ಉದ್ಘಾಟನಾ ಸಮಾರಂಭ: ಉದ್ಘಾಟನಾ ಸಮಾರಂಭವು ದಿನಾಂಕ 22 ಮಾರ್ಚ್ 2023 ಸಂಜೆ 6ಕ್ಕೆ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಂಡ್ಯ ರಮೇಶ್, ರಂಗಭೂಮಿ ಮತ್ತು ಚಲನಚಿತ್ರ ನಟರು ಹಾಗೂ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮೈಸೂರು ಹವ್ಯಾಸಿ ರಂಗಕಲಾವಿದರು ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣ: ದಿನಾಂಕ: 23.03.2023 ಬೆಳಗ್ಗೆ 10:30 “ಹವ್ಯಾಸಿ ರಂಗಭೂಮಿ-ನೆನ್ನೆ, ಇಂದು, ನಾಳೆ” ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಎಚ್.ಎಸ್. ಉಮೇಶ್, ಹಿರಿಯ ರಂಗ ನಿರ್ದೇಶಕರು ಹಾಗೂ ಹೊರೆಯಾಲ ದೊರೆಸ್ವಾಮಿ, ನಾಟಕಕಾರರು ವಿಚಾರ ಮಂಡನೆ ಮಾಡಲಿದ್ದಾರೆ.
ಎಚ್.ಆರ್.ಆಧ್ಯಾಪಕ್, ಸತೀಶ್ ಬಿ.ಎಸ್, ಶ್ರೀಧರ್ ಎನ್.ಎಸ್, ಕೆ.ಆರ್.ಸುಮತಿ, ಮೈಮ್ ರಮೇಶ್, ನಾಗೇಂದ್ರ ಕುಮಾರ್, ಧನಂಜಯ, ನಾಗಭೂಷಣ್, ರವಿ ಪ್ರಸಾದ್, ಶ್ರೀನಿವಾಸು, ದಿನಮಣಿ, ಟಿ.ಪಿ.ಗೌತಮ್, ಅಂಕರಾಜು ಎನ್.ಕೊಳ್ಳೇಗಾಲ, ಶ್ರೇಯಸ್ ಪಿ., ಚೇತನ್ ಜಗತಾಪ್, ರಾಧಾ ನಾರಾಯಣಗೌಡ, ಆರ್.ಉಮಾದೇವಿ, ಮೇಘ ಸಮೀರ, ಮಹೇಶ್ ಹುಯಿಲಾಳು, ಮಧು ಮಳವಳ್ಳಿ, ನಾಗೇಶ್ ಹಾಗೂ ದಿನೇಶ್ ಚಮ್ಮಾಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯಾನ್ನು ಹಿರಿಯ ರಂಗಕರ್ಮಿಗಳಾದ ರಾಜಶೇಖರ ಕದಂಬ ವಹಿಸಲಿದ್ದಾರೆ. ವಿಚಾರ ಸಂಕಿರಣದ ನಿರೂಪಣೆಯನ್ನು ಮಾಧವ್ ಖರೆ ನಿರ್ವಹಿಸಲಿದ್ದಾರೆ.
ಸಮಾರೋಪ ಸಮಾರಂಭ: ದಿನಾಂಕ 27 ಮಾರ್ಚ್ 2023 ರಂದು ಸಂಜೆ 6ಕ್ಕೆ ಕಿರುರಂಗ ಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ನುಡಿಯನ್ನು ಹಿರಿಯ ರಂಗ ನಿರ್ದೇಶಕರು ಸಿ. ಬಸವಲಿಂಗಯ್ಯ ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂದಿರಾ ನಾಯರ್ ಹಿರಿಯ ರಂಗಕರ್ಮಿಗಳು, ಡಾ.ಎಂ.ಡಿ.ಸುದರ್ಶನ್, ಸಹಾಯಕ ನಿರ್ದೇಶಕರು ಭಾಗವಹಿಸಲಿದ್ದಾರೆ. ವಿಶ್ವ ರಂಗಭೂಮಿ ಅಂಗವಾಗಿ ಅಂದು ವಿಶ್ವ ರಂಗಭೂಮಿ ಸಂದೇಶವನ್ನು ರಂಗವಲ್ಲಿ ಬಿ.ರಾಜೇಶ್ ಓದಲಿದ್ದರೆ.
