ಶಿವಮೊಗ್ಗ : ಪ್ರಯೋಗಶೀಲ ಯುವ ಕವಿ, ಎಲ್ಲರು ಪ್ರೀತಿಯಿಂದ ‘ನಂಕು’ ಎಂದೇ ಕರೆಯುವ ನಂದನ ಕುಪ್ಪಳಿ (32) ದಿನಾಂಕ 11 ಸೆಪ್ಟೆಂಬರ್ 2025ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈಚೆಗೆ ಎಂ.ಎನ್.ಡಿ. ಕಾಯಿಲೆಗೆ ತುತ್ತಾಗಿ ದೈಹಿಕ ಸ್ವಾಧೀನ ಕಳೆದುಕೊಂಡಿದ್ದ ನಂದನ್ ಕುರಿತು ನೂರಾರು ಸಾಹಿತ್ಯ ಮನಸ್ಸುಗಳು ಮರುಗಿದ್ದವು. ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿಯೂ ಕುಪ್ಪಳಿಯ ಹೇಮಾಂಗಣದಲ್ಲಿ ವರ್ಷಗಳ ಹಿಂದೆ ‘ಭಾವರೇಖೆ’ ಎಂಬ ಕವನ ಸಂಕಲವನ್ನು ಹೊರ ತಂದಿದ್ದರು. ಇನ್ನೇನು ಎರಡನೇಯ ಕೃತಿ ಹೊರತರುವ ಪ್ರಯತ್ನದಲ್ಲಿದ್ದರು.
ಕುವೆಂಪು ಪ್ರಕೃತಿ ಆರಾಧನೆ, ಕಾರಂತರ ಪ್ರಕೃತಿ ಚರ್ಯಟನೆ, ತೇಜಸ್ವಿ ಪ್ರಕೃತಿಯ ಅನ್ವೇಷಣೆಗಳಿಂದ ಪ್ರಭಾವಿತರಾಗಿ ಇವರು ತಮ್ಮ ಬದುಕು, ಆಲೋಚನೆ, ಬರವಣಿಗೆ, ನಡೆಯಲ್ಲಿ ಅವುಗಳನ್ನು ಮೈಗೂಡಿಸಿಕೊಂಡಿದ್ದರು. ಕವಿತೆ, ಕತೆ, ಪ್ರಬಂಧಗಳ ರಚನೆಯಲ್ಲಿ ತೊಡಗಿರುವ ಇವರ ಬರವಣಿಗೆಯ ಪ್ರಧಾನ ಅಂಶ ಪ್ರಕೃತಿ ಪ್ರೇಮವೆ ಆಗಿದೆ. ಓದು, ಬರಹ, ಫೋಟೋಗ್ರಫಿ, ಚಾರಣ, ಅಧ್ಯಾಪನ, ಕೃಷಿ ಇವು ಇವರ ಆಸಕ್ತಿಯ ಕ್ಷೇತ್ರಗಳು. ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿಯ ಶಾಲೆಗಳಲ್ಲಿ ಕೆಲಕಾಲ ಶಿಕ್ಷಕರಾಗಿ, ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಮತ್ತು ಸಾಹಿತ್ಯಯಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ರಾಷ್ಟ್ರಕವಿ ಕುವೆಂಪು ಊರಿನವರಾದ ಇವರು ನಿತ್ಯ ಹಸಿರನ್ನು ಧ್ಯಾನಿಸುತ್ತಾ ಹಸಿರಾಗಿ ಬದುಕುವ ಹಂಬಲ ಹೊಂದಿದ್ದರು.
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಕೆಲವು ಹೊಸತುಗಳನ್ನು ಅಳವಡಿಸಿಕೊಳ್ಳಲು ಅತ್ಯುತ್ತಮವಾದ ಸಲಹೆಗಳನ್ನು ನೀಡಿದ್ದರು. ಅಲ್ಲಿನ ಸೈಸರ್ಗಿಕ ಮರಗಳನ್ನು ಹಾಗೆಯೇ ಸದ್ಬಳಕೆ ಮಾಡಿಕೊಂಡು ಅದಕ್ಕೆ ಕುಳಿತುಕೊಳ್ಳುವ ಕಟ್ಟೆಗಳನ್ನು ಕಲ್ಲುಗಳಿಂದ ನಿರ್ಮಿಸಿದ್ದರು. ಸೀತಾಳೆ ಹೂವಿನ ಗಿಡಗಳನ್ನು ಮರಗಳ ಮೇಲೆ ಬೆಳೆಸಬೇಕು ಎಂಬ ಹಂಬಲದಿಂದ ಅಲ್ಲಿನ ಮರಗಳಿಗೆ ಸೀತಾಳೆ ಗಿಡಗಳನ್ನು ಅಳವಡಿಸಿದ ಮೊದಲಿಗೆ ನಂದನ್
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ರಾಮಸ್ವಾಮಿ ಕೆ.ಎಸ್. ಮತ್ತು ಯಶೋಧ ದಂಪತಿಯ ಪುತ್ರರಾದ ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹಿರೇಕೂಡಿಗೆಯಲ್ಲಿ ಮುಗಿಸಿದ ಇವರು ಪದವಿಪೂರ್ವ ಮತ್ತು ಬಿ.ಎ. ಪದವಿ ಶಿಕ್ಷಣವನ್ನು ತೀರ್ಥಹಳ್ಳಿಯ ಸರ್ಕಾರಿ ಕಾಲೇಜುಗಳಲ್ಲಿ ಪಡೆದರು. ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಇಡಿ. ಪದವಿಯನ್ನೂ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ.