ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2025ನೆಯ ಸಾಲಿನ ‘ನಾಗಡಿಕೆರೆ-ಕಿಟ್ಟಪ್ಪ ರುಕ್ಮಣಿ ತೀರ್ಥಹಳ್ಳಿ’ ಪ್ರಶಸ್ತಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿರುವ ಪ್ರಸ್ತುತ ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಕಿಟ್ಟಪ್ಪ ಗೌಡರು ಹತ್ತನೆಯ ತರಗತಿ ಓದುತ್ತಿದ್ದಾಗಲೇ ಬ್ರಿಟೀಷರ ವಿರುದ್ಧದ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಭಾಗವಹಿಸಿದ್ದರು. ರೈತ ಚಳುವಳಿ, ಗೋಕಾಕ ಚಳುವಳಿಗಳಲ್ಲಿಯೂ ಭಾಗವಹಿಸಿದ ಇವರು ಸದಾ ಜನಪರ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗದೆ ದಿಟ್ಟತನದಿಂದ ಸಮಾಜದ ನ್ಯೂನತೆಯನ್ನು ತೋರಿಸುವ ಶ್ರೇಷ್ಠ ಪತ್ರಕರ್ತರನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೋಕಿನ ಐನಕೈನವರಾದ ರವೀಂದ್ರ ಭಟ್ಟರು ಸಂಯುಕ್ತ ಕರ್ನಾಟಕದಿಂದ ತಮ್ಮ ವೃತ್ತಿಯನ್ನು ಆರಂಭಿಸಿ ನಂತರ ಕನ್ನಡಮ್ಮ, ‘ಅಭಿಮಾನಿ’, ‘ಅರಗಿಣಿ’, ‘ಈ ಸಂಜೆ’, ‘ಉದಯವಾಣಿ’ಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ‘ಪ್ರಜಾವಾಣಿ’ ದಿನ ಪತ್ರಿಕೆಯಲ್ಲಿ ಕಾರ್ಯ ನಿರ್ವಾಹಕ ಸಂಪಾದಕರಾಗಿದ್ದಾರೆ. ಪತ್ರಿಕೊದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿರುವ ರವೀಂದ್ರ ಭಟ್ಟರು ಉತ್ತಮ ಬರಹಗಾರರೂ ಕೂಡ ಹೌದು, ಇವರೇ ಮಾಡಿಕೊಂಡ ‘ಬರ’, ‘ಹೆಜ್ಜೇನು’, ‘ಬದುಕು ಮರದ ಮೇಲೆ’, ‘ಮೂರನೆಯ ಕವಿ’, ‘ಸಂಪನ್ನರು’, ‘ಮೈಸೂರೆಂಬ ಬೆರಗು’, ‘ಸಹಸ್ತ್ರ ಪದಿ’, ‘ರಾಜಕಾರಣದಲ್ಲಿ ನಿಂಬೆ ಹಾಗಲ’ ಇವರ ಪ್ರಮುಖ ಕೃತಿಗಳಾಗಿವೆ.
ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯ ನಡೆದ 2025ನೆಯ ಸಾಲಿನ ಆಯ್ಕೆ ಸಮಿತಿಯ ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ. ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು , ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಹಾಜರಿದ್ದರು.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನ ‘ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಣಿ ತೀರ್ಥಹಳ್ಳಿ ದತ್ತಿ ಪುರಸ್ಕಾರ’ಕ್ಕೆ ಹಿರಿಯ ಪತ್ರಕರ್ತ ರವೀಂದ್ರ ಭಟ್ ಆಯ್ಕೆ
No Comments1 Min Read