ನಾಟಕ ಪ್ರದರ್ಶನ: ಮಾರ್ಚ್ 22, ಬುಧವಾರ ಸೇತು ಮಾಧವನ ಸಲ್ಲಾಪ, ಮಾರ್ಚ್ 23 ಅರಣ್ಯ ಕಾಂಡ, ಮಾರ್ಚ್ 24 ನಮ್ಮ ನಿಮ್ಮೊಳಗೊಬ್ಬ, ಮಾರ್ಚ್ 25 ಸಂಬಂಜ ಅನ್ನೋದು ದೊಡ್ಡದು ಕನಾ. ಮಾರ್ಚ್ 26 ವಾರಸುದಾರ ಹಾಗೂ ಮಾರ್ಚ್ 27 ಬೇಕಾಗಿದ್ದಾರೆ, ನಾಟಕಗಳು ಪ್ರದರ್ಶನಗೊಳ್ಳಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ದೀಪಕ್ ಮೈಸೂರು, ಸಂಚಾಲಕರು, ಮೈಸೂರು ರಂಗಹಬ್ಬ, ದೂರವಾಣಿ: +91 98 45 075762
ಮೈಸೂರು ರಂಗಹಬ್ಬ: ಇದೇ ಮೊದಲ ಬಾರಿಗೆ ವೇದಿಕೆ ಹಮ್ಮಿಕೊಂಡಿರುವ ‘ಮೈಸೂರು ರಂಗಹಬ್ಬ’ ವೇದಿಕೆಯ ಒಂದು ಮಹತ್ವಪೂರ್ಣ ಕಾರ್ಯಕ್ರಮ. ನಗರ ಹವ್ಯಾಸಿ ರಂಗತಂಡಗಳಿಗೆ ಒಂದು ವೇದಿಕೆ ಒದಗಿಸಿ ನಾಟಕ ಪ್ರಯೋಗ ಏರ್ಪಡಿಸುವ ಮೂಲಕ ಎಲ್ಲಾ ತಂಡಗಳನ್ನು ಪರಸ್ಪರ ಬೆಸೆಯುವ ಹಾಗೂ ವೇದಿಕೆಯ ‘ಸಮ ಒಡನಾಡಿ’ಗಳನ್ನಾಗಿ ಮಾಡುವ ಮಹತ್ತರ ಉದ್ದೇಶ ವೇದಿಕೆಯದ್ದಾಗಿದೆ. ಈ ಬಾರಿ ಆರುದಿನಗಳ ಹಬ್ಬವಾಗಿದ್ದು ಮುಂದೆ ಇದನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಚರಿಸುವ, ಜಿಲ್ಲೆ ಹಾಗೂ ನಾಡಿಗೆ ವಿಸ್ತರಿಸುವ ಆಸೆ ಹಾಗೂ ಯೋಜನೆಯನ್ನು ವೇದಿಕೆ ಹೊಂದಿದೆ.
ನಾಟಕಗಳ ವಿವರ:
22.03.20223ರಂದು ಸಾತ್ವಿಕಿ ಫೌಂಡೇಶನ್(ರಿ.) ಮೈಸೂರು ಅಭಿನಯಿಸುವ ನಾಟಕ ‘ಸೇತು ಮಾಧವನ ಸಲ್ಲಾಪ’ ನಾಟಕದ ಕುರಿತು.
