ಮನುಷ್ಯನಲ್ಲಿ ವೃತ್ತಿ ಬೇರೆ ಪ್ರವೃತ್ತಿ ಬೇರೆ. ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪ್ರವೃತ್ತಿಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು, ತಾನು ತನ್ನವರೊಂದಿಗೆ ನೆಮ್ಮದಿಯಿಂದ ಇರಬೇಕು ಎಂದು ವ್ಯಕ್ತಿ ಬಯಸುತ್ತಾನೆ.ಅದು ಜೀವನ. ಆದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಈ ಜೀವ ನಿರಂತರ ಸುಖವನ್ನು ಬಯಸುತ್ತದೆ.ಸುಖ ಪಡೆಯುವುದಕ್ಕೆ ಹಲವು ಹವಣಿಕೆಗಳನ್ನು ಸದಾ ಮಾಡುತ್ತಲೆ ಇರುತ್ತದೆ. ಕುಟುಂಬದಲ್ಲಿ ಸ್ವಲ್ಪ ಏನಾದರೂ ಏರು ಪೇರುಗಳಾದರೆ ಜೀವನ ಸದಾಕಾಲ ಬೇಸರದ ಚೌಕಟ್ಟಿನಲ್ಲಿ ಜಾಗರಣೆ ಮಾಡುತ್ತಿರುತ್ತದೆ.ಬಂದ ಬೇಸರವನ್ನು ಕಳೆದುಕೊಳ್ಳಲು ಪಲಾಯನವಾದವನ್ನು ಮೈ ಮನದಲ್ಲಿ ಅಳವಡಿಸಿಕೊಳ್ಳುವದು ಇಂದು ಸ್ವಾಭಾವಿಕ ಗುಣ ಧರ್ಮವಾಗಿದೆ.ಆತ್ಮ ರತಿಗೆ ‘ಸುಳ್ಳು’ ಹೇಳುವದನ್ನು ಉಸಿರಾಟದಷ್ಟು ಸಹಜ ಮಾಡಿಕೊಂಡಿರುತ್ತಾರೆ.
ಪೂರ್ವದಲ್ಲಿ ಭಾರತೀಯ ಅವಿಭಕ್ತ ಕುಟುಂಬದಲ್ಲಿ ಬೇಸರ ಎಂಬ ‘ಧ್ವನಿ’ ಇದ್ದಿದ್ದಿಲ್ಲ.ಇಂದಿನ ಜಾಗತಿಕರಣದ ವಿಭಕ್ತ ಕುಟುಂಬದಲ್ಲಿ ಬೇಸರದ ಧ್ವನಿ ಗಡಿಯಾರದ ಗಂಟೆಯಂತೆ ಸದಾ ಬಾರಿಸುತ್ತಲೇ ಇರುತ್ತದೆ. ಬಾಲ್ಯದಿಂದ ಕಟ್ಟು – ನಿಟ್ಟಿನ ಸಂಸ್ಕಾರದಲ್ಲಿ ಬೆಳೆದುಬಂದ ವ್ಯಕ್ತಿಗಳು ನಿವೃತ್ತಿಯ ನಂತರ ಆಧ್ಯಾತ್ಮ ಎಂಬ ಗುಹೆಯಲ್ಲಿ ಹೊಕ್ಕು,ನೆಮ್ಮದಿ ಹುಡುಕಲು ಪ್ರಯತ್ನಿಸುತ್ತಾರೆ. ಕೆಲವರು ಪಡೆಯುತ್ತಾರೆ. ಮತ್ತೆ ಕೆಲವರು ಹತಾಶರಾಗುತ್ತಾರೆ.ಸಂತೆಯ ಸರಕಿನಂತೆ ಸದಾ ಆಕರ್ಷಿತರಾಗಿದ್ದುಕೊಂಡು ,ಬದುಕಿನ ಬಂಡಿ ಸಾಗಬೇಕು ಎಂಬ ಕುಟುಂಬ ಮೀಮಾಂಸೆ ಇಪ್ಪತ್ತೊಂದನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ.
