ಮಂಗಳೂರು : ಕರ್ಣಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕ ನಂದಳಿಕೆ ಬಾಲಚಂದ್ರ ರಾವ್ (72) ಅವರು ದಿನಾಂಕ 14 ಮೇ 2025ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಕವಿ ಮುದ್ದಣನ ಹುಟ್ಟೂರಾದ ಕಾರ್ಕಳ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿ ಮುದ್ದಣನನ್ನು ಶಾಶ್ವತವಾಗಿ ನೆನಪಿಸುವ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದರು. ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತೀ ವರ್ಷ ಕವಿ ಮುದ್ದಣ ದಿನಾಚರಣೆಯನ್ನು ಆಯೋಜಿಸುತ್ತಿದ್ದರು. ಮುದ್ದಣನ ಹೆಸರಿನಲ್ಲಿ ಅಂಚೆ ಚೀಟಿ, ನಾಣ್ಯ ಬಿಡುಗಡೆ, ನೂರಾರು ಸಾಹಿತ್ಯಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ ಮಾಡಿದ್ದರು. ಮಂಗಳೂರು ವಿ.ವಿ.ಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠಕ್ಕಾಗಿ ಶ್ರಮಿಸಿದ್ದರು. ಕವಿ ಮುದ್ದಣನ ಕೃತಿಗಳನ್ನು ಮರುಮುದ್ರಿಸುವುದು, ಯಕ್ಷಗಾನ ಕೃತಿಗಳನ್ನು ಪ್ರಸ್ತುತಪಡಿಸುವುದು ಹಾಗೂ ದೃಶ್ಯ-ಶ್ರಾವ್ಯ ಮಾಧ್ಯಮಗಳಲ್ಲಿ ದಾಖಲಿಸುವುದು ಮುಂತಾದ ಸಾರಸ್ವತ ಸೇವೆಯನ್ನು ಅವರು ನಡೆಸಿದ್ದರು.
‘ನಂದೊಳಿಗೆದ ಮುದ್ದಣೆ’, ‘ತೆಕ್ಕುಂಜ ಗೋಪಾಲಕೃಷ್ಣ ಭಟ್ಟ’ ಎಂಬ ಕೃತಿ ರಚಿಸಿರುವ ಅವರು ವಿವಿಧ ಗ್ರಂಥ ಸಂಪಾದನೆ ನಡೆಸಿದ್ದರು. ಕಾಂತಾವರ ಕನ್ನಡ ಸಂಘದ ಸ್ಥಾಪಕ ಸಂಘಟನ ಕಾರ್ಯದರ್ಶಿಯಾಗಿ, ದೂರ ಸಂಪರ್ಕ ಇಲಾಖೆಯ ಸಲಹಾ ಸಮಿತಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ವಿವಿಧ ಸಂಘ ಸಂಸ್ಥೆಗಳು ಅವರ ಸೇವೆಯನ್ನು ಪರಿಗಣಿಸಿ ಸಮ್ಮಾನಿಸಿದ್ದವು.