ಸಲ್ಲಾಪ-ಮಾತು ಇದು ವ್ಯಕ್ತಿಗಳ ಸಲ್ಲಾಪವಲ್ಲ, ವ್ಯಕ್ತಿತ್ವಗಳ ಸಲ್ಲಾಪ, ಪ್ರೀತಿಯ ಸಲ್ಲಾಪ, ಪಶ್ಚಾತ್ತಾಪದ ಸಲ್ಲಾಪ, ಚಂಚಲ ಚಿತ್ತತೆಯ ಸಲ್ಲಾಪ, ವ್ಯವಸ್ಥೆಯ ಸಲ್ಲಾಪ.ಇದು ಪ್ರಬುದ್ಧತೆಯ ಸಂಭಾಷಣೆಗಳಿಂದ ಕೂಡಿದ ನಾಟಕ. ಪ್ರೀತಿಯ ಪದ ಬೇರೆ. ಅದನ್ನು ವ್ಯಕ್ತಪಡಿಸುವ ವಿಧಾನಗಳು ಬೇರೆ ಬೇರೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧದ ಮೇಲೆ, ವ್ಯಕ್ತಿತ್ವಗಳ ಮೇಲೆ ಬೆಳಕು ಚೆಲ್ಲುವ ನಾಟಕ. ದೇಹದ ಬಲಹೀನತೆಗಳು ಪ್ರೀತಿಸುವುದಕ್ಕೆ ಎಂದೂ ತೊಡಕಾಗುವುದಿಲ್ಲ ಎಂಬುದನ್ನು ಈ ನಾಟಕ ಬಿಂಬಿಸುತ್ತದೆ.



ಸೀತೆ ಮತ್ತು ರಾಮ ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು ದಂಪತಿಗಳಂತಲ್ಲ ಅರ್ಥಾತ್ ವನವಾಸದಲ್ಲಿ ಮಗು ಪಡೆಯುವುದು ಸಾಧುವಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮ ಕಥೆಯೂ ಹೌದು. ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿಬಣ್ಣದ ಸುಂದರಿ. ಶೂರ್ಪನಖಿ ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯದು ಕೊಡುವ ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ. ರಾಮ, ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಶೂರ್ಪನಖಿ ಅಸುರಳೆಂಬುದು ಇವಳ ಕೀಳರಿಮೆಯಲ್ಲ.


‘ನಮ್ಮ ನಿಮ್ಮೊಳಗೊಬ್ಬ’ ರಾಜೇಂದ್ರ ಕಾರಂತರ ಬತ್ತಳಿಕೆಯಿಂದ ಬಂದ ಅದ್ಬುತ ಥ್ರಿಲ್ಲರ್ ನಾಟಕ. ಅನೇಕ ಪ್ರದರ್ಶನಗಳನ್ನು ಕಂಡಿರುವ ಈ ನಾಟಕಪ್ರೇಕ್ಷಕರನ್ನು ಕೊನೆತನಕವೂ ಹಿಡಿದಿಡುವ ಕಲಾವಂತಿಕೆ ಹೊಂದಿದೆ. ನಾಟಕದಲ್ಲಿ ಬಳಸಿರುವ ಭಾಷೆ ಮಲೆನಾಡ ಸೊಗಡನ್ನು ಉಳಿಸಿಕೊಂಡಿದ್ದು ಪ್ರೇಕ್ಷಕರಿಗೆ ಮುದ ನೀಡುವುದರಲ್ಲಿ ಯಶಸ್ವಿಯಾಗಿದೆ. ಮಳೆಯಲ್ಲಿ ಮೀಯುತ್ತಿರುವ ಕುಮಾರಪರ್ವತದ ತಪ್ಪಲಿನಲ್ಲಿರುವ ಮನೆಯ ಸೆಟ್ ಅತ್ಯಂತ ಆಪ್ತವಾಗಿದೆ. ಆ ಮನೆಯಲ್ಲಿನ ಕುಟುಂಬ ಹಾಗು ಅಲ್ಲಿ ಇರುವ ಅತಿಥಿಗಳಿಗೆಗಾಬರಿ ಹುಟ್ಟಿಸುವ ಒಂದು ಕೊಲೆ, ಮನೆಗೆ ತನಿಖೆಗೆ ಬರುವ ಇನ್‌ಸ್ಪೆಕ್ಟರ್ ‘ನಿಮ್ಮಲ್ಲಿಯೇ ಕೊಲೆಗಾರ ಇದ್ದಾನೆ’ ಎಂದಾಗ ಆಗುವ ಭಯ ಹಾಗೂ ತನಿಖೆಯಲ್ಲಿನ ತಿರುವುಗಳು ಉತ್ತಮವಾಗಿ ಹೆಣೆದಿರುವ ಮಾತುಗಳಿಂದ ಆಸಕ್ತಿ ಹುಟ್ಟಿಸುತ್ತವೆ. ಕೊಲೆಗಾರ ಯಾರು ಎನ್ನುವುದು ಕ್ಷಣಕ್ಷಣಕ್ಕೂ ಬದಲಾಗಿ ಉತ್ತಮ ಥ್ರಿಲ್ಲ್ ಮೂಡಿಬರುತ್ತದೆ.


