ಕುಂದಾಪುರ : ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿಜೇತೆ, ರಿಷಿಕಾ ಕುಂದೇಶ್ವರ ಇವರು ಅರೆಹೊಳೆ ಪ್ರತಿಷ್ಠಾನವು ಕಳೆದ ಹತ್ತು ವರ್ಷಗಳಿಂದ ಬಾಲ ಪ್ರತಿಭೆಗೆ ನೀಡುತ್ತಿರುವ ‘ನಂದಗೋಕುಲ ಪ್ರತಿಭಾ ಪುರಸ್ಕಾರ’ ದ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿನ್ನರ್ ಮಂಗಳೂರಿನ ರಿಷಿಕಾ ಕುಂದೇಶ್ವರ ಇವರು ಮೂಲತಃ ಕಾರ್ಕಳ ತಾಲೂಕಿನ ಕುಂದೇಶ್ವರದ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ. ಪ್ರಸ್ತುತ ಮಂಗಳೂರಿನ ಕದ್ರಿ ನಿವಾಸಿಯಾಗಿರುವ ಇವರು ಅಶೋಕನಗರದ ಎಸ್. ಡಿ. ಎಂ. ಸ್ಕೂಲ್ ವಿದ್ಯಾರ್ಥಿನಿ ಹಾಗೂ ಬಾಲಯಕ್ಷಕೂಟ ಮತ್ತು ಯಕ್ಷಮಾಧ್ಯಮ ತಂಡದ ಸದಸ್ಯೆ.
ರಾಜ್ಯದ 30 ಸಾವಿರ ಮಕ್ಕಳ ಪ್ರತಿಭಾ ಶೋಧ ನಡೆಸಿ, ಅಂತಿಮ 24 ಮಕ್ಕಳಲ್ಲಿ ಒಬ್ಬಳಾಗಿ ಆಯ್ಕೆಯಾಗಿ 5 ತಿಂಗಳ ಕಾಲ ನಡೆದ ರಿಯಾಲಿಟಿ ಶೋದಲ್ಲಿ ರಂಗಭೂಮಿ, ನಾಟಕ, ಕಾಮಿಡಿ, ಯಕ್ಷಗಾನ, ದೊಡ್ಡಾಟ, ಹಗಲುವೇಷ, ಹರಿಕಥೆ ಎಲ್ಲದರಲ್ಲೂ ಸೈ ಎನಿಸಿಕೊಂಡು ಚಾಂಪಿಯನ್ ಪಟ್ಟ ಗೆದ್ದವಳು. ತಂದೆ ಜತೆ ಯಕ್ಷಗಾನ, ಯಕ್ಷರೂಪಕ, ನಾಟಕಗಳಲ್ಲಿ ಅಭಿನಯಿಸುವ ರಿಷಿಕಾ, ಕರ್ನಾಟಿಕ್ ಸಂಗೀತ ಹಾಗೂ ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾಳೆ.
‘ಹಾಡು ನೀ ಹಾಡು’ ಗಾಯನ ರಿಯಾಲಿಟಿ ಶೋ ಇದರಲ್ಲಿ ಸೆಕೆಂಡ್ ರನ್ನರಪ್ ಪ್ರಶಸ್ತಿ ಗೆದ್ದಿರುವ ರಿಷಿಕಾ, ವಿಶ್ವಕನ್ನಡಿಗ ಮಕ್ಕಳಿಗೆ ನಡೆದ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರತಿಭಾ ಕಾರಂಜಿಯ ಭಗವದ್ಗೀತೆ ಕಂಠಪಾಠ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಅರೋಗ್ಯ ಜಾಗೃತಿ ಅಭಿಯಾನಕ್ಕಾಗಿ ಗೌರವ ಸನ್ಮಾನ, ‘ಆಳ್ವಾಸ್ ಪ್ರತಿಭಾ ಪುರಸ್ಕಾರ’, ‘ಕುರಿಯ ವಿಠಲ ಶಾಸ್ತ್ರಿ ಪುರಸ್ಕಾರ’,’ ಅನಂತ ಮಿತ್ರ ಕಲ್ಬಾವಿ ಯಂಗ್ ಅಚೀವರ್ಸ್ ಅವಾರ್ಡ್’, ಡೆಂಘೀ ಜ್ವರ ಅರೋಗ್ಯ ಜಾಗೃತಿ ಅಭಿಯಾನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸನ್ಮಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಸನ್ಮಾನ ಪಡೆದಿದ್ದಾರೆ.
ನಂದಗೋಕುಲ ಪ್ರತಿಭಾ ಪುರಸ್ಕಾರವು ಪ್ರಶಸ್ತಿ ಪತ್ರದ ಜೊತೆಗೆ ಪ್ರಶಸ್ತಿ ಮೊತ್ತವನ್ನು ಒಳಗೊಂಡಿದ್ದು 16 ನವೆಂಬರ್ 2024ರಂದು ನಡೆಯವ ನಂದಗೋಕುಲ ದೀಪಾವಳಿ ಸಂಭ್ರಮದ ವೇಳೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದ್ದಾರೆ.