ಧಾರವಾಡದ ರೇಲ್ವೆ ಸ್ಟೇಷನ್ ವಯಸ್ಸಾದ ಗಂಡಸರಿಗೆ ಕಾಲ ಕಳೆಯಲು ಒಂದು ಅದ್ಭುತ ಜಾಗೆ. ತಮ್ಮ ಇಡೀ ಜೀವನದಲ್ಲಿ ಯಾರನ್ನೂ ಮಾತನಾಡಿಸದ ಅನೇಕ ಅಹಂಗಳು ಅಲ್ಲಿಗೆ ಬಂದು ‘ನಾನು ನಿಮ್ಮವರಪ್ಪಾ ಮಾತಾಡಿಸಿರಿ’ ಎಂದು ಹಲ್ಲು ಕಿರಿದು ಕೈ ಜೋಡಿಸಿ ಬೆಂಚ ಮ್ಯಾಲೆ ಕೂತು ತಮ್ಮ ಕುಟುಂಬದ, ತಮ್ಮ ಸಮಾಜದ ಉಭಯ ಕುಶಲೋಪರಿ ಮಾತನಾಡುತ್ತ ಷಡ್ರಸಗಳ ಆನಂದ ಪಡೆಯುತ್ತಾರೆ.ಇದು ದೇಶದ ಎಲ್ಲ ನಗರಗಳಲ್ಲಿ ನೋಡಲು ಸಿಗುವ ಒಂದು ಜೀವನ ನಾಟಕ.
ವೃದ್ಧಾಪ್ಯದ ಬದುಕನ್ನು ಬಿಂಬಿಸುವ ಒಂದು ನಾಟಕವನ್ನು ‘ಅಭಿನಯ ಭಾರತಿ’ ಜುಲೈ ಒಂದರಂದು ಧಾರವಾಡದ ಸೃಜನಾ ರಂಗ ಮಂದಿರದಲ್ಲಿ ತನ್ನ ’ ವಸಂತ ನಾಟಕೋತ್ಸವ’ದಲ್ಲಿ ಪ್ರದರ್ಶಿಸಿತು. ನಾಟಕದ ಹೆಸರು ‘ನಾ ತುಕಾರಂ ಅಲ್ಲ’ ಮೂಲ ಇಂಗ್ಲೀಷ್ ನಾಟಕ. ‘I’m Not Rappaport’ ರಚನೆ ‘Herb Gardener’.1980 ರ ಸುಮಾರಿಗೆ ಇಂಗ್ಲೆಂಡ್ ನಲ್ಲಿ ಮೂಡಿ ಬಂದ ನಾಟಕ. ಇದನ್ನು ಕನ್ನಡ ರೂಪಾಂತರ ಮಾಡಿದವರು ಶ್ರೀ ಎಸ್ ಸುರೇಂದ್ರನಾಥ.ನಿರ್ದೇಶನ ಶ್ರೀ ಶ್ರೀಪತಿ ಮಂಜನಬೈಲು. ಜನರಿಗೆ ಹಿಡಿಸಿದ ನಾಟಕ ಇದಾಗಿತ್ತು.