ದೇವನೂರು ಮಹದೇವರವರು ಗ್ರಾಮ ಭಾರತ ಕಂಡಂಥ ಕಥಾಲೋಕದ ಪ್ರಮುಖ ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’, ‘ಡಾಂಬರು ಬಂತು’, ‘ಅಮಾಸ’, ಹಾಗೂ ಓಡಲಾಳ’ ಕಥೆಗಳನ್ನು ರಂಗರೂಪಗೊಳಿಸಲಾಗಿದೆ, ದೇಮರವರ ಕಥಾಲೋಕದ ಸಾಮಾಜಿಕ ಲೇಖಕರು ಎಂಬ ಅರಿವಿನಿಂದ ದೇಮರವರ ವಿಶಿಷ್ಟ ಕಥೆಗಳಾದ ‘ಮಾರಿಕೊಂಡವರು’, ಬದುಕಿನ ನಾನಾ ಮಜುಲುಗಳನ್ನು ಅವಲೋಕಿಸಿ ರಂಗಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಂದ ರಂಗ ಪ್ರಯೋಗಕ್ಕೆ ಸಿದ್ಧಪಡಿಸಲಾಗಿದೆ, ಅನೇಕ ರಂಗ ಪರಿಣಿತರೊಂದಿಗೆ ಸಮಾಲೋಚಿಸಿ ಕಥಾಲೋಕದಿಂದ ರಂಗಲೋಕಕ್ಕೆ ಪಯಣಿಸಿದ್ದೇವೆ. ಡಾ.ರಾಜಪ್ಪ ದಳವಾಯಿರವರು ಹೊಸತೊಂದು ಅರ್ಥಪೂರ್ಣ ರಂಗ ಕೊಡುಗೆ ನೀಡಿದ್ದಾರೆ. ದೇಮರವರ ಕಥೆಗಳನ್ನು ರಂಗ ಕೃತಿ ಮಾಡಲು ನಾವು ಹೆಚ್ಚೇನು ಕ್ರಮ ವಹಿಸಬೇಕಾಗಲಿಲ್ಲ. ಕಥನಕಾರರೇ ನಿರ್ಮಿಸಿರುವ ಪಾತ್ರ ನಿರ್ವಹಣೆ, ಸಾಹಿತ್ಯದ ಮಹತ್ವದ ಬೃಹತ್ ರೂಪಕಗಳು, ಅದೇ ನಿರ್ಮಿತಿಯಲ್ಲಿ ನಾವು ಮುಂದುವರಿದು ರಂಗ ದೃಶ್ಯಗಳನ್ನು ರೂಪಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ.
