ಕಾರ್ಕಳ : ಮಕ್ಕಳ ಸಾಹಿತ್ಯ ಸಂಗಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಲೇಖಕಿ ಶ್ರೀಮತಿ ಸಾವಿತ್ರಿ ಮನೋಹರ್ ಅವರ 22ನೇ ನಾಟಕ ಕೃತಿ “ನಮ್ಮ ಸಂಸಾರ ಅನ್ ಲೈನ್ ಅವಾಂತರ” ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ದಿನಾಂಕ :29-06-2023ರಂದು ಲೋಕಾರ್ಪಣೆಗೊಂಡಿತು.
ಶ್ರೀಮತಿ ಸಾವಿತ್ರಿ ಮನೋಹರ್
ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ ಕೃತಿಯನ್ನು ಲೋಕಮುಖಕ್ಕೆ ಅನಾವರಣಗೊಳಿಸಿ ನಾಟಕದ ತುಂಬೆಲ್ಲ ಹರಡಿಕೊಂಡಿರುವ ಸಂಸಾರಿಕ ಬಂಧ ಹೊಸ ರೂಪ ಹೊತ್ತು ನಿಂತ ಸ್ತ್ರೀವಾದ ಹಾಸ್ಯ ಲೇಪದೊಂದಿಗೆ ಸುಖಾಂತ್ಯಗೊಂಡಿರುವ ಬಗೆಯನ್ನು ಮೆಚ್ಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, “ನಾಟಕದಲ್ಲಿ ವಾಸ್ತವ ಪ್ರಜ್ಞೆ ಹಾಸು ಹೊಕ್ಕಾಗಿರುವ ರೀತಿ, ಲೇಖಕಿಯ ಬರವಣಿಗೆಯ ಪ್ರೀತಿ, ಸಂಸಾರವೇ ಸಾಹಿತ್ಯವಾಗುವ ನೀತಿ ಇಲ್ಲಿ ನಾಟಕದ ರೂಪಕ್ಕೆ ಇಂಬು ಕೊಡುವಂತಿದೆ” ಎಂದರು.
ಮುಖ್ಯ ಅತಿಥಿ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಶ್ರೀ ಅನಂತಪದ್ಮನಾಭ ರಾವ್ ಅವರು “ಸಾಹಿತ್ಯದ ಅಭಿರುಚಿ ಸಂಸಾರದ ಸೂತ್ರವನ್ನು ಗಟ್ಟಿಗೊಳಿಸುತ್ತದೆ” ಎಂದರು. ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಅಧ್ಯಕ್ಷ ಶ್ರೀ ತುಕಾರಾಮ ನಾಯಕ್ ಉಪಸ್ಥಿತರಿದ್ದರು.
ನಂತರ ನಡೆದ ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಉಪಾಧ್ಯಕ್ಷೆ ಜಾನ್ನವಿ ಪ್ರಾರ್ಥಿಸಿ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕಿ ಸಾವಿತ್ರಿ ಮನೋಹರ್ ಸ್ವಾಗತಿಸಿ, ಜಾಗೃತಿಯ ಹಿರಿಯ ಸದಸ್ಯೆ ಮನೋರಮ ರೈ ವಂದಿಸಿ, ಮಾಲತಿ. ಜಿ.