ಎಂಬತ್ತಾರರ ಗುರುನಾಥ, ಎಂಬತ್ತಮೂರರ ಕೃಷ್ಣಸ್ವಾಮಿಯವರ ಕತೆಯಿದು. ಅದರಲ್ಲಿ ಗುರುನಾಥ ದಿನಕ್ಕೊಂದು ರೂಪ ತೊಟ್ಟು ಸುಳ್ಳು ಹೇಳುತ್ತಾ, ಹೊಸ ಹೊಸ ಅವತಾರಗಳನ್ನು ತಾಳುತ್ತಾ ಹೋಗುತ್ತಾನೆ. ಅವನ ಮಾತನ್ನು ನಂಬಿದಂತೆ ನಟಿಸುತ್ತಾನೆ ಗುರುನಾಥ. ಸುಳ್ಳುಗಳನ್ನು ಹೇಳುವದು ಗುರುನಾಥನ ವೃತ್ತಿಯಾದರೆ, ಸುಳ್ಳುಗಳನ್ನು ಕೇಳುತ್ತಾ ಸಂಭ್ರಮಿಸುವದು ಕೃಷ್ಣಸ್ವಾಮಿಯ ಪ್ರವೃತ್ತಿಯಾಗಿರುತ್ತದೆ. ಪುರಂದರ ದಾಸರ ವಿಡಂಬನೆಯ ಕೀರ್ತನೆ ‘ಸುಳ್ಳು ನಮ್ಮಲ್ಲಿಲ್ಲವಯ್ಯಾ ಸುಳ್ಳೆ ನಮ್ಮನಿ ದೇವರು’ ಎಂಬುದು ಇವರಿಬ್ಬರ ಬದುಕು. ನಗರದ ಉದ್ಯಾನದ ಒಂದು ಬೆಂಚು ಇವರಿಬ್ಬರ ನಿತ್ಯ ಭೇಟಿಯ ಸ್ಥಳ. ಊರ ಮೊದಲೆ ಕೈಯಲ್ಲಿ ಒಂದು ಪೇಪರ ಹಿಡಿದುಕೊಂಡು ಓದುವ ನಟನೆ ಮಾಡುತ್ತ ಕುಳಿತುಕೊಳ್ಳುವ ಕೃಷ್ಣಸ್ವಾಮಿ, ಠಾಕ ಠೀಕಾಗಿ ಬಂದು ಸುಳ್ಳಿನ ಬುತ್ತಿಯನ್ನು ಬಿಚ್ವಿ ಇವನಿಗೂ ಸ್ವಲ್ಪ ಸ್ವಲ್ಪ ತಿನ್ನಲು ನೀಡುತ್ತ ಆತ್ಮ ರತಿಯಲ್ಲಿ ತೊಡಗಿಕೊಳ್ಳುತ್ತಿರುವವ ಗುರುನಾಥ. ಇವರಿಬ್ಬರ ಮಾತು – ಕತೆ ನವಿರಾದ ಹಾಸ್ಯದಿಂದ ಕೂಡಿತ್ತು. ಇದು ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ನೀಡಿತು. ನಾಟಕದಲ್ಲಿ ಗುರುನಾಥನಾಗಿ ಶ್ರೀ ಸುನೀಲ್ ಪತ್ರಿ, ಕೃಷ್ಣಸ್ವಾಮಿಯಾಗಿ ಶ್ರೀ ವೀರಣ್ಣ ಹೊಸಮನಿ ಅತ್ಯುತ್ತಮವಾಗಿ ಅಭಿನಯಿಸಿದರು. ನಾಟಕದ ಒಟ್ಟಾರೆ ಜೀವಂತಿಕೆಗೆ ಇವರಿಬ್ಬರ ಒಟ್ಟಾರೆ ನಟನೆ ಸಮರ್ಪಕ ಮತ್ತು ಪೂರಕವಾಗಿತ್ತು.
