ಕುಂದಾಪುರ : ಕುಂದಾಪುರ ಹಳೆ ಬಸ್ ನಿಲ್ದಾಣ ಬಳಿಯಲ್ಲಿರುವ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ‘ನಮ್ ಕುಂದಾಪುರ’ ತ್ರಿವರ್ಣ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 16 ಆಗಸ್ಟ್ 2025ರಂದು ನಡೆಯಿತು.
ಉಧ್ಘಾಟಕರಾದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರ್ ರವರು ಈ ಸಂದರ್ಭದಲ್ಲಿ ಮಾತನಾಡಿ, “ವಿದ್ಯಾರ್ಥಿಗಳ ಚಿತ್ರಕಲಾ ಪ್ರೌಢಿಮೆಯನ್ನು ಉತ್ತೇಜಿಸಲು ತ್ರಿವರ್ಣ ಆರ್ಟ್ ಗ್ಯಾಲರಿ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ” ಎಂದರು.
ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ಕುಂದಾಪುರ ಓಕ್ ವುಡ್ ಇಂಡಿಯನ್ ಸ್ಕೂಲ್ ಮ್ಯಾನೆಜ್ ಮೆಂಟ್ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕಲಾಕ್ಷೇತ ಕುಂದಾಪುರ ಟ್ರಸ್ಟಿಣ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನುಶ್ರೀ ಸ್ವಾಗತಿಸಿ, ತ್ರಿವರ್ಣ ಆರ್ಟ್ ಗ್ಯಾಲರಿಯ ಮುಖ್ಯಸ್ಥರಾದ ಶ್ರೀ ಹರೀಶ್ ಸಾಗರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಕುಂದಾಪುರ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ ‘ನಮ್ ಕುಂದಾಪ್ರ’ ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು, ನಮ್ಮ ಮಣ್ಣಿನ ಗುಣವನ್ನು ಅರ್ಥೈಸುವುದರೊಂದಿಗೆ, ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ರಚಿಸಿರುವ ಕಲಾಕೃತಿಗಳು : ಪಂಚ ಗಂಗಾವಳಿ, ಸಿದ್ಧಿವಿನಾಯಕ, ಥೀಂ ಪಾರ್ಕ್, ಕೋಟಿಲಿಂಗೇಶ್ವರ, ಮೀನುಗಾರರು, ಕೋಡಿ ಬೀಚ್, ಬೇಸಾಯ, ನಾಗಬನ, ಪ್ರಾರ್ಥನೆ, ಕಾಂತಾರ, ಕೆಲಸಗಾರರು, ನಾಟ್ಯ, ಕುಂದೇಶ್ವರ, ಪಶುಪಾಲನೆ, ಹುಲಿವೇಷ, ಬ್ರಹ್ಮಲಿಂಗೇಶ್ವರ, ಕಟ್ಟೆಪೂಜೆ, ಸಂತೆ, ಗೂಡಂಗಡಿ, ವಿನಾಯಕ, ಕಂಬಳ, ಸುರ ಪಾನ, ಕೊಲ್ಲೂರು ಟೆಂಪಲ್, ಕೆರಾಡಿಟೆಂಪಲ್, ಗೊಂಬೆಯಾಟ, ನಂದಾ ದೀಪ, ಭಜನೆ, ಗಂಗಾರತಿ, ಟೆಂಪಲ್, ಗರಡಿ ಎಂಬ ಕಲಾಕೃತಿಗಳು 18 × 18 ಇಂಚಿನ ಅಕ್ರಾಲಿಕ್ ಕ್ಯಾನ್ವಾಸ್, ಜಲವರ್ಣ, ಚಾರ್ಕೋಲ್, ಮಿಶ್ರ ಮಾಧ್ಯಮದ ಶೇಡಿಂಗ್ಸ್ ನ ಒಟ್ಟು 30 ಕಲಾಕೃತಿಗಳು ಅನಾವರಣಗೊಂಡವು.
ಈ ಕಲಾಪ್ರದರ್ಶನದಲ್ಲಿ 18 ವರ್ಷದೊಳಗಿನ 30 ವಿದ್ಯಾರ್ಥಿಗಳ ಚಿತ್ರಕಲೆ ಪ್ರದರ್ಶಿತಗೊಂಡಿದ್ದು, ಕುಂದಾಪುರದ ಮಣ್ಣಿನ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಚಿತ್ರಕಲೆಗಳು ಆಕ್ರಾಲಿಕ್, ಕ್ಯಾನ್ವಾಸ್, ಚಾರ್ಕೋಲ್, ಜಲವರ್ಣ, ಮಿಶ್ರ ಶೇಡಿಂಗ್ ಸೇರಿದಂತೆ ವಿವಿಧ ಶೈಲಿಯ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದವು. ಕೃತಿ ಕೆ. ದೇವಾಡಿಗ ವಂದಿಸಿ, ಅಕ್ಷತಾ ಎಸ್. ಶೆಟ್ಟಿ ನಿರೂಪಿಸಿದರು.