ಕಾಸರಗೋಡು : ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿಚಿನ್ನಾರಿಯ 7ನೇ ಸರಣಿ ಕಾರ್ಯಕ್ರಮ ‘ಶ್ರಾವಣ ಧಾರಾ’ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ 30-07-2023ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಹಕ್ಕು ಸಂಘಟನೆ ಕಾಸರಗೋಡಿನ ರಾಜ್ಯಾಧ್ಯಕ್ಷೆ ಜುಲೇಖಾ ಮಾಹಿನ್ ನಾರಿಚಿನ್ನಾರಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಇದರ ಯಶಸ್ಸಿನ ಹಿಂದೆ ಸದಸ್ಯರ ಪರಿಶ್ರಮ ಎದ್ದು ಕಾಣುತ್ತದೆ ಎಂದು ಹೇಳಿದರು.
ಆರೋಗ್ಯ ತಜ್ಞೆ ಡಾ. ಸಂಗೀತ ಸಚ್ಚಿದಾನಂದ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಾವ್ರತಿ ಮಂಜುಳಾ ರಾವ್ ಹಾಗೂ ಸಮಾಜ ಸೇವಕಿ ಚಂದ್ರಾವತಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಗೌರವಾಧ್ಯಕ್ಷೆ ತಾರಾ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಸವಿತಾ ಟೀಚರ್ ಅತಿಥಿಗಳಿಗೆ ಹೂ ಕುಂಕುಮದ ಆತಿಥ್ಯವನ್ನು ನೀಡಿದರು.
ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಡಾ. ಸಂಗೀತ ಸಚ್ಚಿದಾನಂದ್ ಅವರು ‘ಮಳೆಗಾಲದ ಆಹಾರ ಮತ್ತು ಆರೋಗ್ಯ’ ಹಾಗೂ ಮಾಲತಿ ಮಾಧವ್ ಕಾಮತ್ ‘ಕೊಂಕಣಿ ಭಾಷಿಗರ ಶ್ರಾವಣ ಮಾಸದ ಆಚರಣೆಗಳು’ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಆಶಾಲತಾ ಅವರು ‘ಆಟಿಯ ವಿಶೇಷ’ ಕುರಿತು ಉಪನ್ಯಾಸ ನೀಡಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧ್ರುವಿಕಾ (ಜಾನಪದ ನೃತ್ಯ), ರಮ್ಯಶ್ರೀ (ಜಾನಪದ ಹಾಡು), ಜ್ಯೋತಿಕಾ (ಕಾವ್ಯ ವಾಚನ), ಗೀತಾ ಎಂ.ಭಟ್ (ಆಶಯ ಗೀತೆ) ಮತ್ತು ಚೋಮು ಮಧೂರು (ತುಳು ಪಾಡ್ದನ ಮತ್ತು ಕಬಿತೆಗಳು) ಮುಂತಾದವರು ಭಾಗವಹಿಸಿದರು. ಪ್ರತಿಜ್ಞಾ ರಂಜಿತ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಲತಾ ಮೈಲಾಟ್ಟಿ ಸ್ವಾಗತಿಸಿ, ವೀಣಾ ಅರುಣ್ ಶೆಟ್ಟಿ ವಂದಿಸಿ, ನಾರಿಚಿನ್ನಾರಿ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು.