ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ‘ರಂಗ ವಸಂತ’ವನ್ನು ದೀಪ ಬೆಳಗಿ ಉದ್ಘಾಟಿಸಿದ ನಟಿ ಪ್ರತಿಮಾ ನಾಯಕ್ ಕುಂದಾಪುರ ಇವರು ಮಾತನಾಡುತ್ತಾ “ಮಹಿಳೆಯರ ಮತ್ತು ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ನಾರಿ ಚಿನ್ನಾರಿ ವೇದಿಕೆಯನ್ನು ಸೃಷ್ಟಿಸಿದ ರಂಗ ಚಿನ್ನಾರಿಯನ್ನು ಶ್ಲಾಘಿಸಬೇಕಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಸಾಕಷ್ಟು ಸಾಧನೆ ಮಾಡಿದ್ದು, ಮಹಿಳೆಯರು ಇನ್ನಷ್ಟು ಸಬಲೀಕರಣಗೊಳ್ಳಬೇಕಾಗಿದೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿರುವ ಮಹಿಳೆಯರು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕಾಗಿದೆ.” ಎಂದು ಹೇಳಿದರು.
ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿ ಚಿನ್ನಾರಿ ಗೌರವಾಧ್ಯಕ್ಷೆ ಶ್ರೀಮತಿ ತಾರಾ ಜಗದೀಶ್ ವಹಿಸಿದ್ದರು. ಗಮಕಿ ಹಾಗೂ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಕ್ಕಳ ಪೋಷಣೆಯಲ್ಲಿ ಹೆತ್ತವರ ಪಾತ್ರ’ ಎಂಬ ವಿಷಯದಲ್ಲಿ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ನಾಟಿ ವೈದ್ಯೆ ಯಮುನ ಕೆ. ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು.
ಗೀತ ಪ್ರಿಯ (ಕೂಚುಪುಡಿ), ಶ್ಯಾಮಲ ರವಿರಾಜ್ ಕುಂಬಳೆ (ಕಾವ್ಯಧಾರೆ), ಶಾರಿಕ (ಕಥೆ ಹೇಳುವುದು), ಅನ್ವಿತಾ ತಲ್ಪನಾಜೆ (ಶಾಸ್ತ್ರೀಯ ಸಂಗೀತ), ಸನ್ನಿಧಿ ಪಳ್ಳತ್ತಡ್ಕ (ಯೋಗ ಪ್ರದರ್ಶನ), ಸರೋಜಿನಿ ಟೀಚರ್ (ಹರಿಕಥೆ), ಬಬಿತಾ ರವಿಚಂದ್ರ (ಭಕ್ತಿಗೀತೆ), ಸರ್ವಮಂಗಳ (ಹಾಸ್ಯ ಲಹರಿ), ಮೀರಾ ಹರೀಶ್, ನಳಿನಾಕ್ಷಿ (ಪ್ರಹಸನ) ಹಾಗೂ ಜಯಲಕ್ಷ್ಮಿ ಕಾರಂತ್ (ಸಂವಾದ) ಮೊದಲಾದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ದಿವ್ಯಾ ಗಟ್ಟಿ ಪರಕ್ಕಿಲ ಸ್ವಾಗತಿಸಿ, ವೀಣಾ ಅರುಣ್ ಶೆಟ್ಟಿ ನಿರೂಪಿಸಿದರು.