08 ಏಪ್ರಿಲ್ 2023, ಕಟೀಲು: ನಾಗಾರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ನಾಗಬನದಲ್ಲಿರುವ ಹತ್ತಾರು ಜಾತಿಯ ವೃಕ್ಷಗಳು, ಅವುಗಳಲ್ಲಿ ವಾಸಮಾಡುವ ಪಕ್ಷಿ-ಜೀವ ವೈವಿಧ್ಯಗಳು, ಇವುಗಳ ಪರಿಣಾಮ ಅಲ್ಲಿ ಉಂಟಾಗುವ ನೀರಿನ ಒಸರು ಹೀಗೆ ಸುಂದರ ಪ್ರಕೃತಿಯನ್ನು ಉಳಿಸುವ ಕಾರ್ಯೀದಲ್ಲಿ ನಾಗಾರಾಧನೆಯ ಕೊಡುಗೆ ಅನನ್ಯವಾದುದು. ಅಭಿವೃದ್ಧಿ, ಜೀರ್ಣೋದ್ಧಾರದ ನೆಪದಲ್ಲಿ ಅರ್ಥಪೂರ್ಣವಾಗಿದ್ದ ನಾಗಬನಗಳು ತನ್ನ ವೈಶಿಷ್ಟ್ಯವನ್ನು ಅಗತ್ಯತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಜನಪದ ಸಂಶೋಧಕ, ಸಾಹಿತಿ ಕೆ.ಎಲ್. ಕುಂಡಂತಾಯ ಹೇಳಿದರು.
ಅವರು ದಿನಾಂಕ 02-04-2023 ಭಾನುವಾರ ಕಟೀಲು ನಂದಿನಿ ನದಿಯ ಕುದ್ರುವಿನಲ್ಲಿ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಘಟಕ, ಕಟೀಲು ದೇಗುಲ ಹಾಗೂ ಕಟೀಲು ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಆರಾಧನಾ ಸಾಹಿತ್ಯ ಸಂವಾದದಲ್ಲಿ ನಾಗಾರಾಧನೆ ಕುರಿತು ಮಾತನಾಡಿದರು.
ಭಯ ಭಕ್ತಿಗಳ, ನಂಬಿಕೆಯ ಆರಾಧನೆ, ಕುಟುಂಬದ ಮೂಲವನ್ನು ಹುಡುಕುವ ಆಶಯ ಹೀಗೆ ಬೆಳೆದು ಬಂದ ನಾಗಾರಾಧನೆ ಪ್ರಾಣಿ ಮನುಷ್ಯನ ಸಂಬಂಧಗಳನ್ನು ಸೂಚಿಸುವಂತಹದು. ಅವೈದಿಕ ಆಚರಣೆಯ ಕೆಲವು ನಾಗಬನಗಳಲ್ಲಿ ವರುಷಕ್ಕೊಂದು ಸಲ ಮಾತ್ರ ಹೋಗಿ ಆರಾಧನೆ ಮಾಡುವ ಕ್ರಮ ಇದೆ. ಕೃಷಿ, ಸಂತಾನ, ಆರೋಗ್ಯ ಹೀಗೆ ನಾನಾ ನಂಬಿಕೆಗಳಿಂದ ನಡೆದು ಬಂದಿರುವ ನಾಗಾರಾಧನೆ ಹಾದಿ ತಪ್ಪದಿರಲಿ ಎಂದು ಹೇಳಿದರು.