ಪೈ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಕ್ಕಳ ಕವಿಗೋಷ್ಠಿಯ ಬಗ್ಗೆ ಪ್ರಾಸ್ತಾವಿಕವಾಗಿ ಸಂಗಮದ ಮಾಜಿ ಅಧ್ಯಕ್ಷೆ ಹಾಗೂ ಕಾರ್ಕಳ ಘಟಕದ ಕೋಶಾಧಿಕಾರಿ ಲೇಖಕಿ ಸಾವಿತ್ರಿ ಮನೋಹರ್ ಮಾತನಾಡಿ, ಶಾಲೆಗಳಲ್ಲಿ ಕೇವಲ ಅಂಕಗಳಿಗೆ ಮಾತ್ರವೇ ಪ್ರಮುಖವಾಗಿ ಮಕ್ಕಳ ಸಾಹಿತ್ಯ ಪ್ರತಿಭೆಗಳನ್ನು ಸೃಷ್ಟಿಸುವ ಕಲಾಮಂದಿರವಾಗಬೇಕು. ಈ ನಿಟ್ಟಿನಲ್ಲಿ 29 ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆಯೇ ಮಕ್ಕಳ ಸಾಹಿತ್ಯ ಸಂಗಮವಾಗಿದೆ. ಕರೋನಾ ಬರುವ ಮೊದಲು ಹಲವಾರು ಶಾಲೆಗಳಲ್ಲಿ ಈ ಸಂಸ್ಥೆ ಕಮ್ಮಟಗಳನ್ನು ಏರ್ಪಡಿಸಿ ಕವನ ರಚನೆ ನಾಟಕ ರಚನೆ ಪ್ರಬಂಧ ರಚನೆ ಕಥೆ ರಚನೆ ಹಾಗೂ ನಾಟಕ ಅಭಿನಯಗಳ ತರಬೇತಿಗಳನ್ನು ನೀಡಲಾಗುತ್ತಿತ್ತು.. ವರ್ಷದ ಕೊನೆಯಲ್ಲಿ ಮಕ್ಕಳಿಗಾಗಿ ಸ್ಪರ್ಧೆಗಳು ಪ್ರತಿಭಾ ಪ್ರದರ್ಶನಗಳು ಎರಡು ದಿನಗಳ ಮಕ್ಕಳ ಧ್ವನಿ ಎಂಬ ಕಾರ್ಯಕ್ರಮದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು” ಎಂದರು.
ಕೋಶಾಧಿಕಾರಿ ಅನಂತಪದ್ಮನಾಭ ರಾವ್ ಹಾಗೂ ಅಧ್ಯಕ್ಷ ರಾಮಕೃಷ್ಣ ಭಟ್ ಬೆಳಾಲು ಇವರು ಅವಕಾಶ ನೀಡಿದ್ದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು. ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಖ್ಯಾತ ಲೇಖಕಿ, ಕವಿ ಶ್ರೀಮತಿ ಸುಕನ್ಯಾ ಕಳಸ ಉಡುಪಿ ಇವರು ವಹಿಸಿ, ಮಕ್ಕಳ ಕವನಗಳನ್ನು ಆಸಕ್ತಿಯಿಂದ ಆಲಿಸಿ ಕೊನೆಯಲ್ಲಿ ಮಕ್ಕಳ ಕಾವ್ಯ ಪ್ರತಿಭೆಯನ್ನು ಮತ್ತು ಕವನ ಪ್ರಸ್ತುತಿ ಪಡಿಸಿದ ರೀತಿಯನ್ನು ಪ್ರಶಂಶಿಸಿ, ತಮ್ಮ ರಚನೆಯ ಒಂದು ಮಕ್ಕಳ ಕವನವನ್ನು ವಾಚಿಸಿ ಸಭೆಯ ಸಮಸ್ಥರ ಮೆಚ್ಚುಗೆ ಗಳಿಸಿದರು.
ದಿಶಾ, ಶರದಿ, ಮಾನಸ, ತನುಜ, ಮಂಜರಿ, ರೇಷ್ಮಾ, ಬಾನು, ತನುಜ, ದುರ್ಗಾ ಇವರ ಕವನಗಳು ಕೇಳುಗರ ಮನಸೂರೆಗೊಂಡವು. ಅಧ್ಯಕ್ಷರು ಈ ಕವಿಗಳಿಗೆ ವಿಶೇಷವಾಗಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ಶ್ರೀಮತಿ ಸಾವಿತ್ರಿ ಮನೋಹರ್ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಕವಿಗಳಿಗೂ…. ಗೋಷ್ಠಿ ಅಧ್ಯಕ್ಷರಿಗೂ ಸ್ಮರಣಿಕೆಗಳನ್ನು ಇತ್ತು ಗೌರವಿಸಿದರು. ಅದಿತಿ ಗೋಷ್ಠಿಯನ್ನು ನಿರ್ವಹಿಸಿದರೆ, ದಿಶಾ ಪೆರ್ವಾಜೆ ಸ್ವಾಗತಿಸಿ, ತನುಜಾ ಧನ್ಯವಾದವಿತ್ತರು.