ಗುರುನಾಥ ಸುಳ್ಳು ಹೇಳಿದಾಗೊಮ್ಮೆಇದು ಸುಳ್ಳು, ಇದು ಸುಳ್ಳು. ಇದು ಪುಗ್ಗಾ ಎಂದು ಕೃಷ್ಣಸ್ವಾಮಿ ಕೂಗತ್ತಿದ್ದ. ತನ್ನ ಮಾತಿನಿಂದ ಸುಳ್ಳಿನ ನೆತ್ತಿಯನ್ನು ಕುಕ್ಕುತ್ತಿದ್ದ. ಗುರುನಾಥ ಅವನನ್ನು ಹತ್ತಿಕ್ಕುತ್ತಾ ಮತ್ತೆ, ಮತ್ತೆ ಹೊಸ ಹೊಸ ರೂಪ ತೊಟ್ಟು ಸುಳ್ಳುಗಳನ್ನು ಹೇಳುತ್ತಲೇ ಇರುತ್ತಿದ್ದ. ಇವರಿಬ್ಬರಿಗೂ ತಮ್ಮ ತಮ್ಮ ಸಾಮರ್ಥ್ಯ ಗೊತ್ತಿತ್ತು ಆದರೂ ಜಂಬದ ಕೋಳಿಯಂತೆ ನಡೆಯುತ್ತಿದ್ದರೂ.ಅವರಿಬ್ಬರಿಗೂ ‘ನಾನು ನಾನಲ್ಲ’ ಎಂಬುದು ಚೆನ್ನಾಗಿ ಗೊತ್ತಿತ್ತು.ಆದರೂ ‘ ನಾನು ನಾನೇ’ಎಂಬುದನ್ನು ಸಾಬೀತು ಪಡಿಸುತ್ತ ಭಂಡ ಧೈರ್ಯದ ಬದುಕು ನಡೆಸುತ್ತಿದ್ದರೂ.ನಾನು ನಾನಲ್ಲ ಎನ್ನುತ್ತ ಕೃಷ್ಣಸ್ವಾಮಿ ಗುರುನಾಥನಿಗೆ ಹೇಳುತ್ತಾರೆ ‘ನಾ ತುಕಾರಾಂ ಅಲ್ಲ’.ನಾಟಕ ಮನರಂಜನೆಯನ್ನು ನೀಡುತ್ತಾ ಮುಂದೆ ಸಾಗುತ್ತದೆ.
ಉದ್ಯಾನವನಕ್ಕೆ ಬಂದ ಎಲ್ಲ ಜನರಿಗೆ ಇವರ, ಒಟ್ಟಾರೆ ಜೀವ ಪ್ರಕೃತಿ ಮುದವನ್ನು ನೀಡುತ್ತದೆ. ಉದ್ಯಾನಕ್ಕೆ ಬರುತ್ತಿದ್ದ ಜನರ ಚಟುವಟಿಕೆಗಳು ಇವರ ದೃಶ್ಯಗಳಿಗೆ ಪೂರಕವಾಗಿದ್ದವು. ಇವರಿಬ್ಬರ ಹರಟೆ ನಾಟಕಕ್ಕೆ ಒಂದು ರೀತಿಯ ರಂಜನೆಯ ಬೆಂಚಾಗಿತ್ತು. ವಯಸ್ಸಾದರೂ ಗುರುನಾಥನ ತಲುಬುಗಳು ಕಡಿಮೆಯಾಗಿದ್ದಿಲ್ಲ. ಇದು ಕೆಲವು ಸಲ ಅವನಿಗೆ ಮುಜಗರ ಉಂಟು ಮಾಡುತ್ತಿದ್ದವು.
