ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಪ್ರಮುಖ ದತ್ತಿಗಳಾದ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ, ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಮತ್ತು ಪಂಕಜಶ್ರೀ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮವು ದಿನಾಂಕ 13-04-2024ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಭಾಷೆ ಮತ್ತು ಸಂಸ್ಕೃತಿಯ ಅಡಿಪಾಯದ ಮೇಲೆ ಬೆಳೆಯುತ್ತಿರುವ ವಿಶ್ವದಲ್ಲಿಯೇ ವಿರಳವೆನ್ನಿಸ ಬಹುದಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ನೆಲೆಗಳಲ್ಲಿಯೂ ಕನ್ನಡವನ್ನು ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರ ಬದ್ದತೆ ಮತ್ತು ನಿಷ್ಟೆಗಳನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಅವರು ಹಾಕಿದ ಭದ್ರ ಬುನಾದಿಯಿಂದಲೇ ಪರಿಷತ್ತು ಇಷ್ಟು ಮಹತ್ವದ್ದಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾದ ಎಚ್. ವಿ. ನಂಜುಂಡಯ್ಯನವರು ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಸ್ಮರಿಸಿಕೊಂಡ ಅವರು ಆಗ ಕರ್ನಾಟಕದ ಏಕೀಕರಣ ಮತ್ತು ನಾಮಕರಣದ ಆಶಯಗಳು ಆಡಳಿತಗಾರರಾದ ಇಂಗ್ಲೀಷಿನವರಿಗೆ ತಲುಪ ಬೇಕಿತ್ತು, ಹೀಗಾಗಿ ಈ ದಾರಿಯನ್ನು ಆರಿಸಿಕೊಂಡರು. ನಮ್ಮ ಹಿರಿಯರು ಯಾವುದೇ ದಾರಿಯನ್ನು ತುಳಿದರೂ ಅದರ ಹಿಂದೆ ವ್ಯಾಪಕ ಒಳನೋಟಗಳಿರುತ್ತಿದ್ದವು. ಕನ್ನಡ ಸಾಹಿತ್ಯ ಪರಿಷತ್ತು ಸದಾ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ. ನಂಜುಂಡಯ್ಯನವರ ಮೊಮ್ಮಗ ಡಾ. ರವಿ ಅರೋಡಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಅರ್ಥಪೂರ್ಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ದತ್ತಿಗಳು ಸ್ಥಾಪಿತವಾಗಿದ್ದು, ಇಲ್ಲಿ ಮಾತ್ರ ಪಾರದರ್ಶಕ ಆಯ್ಕೆ ನಡೆಯ ಬಲ್ಲದು ಎಂಬ ವಿಶ್ವಾಸದಲ್ಲಿ ದತ್ತಿ ದಾನಿಗಳು ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ. ಇಲ್ಲಿ ಯಾವುದೇ ಅರ್ಜಿ ಮತ್ತು ಮರ್ಜಿ ಇಲ್ಲದೆ ಆಯ್ಕೆ ನಡೆಯುತ್ತದೆ. ಸಾಧಕರಿಗೆ ಮಾತ್ರ ಇಲ್ಲಿ ಪುರಸ್ಕಾರ ಲಭಿಸುವುದೇ ಹೊರತು ಸಮಯ ಸಾಧಕರಿಗೆ ಅಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪುರಸ್ಕಾರ ಪಡೆದವರ ಹೆಸರುಗಳನ್ನು ಒಮ್ಮೆ ನೋಡಿದರೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಎಂದು ಹೇಳಿದರು.