ಉಡುಪಿಯ ಹಾವು ರಕ್ಷಕ ಗುರುರಾಜ ಸನಿಲ್ ಮಾತನಾಡಿ ನಾಗರ ಹಾವು ಮನೆಗೆ ಬರುವುದು ಇಲಿ, ಹೆಗ್ಗಣ, ಬೆಕ್ಕಿನ ಮರಿ, ನಾಯಿಯ ಮರಿ ಹೀಗೆ ಆಹಾರಕ್ಕಾಗಿ. ನಾಗದೋಷದಂತಹ ನಂಬಿಕೆಗಳು ಕಾಕತಾಳೀಯವಾಗಿರಬಹುದು. ತಾನು ಗಮನಿಸಿದ ದೊಡ್ಡ ದೊಡ್ಡ ನಾಗಬನಗಳಲ್ಲಿ 70ಕ್ಕೂ ಹೆಚ್ಚು ಜಾತಿಯ ಸಸ್ಯಪ್ರಬೇಧಗಳು, ಮೂವತ್ತಕ್ಕೂ ಹೆಚ್ಚು ಮರಗಳ ವೈವಿಧ್ಯಗಳು, ಹತ್ತಕ್ಕೂ ಹೆಚ್ಚು ಪಕ್ಷಿ-ಪ್ರಾಣಿ ವೈವಿಧ್ಯಗಳನ್ನು ಗಮನಿಸಿದ್ದೇನೆ. ನಾಗನಿಗೆ ತಂಪಿನ ವಾತಾವರಣ ಬೇಕು, ಸಿಮೆಂಟು ಶೀಟು, ಕಾಂಕ್ರೀಟು ನೆಲವಿರುವ ಗುಡಿಗಳಲ್ಲ. ಸಾವಿರಾರು ಹಾವುಗಳನ್ನು ಹಿಡಿದ ಅನುಭವ, ಹಾವುಗಳ ಕುರಿತಾದ ಜನರ ನಂಬಿಕೆ, ವಾಸ್ತವತೆ ಹೀಗೆ ಅಧ್ಯಯನ ನಡೆಸುತ್ತ “ಹಾವು ನಾವು” ಇಂತಹ ಕೃತಿಗಳನ್ನು ಬರೆಯಲು ಸಾಧ್ಯವಾಯಿತು. ತನ್ನ ಹಾವು ಹಿಡಿಯುವ ಅನುಭವ, ಅಧ್ಯಯನಗಳಿಂದ ಜನರಲ್ಲಿರುವ ತಪ್ಪು ನಂಬಿಕೆಗಳ ಬಗ್ಗೆ ಸರಿಯಾದ ಮಾಹಿತಿಗಳನ್ನು ನೀಡಲು ನನ್ನ ಬರಹಗಳಲ್ಲಿ, ಕೃತಿಗಳಲ್ಲಿ ಸಾಧ್ಯವಾಗಿದೆ ಎಂದು ಗುರುರಾಜ ಸನಿಲ್ ಹೇಳಿದರು.
ನಾಗಾರಾಧನೆಯ ಕುರಿತಾಗಿ ಗುರುರಾಜ ಸನಿಲ್ ಹಾಗೂ ಕೆ.ಎಲ್. ಕುಂಡಂತಾಯರು ಬರೆದ ಕೃತಿಗಳನ್ನು ಖರೀದಿಸುವ ಮೂಲಕ ಕಟೀಲು ದೇವಸ್ಥಾನದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಗಾಯಕಿ ಅಶ್ವಿನಿ ರಾವ್ ಪಾವಂಜೆ ಪಂಜೆ ಮಂಗೇಶ ರಾಯರು ಬರೆದ ಹಾವಿನ ಹಾಡು ‘ನಾಗರಹಾವೆ ಹಾವೊಳು ಹೂವೆ’ ಹಾಡಿದರು.
ನಾಡೋಜ ಕೆ. ಪಿ. ರಾವ್, ಕಸಾಪದ ಮೂಲ್ಕಿ ಘಟಕ ಅಧ್ಯಕ್ಷ ಮಿಥುನ ಕೊಡೆತ್ತೂರು ಉಪಸ್ಥಿತರಿದ್ದರು. ಕಸಾಪ ಕಾರ್ಯ ದರ್ಶಿ ಜೊಸ್ಸಿ ಪಿಂಟೋ ಸ್ವಾಗತಿಸಿ, ರಾಜಶೇಖರ ಎಸ್. ನಿರೂಪಿಸಿದರು. ಪುಸ್ತಕಗಳ ಮಾರಾಟ, ಸಂವಾದ ಕಾರ್ಯಪಕ್ರಮ ನಡೆಯಿತು.