ಸುಳ್ಳುಗಳಿಂದ ಸೃಷ್ಟಿಯಾದ ನರಕದಲ್ಲಿ ಗುರುನಾಥ ಬಿದ್ದು ಒದ್ದು ಒದ್ದಾಡುತ್ತಿದ್ದ. ಗುರುನಾಥ ಮತ್ತು ಕೃಷ್ಣಸ್ವಾಮಿಗೆ ಪ್ರತಿ ನಿತ್ಯ ಬೆಳಗ್ಗೆ ಹೊಟ್ಟಿಗೇನು? ಎಂಬ ಚಿಂತೆ.ಇವರಿಬ್ಬರಿಗೂ ವಯಸ್ಸಾಗಿದ್ದರು ನಿಶ್ಚಿಂತತೆ ಎಂಬುದು ಇದ್ದಿಲ್ಲ. ಮಕ್ಕಳೊಂದಿಗೆ ಮಮತೆಯಿಂದ ಮನೆಯಲ್ಲಿರುವ ಘಳಿಗೆಗಳನ್ನು ಕಳೆದುಕೊಂಡು ಬಿಟ್ಟಿರುತ್ತಾರೆ.ಹೊಸ ಮನೆ ಕಟ್ಟಿಸಿದ ಮಕ್ಕಳಿಗೆ ಹಳೆ ವಸ್ತುಗಳು ಬೇಡ.ಇಲ್ಲಿ ವಯಸ್ಸಾದ ಇಂದಿನ ಕುಟುಂಬಗಳಿಗೆ ಹಳೆ ವಸ್ತುಗಳಿದ್ದಂತೆ.ಇಟ್ಟುಕೊಳ್ಳಲು,ಒಗಿಯಲು ಬಾರದ ದ್ವಂದ್ವಗಳಲ್ಲಿ ನಮ್ಮ ಸಮಾಜ ನಡೆಯುತ್ತದೆ. ಗುರುನಾಥ ಸತ್ಯ ಹೇಳಿದರು ಕೃಷ್ಣಸ್ವಾಮಿ ನಂಬುವದಿಲ್ಲ.ವೃದ್ಧಾಪ್ಯ ಪುಟ್ಟ ಮಗುವಿನ ಸಂದರ ನಗುವಿದ್ದಂತೆ.
ಈ ನಾಟಕದಲ್ಲಿ ಸಹ ಕಲಾವಿದರಾಗಿ ಶ್ರೀ ಗಿರೀಶ್ ದೊಡ್ಡಮನಿ,ಶ್ರೀ ಭೀಮೂ ಖಟಾವಿ,ಕು ಅಂಬಿಕಾ ಮಾಳಿ ಮತ್ತು ಶ್ರೀಮತಿ ಸುನಿತಾ ಅರಬಳ್ಳಿ ಚೆನ್ನಾಗಿ ಅಭಿನಯಿಸಿದರು. ನಿರ್ದೇಶಕರ ಕಲಾತ್ಮಕತೆ ನಾಟಕದಲ್ಲಿ ಎದ್ದು ಕಾಣುತ್ತಿತ್ತು.ಸಂಗೀತ ಮತ್ತು ನೆಳಲು ಬೆಳಕು ಉತ್ತಮವಾಗಿತ್ತು.
ಕೃಷ್ಣ ಕಟ್ಟಿ ಧಾರವಾಡ :
ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆ ಈ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಕೃಷ್ಣ ಕಟ್ಟಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ. ಶ್ರೀಯುತರು ತಮ್ಮ ‘ಬೇಂದ್ರೆ ಮತ್ತು ಕನ್ನಡ ಭಾವ ಗೀತದ ಸ್ವರೂಪ’ ಎಂಬ ಪ್ರಬಂಧಕ್ಕೆ ಪಿ. ಎ. ಚ್ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಪಿ. ಎ. ಚ್ಡಿ. ಪದವಿಧರರಾದ ಇವರು ಸುಧಾ ವಾರಪತ್ರಿಕೆಗೆ ಮೂರು ವರ್ಷಗಳ ಕಾಲ ‘ಸಮಕ್ಷಮ’ ಎಂಬ ಅಂಕಣ ಬರೆದಿದ್ದಾರೆ.
