ಐರೋಡಿ : ಯಕ್ಷಗಾನ ಕಲಾಕೇಂದ್ರ (ರಿ.) ಹಂಗಾರಕಟ್ಟೆ – ಐರೋಡಿ ಆಯೋಜಿಸುವ ‘ನಲಿ- ಕುಣಿ’ ಯಕ್ಷಗಾನ ತರಬೇತಿ ಶಿಬಿರ – 2025ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು.
ಕಳೆದ 53 ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟು ದಿವಂಗತ ನಾರ್ಣಪ್ಪ ಉಪ್ಪೂರರು ಸ್ಥಾಪಕ ಪ್ರಾಚಾರ್ಯರಾಗಿದ್ದ, ದಿ. ಕಾಳಿಂಗ ನಾವಡರಂಥ ಹಲವಾರು ಶ್ರೇಷ್ಠ ಕಲಾವಿದರನ್ನು ಯಕ್ಷಲೋಕಕ್ಕೆ ನೀಡಿದ ಸಂಸ್ಥೆ ಇದು. ಐವತ್ತೆರಡು ವರ್ಷದ ಅನುಭವ ಹೊಂದಿರುವ ಈ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಮಕ್ಕಳಿಗಾಗಿ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದೆ. ಈ ವರ್ಷ ದಿನಾಂಕ 13 ಏಪ್ರಿಲ್ 2025ರ ಆದಿತ್ಯವಾರದಿಂದ 03 ಮೇ 2025ರ ಶನಿವಾರದ ವರೆಗೆ ಬೆಳಿಗ್ಗೆ ಘಂಟೆ 9.15 ರಿಂದ ಮಧ್ಯಾಹ್ನ ಘಂಟೆ 1.15ರ ತನಕ ಶಾಲಾ ವಿದ್ಯಾರ್ಥಿಗಳಿಗಾಗಿ “ನಲಿ-ಕುಣಿ” ಎಂಬ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ. ಯಕ್ಷಗಾನ ನೃತ್ಯ ಹಾಗೂ ಅಭಿನಯದ ಬೇತಿಯನ್ನು ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನೀಡಲಾಗುವುದು. ಖ್ಯಾತ ಯಕ್ಷಗಾನ ವಿದ್ವಾಂಸ ಹಾಗೂ ತರಬೇತುದಾರರೂ ಆದ ಪ್ರಾಚಾರ್ಯ ಶ್ರೀ ಗುಂಡ್ಮಿ ಸದಾನಂದ ಐತಾಳರ ನಿರ್ದೇಶನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಹ ಶಿಕ್ಷಕರಾಗಿ ಶ್ರೀ ಗಣೇಶ ಚೇರ್ಕಾಡಿ ಹಾಗೂ ಕೇಶವ ಆಚಾರ್ ಭಾಗವಹಿಸಲಿದ್ದಾರೆ. ತರಬೇತಿ ಶಿಬಿರವನ್ನು ಸೇರಲಿಚ್ಚಿಸುವ ವಿದ್ಯಾರ್ಥಿಗಳ ಪೋಷಕರು ರಾಜಶೇಖರ ಹೆಬ್ಬಾರ್ ಕಾರ್ಯದರ್ಶಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರನ್ನು ದೂರವಾಣಿ ಸಂಖ್ಯೆ 9880605610 ಅಥವಾ ಗುಂಡ್ಮಿ ರಾಮಚಂದ್ರ ಐತಾಳ 9448824559 ಮುಖಾಂತರ ದಿನಾಂಕ : 09 ಏಪ್ರಿಲ್ 2025ರ ಒಳಗೆ ಸಂಪರ್ಕಿಸುವುದು ಅಥವಾ ಕಲಾಕೇಂದ್ರದ ಕಛೇರಿಯಿಂದ ನೊಂದಣಿ ಅರ್ಜಿಯನ್ನು ಪಡೆದು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

