬಳಗದ ಮೂಲಕ ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವವಿದೆ. 1996ರಲ್ಲಿ ರಂಗಭೂಮಿ ಪ್ರವೇಶಿಸಿದ ಇವರು ನಾಟಕ ನಿರ್ದೇಶನ ಮಾಡುವಲ್ಲಿಂದ ಬಣ್ಣ ಹಚ್ಚಿ ಅಭಿನಯ ಮಾಡುವುದರಲ್ಲೂ ಸೈ ಅನ್ನಿಸಿ ಕೊಂಡವರು.
ಸುಮಾರು 27ಕ್ಕೂ ಮಿಕ್ಕಿ ನಾಟಕ ರಚನೆ ಮಾಡಿದ ಇವರು 9ಕ್ಕೂ ಹೆಚ್ಚು ನಾಟಕ ನಿರ್ದೇಶನ ಮಾಡಿದ್ದಾರೆ. ನಾಟಕ ಸಾಹಿತ್ಯ ಮತ್ತು ರಂಗಭೂಮಿಯನ್ನು ಕುರಿತ ಸಂಶೋಧನಾ ಮಹಾ ಪ್ರಬಂಧ ರಚಿಸಿದ ಖ್ಯಾತಿ ಇವರದ್ದು. “ಕನ್ನಡ ರಂಗಭೂಮಿ ಮತ್ತು ಸಿನಿಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು” ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಶ್ರೀಮತಿ ವಿನುತಾ ಸುಧೀಂದ್ರ ಹಂಚಿನಮನಿ ಅವರ “ಪರಿತ್ಯಕ್ತೆ” ನಾಟಕವು ದ್ವಿತೀಯ ಸ್ಥಾನ ಪಡೆದಿದೆ.
ಜೀವ ವಿಮಾ ನಿಗಮದ ನಿವೃತ್ತ ವಿಭಾಗೀಯ ಅಧಿಕಾರಿಯಾದ ಇವರು ನಿವೃತ್ತಿ ಹೊಂದಿದ ಮೇಲೆ ಅವರ ಊರಾದ ಧಾರವಾಡದಲ್ಲಿ ಇದ್ದು ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿ.ಎಸ್ಸಿ, ಎಂ.ಎ.ಎಲ್.ಎಲ್.ಬಿ. ಇವರ ವಿದ್ಯಾರ್ಹತೆ. ಓದುವುದು ಬರೆಯುವುದು ಇವರ ಹವ್ಯಾಸ. ಪ್ರಸ್ತುತ ಉತ್ತರ ಕನ್ನಡ ಲೇಖಕಿಯರ ಸಂಘದ ಸದಸ್ಯೆಯಾಗಿದ್ದಾರೆ. ಧಾರವಾಡದ ಆಕಾಶವಾಣಿ ಕೇಂದ್ರದಿಂದ ಮಹಿಳಾ ರಂಗ, ವನಿತಾ ವಿಹಾರದಲ್ಲಿ ಕಾರ್ಯಕ್ರಮಗಳನ್ನು ನೀಡಿದ ಅನುಭವ ಇವರಿಗಿದೆ. ಹದಿನೈದು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವುಗಳಲ್ಲಿ ಕವನ ಸಂಕಲನ, ಆತ್ಮಚರಿತ್ರೆ, ಕಾದಂಬರಿ, ಪ್ರಬಂಧಗಳು ಮತ್ತು ಕಥಾ ಸಂಕಲನಗಳು ಸೇರಿವೆ.
ಚೊಚ್ಚಲ ಕವನ ಸಂಕಲನ “ಅಲೆಗಳು” ಚೇತನ ಪ್ರಕಾಶನದ ಸಾಹಿತ್ಯ ಪುರಸ್ಕಾರ ಬಹುಮಾನ ಪಡೆದುಕೊಂಡಿದೆ. “ಭಾರತ ಲೋಕ” ಪ್ರಬಂಧ ಕೃತಿಗೆ ಕರುನಾಡ ಚೇತನ ಸಾಹಿತ್ಯ ಪ್ರಶಸ್ತಿ, “ಒಂಟಿ ಹಕ್ಕಿಯ ಪಯಣ” ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಗೌರ ಭಟ್ ದತ್ತಿ ನಿಧಿ ಪ್ರಶಸ್ತಿ. “ಪರಿತ್ಯಕ್ತೆ” ನಾಟಕ ಗುಚ್ಛಕ್ಕೆ ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿಯಿಂದ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಲಭಿಸಿದೆ.
ತೃತೀಯ ಬಹುಮಾನಕ್ಕೆ ಇಬ್ಬರು ಅರ್ಹರಾಗಿರುತ್ತಾರೆ. ಉಡುಪಿಯ ಅಭಿಲಾಷಾ ಎಸ್. ಇವರ “ಭೀಷ್ಮಾವಲೋಕನ”ಕ್ಕೆ ತೃತೀಯ ಸ್ಥಾನ ಲಭಿಸಿದೆ.