2 Comments
ಅಭಿನಯ ಭಾರತಿ ಅವರು ಪ್ರಸ್ತುತಿ ಪಡಿಸಿದ ನಾಟಕ ನಾ ತುಕಾರಾಂ ಅಲ್ಲ.ಇದು ಪ್ರದರ್ಶನ ಕಾರರು ಹೇಳುವಂತೆ ಹಾಸ್ಯ ನಾಟಕವಲ್ಲ.ಇದು ನಿಜವಾಗಿಯೂ ಇಂದಿನ ವ್ಯರ್ಥ ಬದುಕಿನ ವ್ಯಥೆಯ ದುರಂತ ನಾಟಕ.ಪ್ರತಿ ಪ್ರಸಂಗ್ಗಳಲ್ಲಿಯೂ ಮನುಷ್ಯ,ಅಂತರಂಗವನ್ನು ಮುಚ್ಚಿ ಟ್ಟು,ಬಹಿರಂಗದಲ್ಲಿ ಬೇರೆಯದೇ ನಾಟಕವಾಡುತ್ತ,ಆತ್ಮ ವಂಚನೆಗೆ ಪಕ್ಕಾಗುತ್ತ ತನಗೆ ತಾನೇ ಯಾವುದು ನಿಜ ಯಾವುದು ನಾಟಕ ಎಂದು ಅರ್ಥವಾಗದ ಗೊಂದಲದಲ್ಲಿ ಸಿಲುಕಿ ಮಾನಸಿಕ ಸ್ಥಿಮಿತ ಕಳೆದುಕೊಂಡು,ಹೊರಗಿನ ಜಗತ್ತಿಗೆ ಹುಚ್ಚನಾಗಿ ಕಾಣುತ್ತಾನೆ.ಮನೆಯಿಂದ ಬಹಿಷ್ಕೃತ,ಸಮಾಜದಿಂದ ತಿರಸ್ಕೃತ,ವೃತ್ತಿ ಜೀವನದಿಂದ ನಿವೃತ್ತ, ದಿಕ್ಕುಗಾಣದ ವನಾಗಿ ಏಕಾಂಗಿತನ ನೀಗಲು ಸಿಕ್ಕವನನ್ನೇ ಸಂಗಾತಿ ಎಂದು ಒಪ್ಪಿ ಗೆಳೆತನ ಬೆಳೆಸುತ್ತಾನೆ.ವಯಸ್ಸು ಮುಪ್ಪು,ಒಪ್ಪಿಕೊಳ್ಳಲು ಆಗದೆ ನಾಟಕ ಮಾಡುತ್ತಾನೆ,ಕಳೆದ ದಿನಗಳ,ರಸಮಯ ಕ್ಷಣಗಳ ಜೋಕಾಲಿಯಲ್ಲಿ ಜೀಕುತ್ತ,ಬಿಕ್ಕುತ್ತಾನೆ. ಇದು ಎಲ್ಲಾ ಮುಪ್ಪಿನವರ ಅಂತರಂಗದ ಪ್ರಾತಿನಿಧಿಕ ಅನಿಸಿಕೆ. ನಾಟಕ ನಮ್ಮದೇ ಎನ್ನಿಸುತ್ತದೆ.ನಾಟಕ ನೋಡಿದ ಪ್ರತಿಯೊಬ್ಬ ನಿಗೂ ಇದು ತನ್ನದೇ ಕತೆ ಎನಿಸುವುದು ಸ್ವಾಭಾವಿಕ.ನನಗೆ ಅನಿಸಿದ್ದು ಇದು ಎಲ್ಲರ ಮುಪ್ಪಿನ ಕೊನೆ ಅಂಕದ ನಿಜದ ನಾಟಕ.ಹಾಸ್ಯದಲ್ಲಿ ವ್ಯಂಗ್ಯವಿದೆ,ವಿಡಂಬನೆ ಇದೆ,ವ್ಯಥೆ ಇದೆ ನಾಟಕ್ವಂತು ತುಂಬಾ ಚೆನ್ನಾಗಿ ಮಾಡಿದ್ದಾರೆ.