ದತ್ತಿ ಪ್ರದಾನ ಮಾಡಿದ ವಿಶ್ರಾಂತ ನ್ಯಾಯಮೂರ್ತಿಗಳಾದ ಡಾ. ಎಚ್. ಬಿ. ಪ್ರಭಾಕರ ಶಾಸ್ತ್ರಿಗಳು ಮಾತನಾಡಿ “ದತ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬೆನ್ನುಲುಬಾಗಿ ನಿಂತಿವೆ. ಇದರಿಂದ ಕನ್ನಡ ಸಾರಸ್ವತ ಲೋಕಕ್ಕೂ ಕ್ರಿಯಾಶೀಲತೆ ಲಭಿಸಲಿದೆ. ಕನ್ನಡದಲ್ಲಿಯೇ ತೀರ್ಪನ್ನು ನೀಡುವ ಮೂಲಕ ವೃತ್ತಿಯಲ್ಲಿ ಕನ್ನಡ ಕಾಳಜಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದ ತಮಗೆ ಎಲ್ಲೋ ಕನ್ನಡಿಗರೇ ತಮ್ಮ ಭಾಷೆಯನ್ನು ಉಳಿಸಿ ಕೊಳ್ಳುತ್ತಿಲ್ಲವೆನ್ನುವ ಆತಂಕ ಕಾಡುತ್ತಿದೆ. ಕನ್ನಡ ನಮ್ಮ ಬದುಕಿನ ಭಾಗವಾದರೆ ಮಾತ್ರ ಉಜ್ವಲ ಭವಿಷ್ಯ ನಮ್ಮದಾಗಬಹುದು.” ಎಂದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಎಚ್.ವಿ.ನಂಜುಂಡಯ್ಯನವರ ಮೊಮ್ಮಗ ಡಾ.ರವೀಂದ್ರ ಅರೋಡಿಯವರು ಮಾತನಾಡಿ “ಕನ್ನಡದ ಮಕ್ಕಳು ಭಾಷೆಯನ್ನು ಬರೆದು ಓದಿದರೆ ಸಾಲದು ಆಧುನಿಕ ಸಾಧ್ಯತೆಗೂ ತೆರೆದು ಕೊಳ್ಳಬೇಕು.” ಎಂದು ಹೇಳಿ ಚಿಕಾಗೋದಲ್ಲಿ ತಾವು ಮಾಡುತ್ತಿರುವ ಪ್ರಯೋಗಗಳನ್ನು ವಿವರಿಸಿದರು.
ದತ್ತಿದಾನಿಗಳಾದ ಡಾ. ಎ. ಪುಷ್ಪ ಅಯ್ಯಂಗಾರ್ ಮತ್ತು ಎನ್. ಕೆ. ರಮೇಶ್ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿತವಾದ ದತ್ತಿ ನಿರಂತರವಾಗಿ ಅರ್ಹರಿಗೆ ಪ್ರದಾನವಾಗುತ್ತಿರುವುದರ ಕುರಿತು ತೃಪ್ತಿಯಿದೆ.” ಎಂದರು.
ಕಾರ್ಯಕ್ರಮದಲ್ಲಿ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್’ ಪ್ರಶಸ್ತಿಗಳನ್ನು ಕೊಡಗಿನ ಶ್ರೀಮತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮತ್ತು ಕೊಲಾರದ ಡಾ. ಅಮರೇಂದ್ರ ಹೊಲ್ಲಂಬಳ್ಳಿಯವರಿಗೆ, ಬಹುಮುಖ ವ್ಯಕ್ತಿತ್ವದ ಕನ್ನಡದ ಪ್ರಮುಖ ಕಾದಂಬರಿಗಾರ್ತಿ ದಿ. ಎ. ಪಂಕಜ ಅವರು ಸ್ಥಾಪಿಸಿದ ಪಂಕಜಶ್ರೀ ಪ್ರಶಸ್ತಿಯನ್ನು ದಾವಣಗೆರೆಯ ಕೆ. ಜಿ. ಸರೋಜಾ ನಾಗರಾಜ್ ಮತ್ತು ಬೆಂಗಳೂರಿನ ಡಾ. ಕೆ. ವಿ. ರಾಜೇಶ್ವರಿಯವರಿಗೆ ಸ್ವಾತಂತ್ರ್ಯ ಹೋರಾಟ ಹಾಗೂ ಕನ್ನಡ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ತೀರ್ಥಹಳ್ಳಿಯ ಕಿಟ್ಟಪ್ಪ ಗೌಡರು ಪ್ರಾಮಾಣಿಕ ಪತ್ರಕರ್ತರಿಗೆ ನೀಡುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ನಾಗಡಿಕೆರೆ-ಕಿಟ್ಟಪ್ಪ ಗೌಡ ರುಕ್ಮಿಣಿ ತೀರ್ಥ ಹಳ್ಳಿ’ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಕೆ. ಎನ್. ಪುಟ್ಟಲಿಂಗಯ್ಯ ಗೌಡ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿ, ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿ, ಇನ್ನೊರ್ವ ಕಾರ್ಯದರ್ಶಿ ನೇ. ಭ. ರಾಮಲಿಂಗ ಶೆಟ್ಟರು ವಂದಿಸಿದರು.