ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದರಾದ ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 06-08-2023ರಂದು ನಡೆಯಿತು.
ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎನ್.ಎಂ.ಪಿ.ಎ.ನ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಮಹೇಶ್ ಕುಮಾರ್, ಕಲಾ ಪೋಷಕರಾದ ಸತೀಶ್ ಚಂದ್ರ ಭಂಡಾರಿಯವರು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ಗುರುಗಳಾದ ವಿದುಷಿ ಶಾರದಾಮಣಿ ಶೇಖರ್, ಶ್ರೀಲತಾ ನಾಗರಾಜ್, ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು.
ಗಿರೀಶ ಕಾರ್ನಾಡ್ ರಚಿಸಿದ ‘ನಾಗಮಂಡಲ’ ಜಾನಪದ ಕಥೆಯ ತಿರುಳಿನ ಈ ಕತೆಯನ್ನು ಪುಣ್ಯ ಡ್ಯಾನ್ಸ್ ಕಂಪೆನಿ ಕಲಾವಿದರು ಶಾಸ್ತ್ರೀಯ ನೃತ್ಯಕ್ಕೇ ಅಳವಡಿಸಿ ಪ್ರಸ್ತುತಗೊಳಿಸಿರುವುದು ವಿಭಿನ್ನವಾಗಿತ್ತು. ಇಲ್ಲಿ ಗೀಗಿ ಪದ ಹಾಡುವ ಜನಪದರೇ ನಿರೂಪಕರಾಗಿ, ಕತೆಯನ್ನು ಹೇಳುತ್ತಾ, ಹೊಸದಾಗಿ ಮದುವೆಯಾದ ದಂಪತಿಗಳಲ್ಲಿ ಪ್ರೀತಿಗೆ ಹಂಬಲಿಸುವ ಪತ್ನಿ ಮತ್ತು ನಿರ್ಲಕ್ಷಿಸುವ ಪತಿ, ಇವರ ಮಧ್ಯೆ ಪತಿಯಾಗಿ ಕಾಣಿಸಿಕೊಂಡು ಪ್ರೀತಿ ನೀಡುವ ನಾಗ. ಹೀಗೇ ರೋಚಕವಾದ ಜನಪದ ಕತೆಯ ಮೂಲಕ ಹೆಣ್ಣಿನ ಅಸ್ಮಿತೆಯನ್ನು ಈ ನೃತ್ಯ ಪ್ರಸ್ತುತಿಯಲ್ಲಿ ಆಕರ್ಷಣೀಯವಾಗಿ ಅಭಿವ್ಯಕ್ತಿಗೊಳಿಸಲಾಗಿತ್ತು. ಉತ್ತಮ ಸಂಗೀತ ಸಂಯೋಜನೆ ಹಾಗೂ ಅತ್ಯಾಕರ್ಷಕ ಬೆಳಕಿನ ವಿನ್ಯಾಸ ನೃತ್ಯಪ್ರಸ್ತುತಿಯೊಂದಿಗೇ ನೃತ್ಯ ರೂಪಕ ಯಶಸ್ವಿಯಾಗಿ ಪ್ರದರ್ಶಿತಗೊಂಡಿತು.