ಅಭಿನಯ ಭಾರತಿ ಅವರು ಪ್ರಸ್ತುತಿ ಪಡಿಸಿದ ನಾಟಕ ನಾ ತುಕಾರಾಂ ಅಲ್ಲ.ಇದು ಪ್ರದರ್ಶನ ಕಾರರು ಹೇಳುವಂತೆ ಹಾಸ್ಯ ನಾಟಕವಲ್ಲ.ಇದು ನಿಜವಾಗಿಯೂ ಇಂದಿನ ವ್ಯರ್ಥ ಬದುಕಿನ ವ್ಯಥೆಯ ದುರಂತ ನಾಟಕ.ಪ್ರತಿ ಪ್ರಸಂಗ್ಗಳಲ್ಲಿಯೂ ಮನುಷ್ಯ,ಅಂತರಂಗವನ್ನು ಮುಚ್ಚಿ ಟ್ಟು,ಬಹಿರಂಗದಲ್ಲಿ ಬೇರೆಯದೇ ನಾಟಕವಾಡುತ್ತ,ಆತ್ಮ ವಂಚನೆಗೆ ಪಕ್ಕಾಗುತ್ತ ತನಗೆ ತಾನೇ ಯಾವುದು ನಿಜ ಯಾವುದು ನಾಟಕ ಎಂದು ಅರ್ಥವಾಗದ ಗೊಂದಲದಲ್ಲಿ ಸಿಲುಕಿ ಮಾನಸಿಕ ಸ್ಥಿಮಿತ ಕಳೆದುಕೊಂಡು,ಹೊರಗಿನ ಜಗತ್ತಿಗೆ ಹುಚ್ಚನಾಗಿ ಕಾಣುತ್ತಾನೆ.ಮನೆಯಿಂದ ಬಹಿಷ್ಕೃತ,ಸಮಾಜದಿಂದ ತಿರಸ್ಕೃತ,ವೃತ್ತಿ ಜೀವನದಿಂದ ನಿವೃತ್ತ, ದಿಕ್ಕುಗಾಣದ ವನಾಗಿ ಏಕಾಂಗಿತನ ನೀಗಲು ಸಿಕ್ಕವನನ್ನೇ ಸಂಗಾತಿ ಎಂದು ಒಪ್ಪಿ ಗೆಳೆತನ ಬೆಳೆಸುತ್ತಾನೆ.ವಯಸ್ಸು ಮುಪ್ಪು,ಒಪ್ಪಿಕೊಳ್ಳಲು ಆಗದೆ ನಾಟಕ ಮಾಡುತ್ತಾನೆ,ಕಳೆದ ದಿನಗಳ,ರಸಮಯ ಕ್ಷಣಗಳ ಜೋಕಾಲಿಯಲ್ಲಿ ಜೀಕುತ್ತ,ಬಿಕ್ಕುತ್ತಾನೆ. ಇದು ಎಲ್ಲಾ ಮುಪ್ಪಿನವರ ಅಂತರಂಗದ ಪ್ರಾತಿನಿಧಿಕ ಅನಿಸಿಕೆ. ನಾಟಕ ನಮ್ಮದೇ ಎನ್ನಿಸುತ್ತದೆ.ನಾಟಕ ನೋಡಿದ ಪ್ರತಿಯೊಬ್ಬ ನಿಗೂ ಇದು ತನ್ನದೇ ಕತೆ ಎನಿಸುವುದು ಸ್ವಾಭಾವಿಕ.ನನಗೆ ಅನಿಸಿದ್ದು ಇದು ಎಲ್ಲರ ಮುಪ್ಪಿನ ಕೊನೆ ಅಂಕದ ನಿಜದ ನಾಟಕ.ಹಾಸ್ಯದಲ್ಲಿ ವ್ಯಂಗ್ಯವಿದೆ,ವಿಡಂಬನೆ ಇದೆ,ವ್ಯಥೆ ಇದೆ ನಾಟಕ್ವಂತು ತುಂಬಾ ಚೆನ್ನಾಗಿ ಮಾಡಿದ್ದಾರೆ.