ಅಭಿಲಾಷಾ ಎಸ್. ಶ್ರೀ ಎಚ್. ಶ್ರೀಧರ ಹಂದೆ ಮತ್ತು ಶ್ರೀಮತಿ ಎಚ್. ವಸುಮತಿ ಹಂದೆಯವರ ಸುಪುತ್ರಿ. ಎಂ.ಎ., ಎಂ.ಎಡ್. ಪಧವೀಧರರು ಮತ್ತು ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ.) ಬ್ರಹ್ಮಾವರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಮತ್ತು ಸಾಹಿತ್ಯ ಆಸಕ್ತಿಯ ಕ್ಷೇತ್ರ. ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನದ ತರಬೇತಿಯನ್ನು ಬಾಲ್ಯದಿಂದಲೇ ಪಡೆದಿದ್ದು, ರಂಗಭೂಮಿ ನಟಿಯಾಗಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ 2019-20ನೇ ಸಾಲಿನ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಹಿರಿಮೆ ಇವರದು. 8 ನಾಟಕಗಳು, ‘ಹಾ ಸೀತೆ’ ಎನ್ನುವ ಅಂಕಣ ಬರಹ ಮಾತ್ರವಲ್ಲದೆ ಅನೇಕ ಕಥೆಗಳು, ಕವನಗಳು, ವಿಮರ್ಶಾ ಬರಹಗಳು ಇವರ ಲೇಖನಿಯಿಂದ ಹೊರ ಬಂದ ಅಮೂಲ್ಯ ಕೃತಿಗಳು ಮತ್ತು ಬರಹಗಳು.
ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಕಲೆ ಸಾಹಿತ್ಯ ಮತ್ತು ಶಿಕ್ಷಣದ ಕುರಿತಾದ ಗೋಷ್ಠಿಗಳಲ್ಲಿ ವಿಚಾರ ಮಂಡನೆ ಮಾಡಿದ ಖ್ಯಾತಿ ಇವರಿಗಿದೆ. ಇವರು ಆಕಾಶವಾಣಿಯಲ್ಲಿ ನೀಡಿದ ಭಾಷಣಗಳು ಜನ ಮೆಚ್ಚುಗೆ ಪಡೆದಿವೆ. ರಂಗ ಪ್ರಾತ್ಯಕ್ಷಿಕೆ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರತಿಭಾವಂತರು. “ದಿಂಸಾಲ್” ಸಂಘಟನೆ, “ತಿಂಗಳ ಬೆಳಕು” ತಿಂಗಳ ಕಾರ್ಯಕ್ರಮ. “ಅನಿಷ ಕೂಟ” ಉಡುಪಿ ಇವುಗಳಲ್ಲಿ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿದವರು ಅಭಿಲಾಷಾ ಎಸ್.
ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಇವರ “ಚೇಕತ್ತಿ” ನಾಟಕವೂ ತೃತೀಯ ಬಹುಮಾನಕ್ಕೆ ಪಾತ್ರವಾಗಿದೆ.
ಶ್ರೀಮತಿ ರಾಜಶ್ರೀ ಟಿ. ರೈಯವರು ಕಾಸರಗೋಡಿನ ಪೆರ್ಲದವರು. ಗೃಹಿಣಿಯಾಗಿರುವ ಇವರು ವಿಜ್ಞಾನ ಪಧವೀಧರೆ. ಸಾಹಿತ್ಯದ ವಿದ್ಯಾರ್ಥಿ ಅಲ್ಲದಿದ್ದರೂ ಸಾಹಿತ್ಯದಲ್ಲಿ ಅದ್ಭುತ ಕೃಷಿ ಮಾಡಿದ್ದಾರೆ. ಬರವಣಿಗೆ ಮತ್ತು ಸಂಶೋಧನೆಯನ್ನು ಹವ್ಯಾಸವನ್ನಾಗಿಸಿಕೊಂಡವರು ಇವರು. ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಕಟಿಸಿದ ಸಂಶೋಧನಾ ಕೃತಿ ಸೇರಿದಂತೆ ಇವರ ಹನ್ನೊಂದು ಪ್ರಕಟಿತ ಕೃತಿಗಳು ಮತ್ತು ‘ಚೇಕತ್ತಿ’ ಸೇರಿ ಒಟ್ಟು ನಾಲ್ಕು ಅಪ್ರಕಟಿತ ನಾಟಕಗಳು ಇವೆ. ತುಳು, ಕನ್ನಡ, ಹವ್ಯಕ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಇವರು ಹಲವಾರು ಪ್ರಶಸ್ತಿಗಳಿಗೆ ಭಜನರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯ ಕೃತಿಗೆ ಗೌರವ ಪ್ರಶಸ್ತಿ. ಸತತ ಎರಡು ಸಲ ರತ್ನ ವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ. ಕೇರಳ ಸರಕಾರದ ಜಿಲ್ಲಾಡಳಿತ ಗೌರವ, ಕೇಮರ ಬಲ್ಲಾಳ ಕಥಾ ಪ್ರಶಸ್ತಿ ಇವರ ಸಾಹಿತ್ಯ ಕೃಷಿಯ ಪ್ರೌಢಿಮೆಗೆ ದೊರೆತ ಗೌರವಗಳು.