26.03.2023ರಂದು ‘ನಿರಂತರ’ ಮೈಸೂರು ಅಭಿನಯಿಸುವ ‘ವಾರಸುದಾರ’
ಈ ನಾಟಕ ಇತಿಹಾಸದ ವಿವರಗಳನ್ನು ಪ್ರಸ್ತುತಪಡಿಸಿದರೂ ವಾಸ್ತವದಲ್ಲೂ ಪ್ರಧಾನ ವಿಚಾರವಾಗಿಯೇ ಕಾಣಿಸುತ್ತದೆ. ರಾಜಕೀಯ ಘಟನಾವಳಿಗಳ ಜಟಿಲತೆಯ ಕೇಂದ್ರವಾಗಿರುವ ಮೂರು ಪ್ರಧಾನ ಪಾತ್ರಗಳ ಆಂತರಿಕ ಹಾಗೂ ಬಹಿರಂಗ ಯುದ್ಧವೇ ಈ ನಾಟಕದ ಬಹುಮುಖ್ಯ ವಸ್ತು. ಇತಿಹಾಸದ ಕ್ರೂರ ರಾಜನೀತಿಯ ಆಟಿಕೆಗಳಾಗಿ ಮೊಘಲ್ ವಂಶಜರಾದ ಮೂವರು: ಶಹಜಹಾನ್, ಔರಂಗಜೇಬ್ ಮತ್ತು ದಾರಾ ಶಿಖೋ. ಕೇವಲ ತಮ್ಮ ವಯಕ್ತಿಕ ನಿಲುವುಗಳಿಗೆ ಮತ್ತು ತಾವು ನಂಬಿರುವ ತತ್ವಗಳೇ ಈ ಲೋಕದ ಅತಿಮುಖ್ಯ ವಿಚಾರ ಎನ್ನುವ ಧೋರಣೆಯ ನಡುವೆ ಸಾಮಾನ್ಯ ಜನರು ಹೇಗೆ ನರಳುತ್ತಾರೆ, ಬಡವಾಗುತ್ತಾರೆ ಎನ್ನುವ ವಾಸ್ತವ ಈ ನಾಟಕದಲ್ಲಿ ಪ್ರಸ್ತುತಗೊಳ್ಳುತ್ತದೆ. ದಾರಾ ಶಿಖೋ ಇತಿಹಾಸದಾಚೆಗಿನ ತವಸ್ಸುಫ್ ದುನಿಯಾದ ಸಂಪರ್ಕದಿAದ ತನ್ನ ಮರ್ತ್ಯದ ಇತಿಹಾಸದ ಮಿತಿಗಳನ್ನು ಮೀರುವ ವಾಂಛೆಯನ್ನು ಹೊಂದಿದ್ದರೆ, ಅಧಿಕಾರ ರಾಜಕಾರಣದಲ್ಲಿ ಗೆಲುವಿಗಾಗಿ ಯಾರನ್ನಾದರೂ ಯಾವುದನ್ನಾದರೂ ಬಲಿಕೊಡುತ್ತೇನೆ ಎನ್ನುವ ದಾರಿಯಲ್ಲಿ ಔರಂಗಜೇಬ್ ಕಾಣಿಸಿಕೊಳ್ಳುತ್ತಾನೆ. ಇನ್ನು ಶಹಜಹಾನನು ಹರೆಯದಲ್ಲಿ ಔರಂಗಜೇಬನಂತೆ ರಕ್ತಸಂಬಂಧಿಗಳನ್ನು ಬಡಿದುಹಾಕಿ ಅವರ ಹೆಣಗಳ ಮೆಟ್ಟಿಲ ಮೇಲೆ ಗಾದಿಯೇರಿದ್ದರೂ, ಸಭ್ಯನಂತೆ ವರ್ತಿಸುತ್ತಾನೆ.


‘ಬೇಕಾಗಿದ್ದಾರೆ’ ಒಂದು ಸುಂದರ ಸಾಮಾಜಿಕ ಹಾಸ್ಯ ನಾಟಕ. ಬೇಲೂರು ಕೃಷ್ಣಮೂರ್ತಿಯವರ ‘ಮುದುಕನ ಮದುವೆ’ ನಾಟಕವನ್ನು ಮಾರ್ಪಡಿಸಿ ಪ್ರಸ್ತುತ ಕಾಲಘಟ್ಟಕ್ಕೆ ಅನ್ವಯಿಸುವಂತೆ ಈ ನಾಟಕವನ್ನು ರೂಪುಗೊಳಿಸಲಾಗಿದೆ. ಪ್ರೇಕ್ಷಕರಿಗೆ ಕೇವಲ ಮನೋರಂಜನೆಯ ದೃಷ್ಟಿಕೋನವನ್ನಿಟ್ಟುಕೊಂಡು ಉದ್ಯೋಗ ಸೃಷ್ಟಿಯಲ್ಲಿ ಉಂಟಾಗುವ ಗೊಂದಲಗಳನ್ನು ನವಿರು ಹಾಸ್ಯದ ಮುಖೇನ ಪ್ರಸ್ತುತಪಡಿಸುತ್ತದೆ.‘ಮಾಡಿ


