ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ‘ನಲಿ ಕುಣಿ 2025’ ಯಕ್ಷಗಾನ ಅಭಿನಯ ಮತ್ತು ನೃತ್ಯ ತರಬೇತಿ ಶಿಬಿರವು ದಿನಾಂಕ 13 ಏಪ್ರಿಲ್ 2025ರಂದು ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಉದ್ಘಾಟನೆಗೊಂಡಿತು.
‘ನಲಿ-ಕುಣಿ’ ಯಕ್ಷಗಾನ ತರಬೇತಿ ಶಿಬಿರಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಉದ್ಘಾಟಕರಾಗಿ ಮಾತನಾಡುತ್ತಾ “ಇಂತಹ ಶಿಬಿರಗಳು ಮಕ್ಕಳು ಮಾನಸಿಕವಾಗಿ ಸುದೃಢರಾಗಲು ಸಹಾಯಕವಾಗುತ್ತದೆ. ಪ್ರೇಕ್ಷಕರ ಕೊರತೆ ಕಾಣುತ್ತಿರುವ ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸಲು ಈ ಶಿಬಿರಗಳಿಂದ ಸಹಕಾರ ಸಿಗಬಹುದು. ಸದಾನಂದ ಐತಾಳ ನಿರ್ದೇಶನದಲ್ಲಿ ನಡೆಯುವ ಈ ತರಗತಿಯಲ್ಲಿ ಯಕ್ಷಗಾನದ ಉಪಯುಕ್ತ ಮಾಹಿತಿ ಮಕ್ಕಳಿಗೆ ಲಭ್ಯವಾಗುವುದಂತು ಖಂಡಿತ, ಕಲಾಕೇಂದ್ರದ ಈ ಸಾಹಸ ಅಭಿನಂದನೀಯ” ಎಂದರು.
ಪ್ರಾಚಾರ್ಯ ಸದಾನಂದ ಐತಾಳರು ಶಿಬಿರದ ರೂಪುರೇಷೆಯನ್ನು ಮತ್ತು ಉಪಯುಕ್ತತೆಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ಮಾತನಾಡಿ ಕಲಾಕೇಂದ್ರದ ಶಿಬಿರದ ಉದ್ದೇಶವನ್ನು ವಿವರಿಸಿ, ಯಶಸ್ವಿಗೆ ಸಹಕಾರ ಬಯಸಿದರು. ಕೇಶವ ಆಚಾರ್ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ರಾಮಚಂದ್ರ ಐತಾಳ ಕಾರ್ಯಕ್ರಮ ನಿರ್ವಹಿಸಿ, ವೈಕುಂಠ ಹೇರ್ಳೆ ವಂದಿಸಿದರು.