ಕಾಸರಗೋಡು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿಚಿನ್ನಾರಿಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ವು ದಿನಾಂಕ 30-09-2023ರಂದು ಕಾಸರಗೋಡು ಕೊ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಾತನಾಡುತ್ತಾ “ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಕವಿತೆಗಳು ಸಮಾಜದ ಕನ್ನಡಿಯಾಗಬೇಕು. ಜಗತ್ತನ್ನು, ಸಮಾಜವನ್ನು ಎಚ್ಚರಿಸುವ ಮತ್ತು ತಿದ್ದುವ ದೊಡ್ಡ ಜವಾಬ್ದಾರಿ ಸಾಹಿತಿ, ಕವಿಯ ಮೇಲಿದೆ ಎಂದು ಹೇಳಿದರು. ಅವರು ‘ನೀನಿಲ್ಲ..ಇಲ್ಲಿ ನಾನು ಮಾತ್ರ’ ಲಕ್ಷ್ಮಿ ಕೆ. ಅವರ ಮೂರನೆಯ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರ ಕಾವ್ಯೋತ್ಸಾಹವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ವಹಿಸಿದರು. ಕತೆಗಾರ್ತಿ ಸ್ನೇಹಲತಾ ದಿವಾಕರ್ ಪುಸ್ತಕ ಪರಿಚಯ ಮಾಡಿದರು. ಸರೋಜಿನಿ ಕೆ. ಭಟ್ ಅವರು ಪ್ರಥಮ ಪ್ರತಿ ಸ್ವೀಕರಿಸಿ ಶುಭ ಹಾರೈಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಲಕ್ಷ್ಮಿ ಕೆ. ಮತ್ತು ತುಳು ಜಾನಪದ ಕಲಾವಿದೆ ಲಕ್ಷ್ಮಿ ಕುಂಬ್ಡಾಜೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ಅತಿಥಿಗಳಿಗೆ ಹೂ ಕುಂಕುಮವಿತ್ತು ಶಾಲುಹೊದೆಸಿ ಬರಮಾಡಿಕೊಂಡರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಆಶಾಲತಾ ಇವರು ಸನ್ಮಾನಿತರನ್ನು ಪರಿಚಯಿಸಿದರು. ಗೌರವರ್ಪಣೆ ಸ್ವೀಕರಿಸಿದ ಲಕ್ಷ್ಮಿ ಕುಂಬ್ಡಾಜೆ ತುಳು ಪಾಡ್ದನವನ್ನು ಹಾಡಿದರು.
ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಧಾ ಎನ್. (ಕನ್ನಡ ಭಾವಗೀತೆ), ಸ್ವಾತಿ ಲಕ್ಷ್ಮಿ (ಜಾನಪದ ನೃತ್ಯ), ಮಾಳವಿಕಾ (ಮಲಯಾಳಂ ಭಾವಗೀತೆ), ಪಲ್ಲವಿ (ಸ್ವರಚಿತ ಕವನ ವಾಚನ), ಅಭಿನಾ (ಶಾಸ್ತ್ರೀಯ ನೃತ್ಯ) ಭಾಗವಹಿಸಿದರು. ಬಬಿತಾ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಾರಿ ಚಿನ್ನಾರಿ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶಾನುಭೋಗ್ ಧನ್ಯವಾದವನ್ನಿತ್ತರು. ಪ್ರಧಾನ ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಿದರು.