‘ಪಾತ್ರ, ಸನ್ನಿವೇಶ ಸೇರಿದಾಗ ಕಾದಂಬರಿ’
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಆಯೋಜಿಸಿದ ‘ನಾನು ಮತ್ತು ನನ್ನ ಕಾದಂಬರಿ ರಚನೆ’ ಕಾರ್ಯಕ್ರಮವು ದಿನಾಂಕ 19-07-2023ರ ಶನಿವಾರದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿಮರ್ಶಕಿ ಎನ್. ಸಂಧ್ಯಾರಾಣಿ “ಹಲವಾರು ಪಾತ್ರ ಹಾಗೂ ಸನ್ನಿವೇಶಗಳು ಸೇರಿದಾಗ ಕಾದಂಬರಿ ಹುಟ್ಟುತ್ತದೆ ಪ್ರತಿಯೊಂದು ಭಾವ ಕೂಡ ಸಾಹಿತ್ಯದ ಯಾವುದೇ ಪ್ರಕಾರವನ್ನು ಪಡೆದುಕೊಳ್ಳಬೇಕಾದರೆ, ಅದಕ್ಕೆ ಬೇಕಾದ ಸ್ವರೂಪ ಅಥವಾ ಮಾಧ್ಯಮವನ್ನು ಅದೇ ಹುಟ್ಟುಹಾಕುತ್ತದೆ. ಕೆಲವೊಮ್ಮೆ ನಮ್ಮ ಭಾವನೆಗಳು ಕವನಗಳಿಗೆ ಮಾತ್ರ ಮೀಸಲಾಗುತ್ತದೆ. ಇನ್ನು ಕೆಲವೊಮ್ಮೆ ಮತ್ತಷ್ಟು ಹೆಚ್ಚಿನ ವಿಚಾರವನ್ನು ಪಡೆದು. ಭಾವನೆ ಕಾದಂಬರಿಯ ರೂಪವನ್ನು ಪಡೆದುಕೊಳ್ಳುತ್ತದೆ” ಎಂದು ಹೇಳಿದರು.
ಲೇಖಕಿ ಆಶಾ ರಘು ಮಾತನಾಡುತ್ತಾ “ಕಾದಂಬರಿಯ ಪ್ರಕ್ರಿಯೆ ಒಂದು ಶೋಧ ಕಾರ್ಯವಾಗಿದೆ. ವ್ಯಾಪ್ತಿಯಲ್ಲಿ ವಿಸ್ತರಿಸುತ್ತಾ ವಿವರಗಳೊಂದಿಗೆ ಸಾಗುವಾಗ ಪಾತ್ರಗಳ ಮನೋಭೂಮಿಕೆಯ ಆಳವನ್ನು ಶೋಧಿಸುತ್ತ ಹೋಗುವ ಕ್ರಮ ಇದಾಗಿದೆ. ಜಗತ್ತಿನಲ್ಲಿ ಮಾನವ ಮತ್ತು ಪ್ರಕೃತಿ, ಮಾನವ ಮತ್ತು ಮಾನವ ಹಾಗೂ ಮಾನವ ಮತ್ತು ಅವರ ಅಂತರಂಗ ಎಂದು ಮೂರು ರೀತಿಯ ಮುಖಾಮುಖಿಯನ್ನು ಕಾಣಬಹುದು. ಅದರಲ್ಲಿ ಕಡೆಯದು ಕಾದಂಬರಿ ರಚಿಸುವಾಗ ನನಗೆ ಕಾಣಿಸುತ್ತದೆ” ಎಂದು ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಇವರು “ಇತ್ತೀಚೆಗೆ ಕಾದಂಬರಿ ಬರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಲೇಖಕಿಯರು ಕಥನ ಪ್ರಕಾರಕ್ಕೆ ಒಲಿದು. ಬರೆಯುತ್ತಿದ್ದಾರೆ. ಲಿಂಗ ಸಮಾನತೆಯನ್ನು ಕುರಿತು ಮಾತನಾಡುವ ‘ದ್ವಿತ್ವ’ ಮತ್ತು ಅಂಡಮಾನ್ ದ್ವೀಪದಲ್ಲಿ ಸರೆಯಾದ ಹೋರಾಟಗಾರರನ್ನು ಕುರಿತು ಬರೆದ ‘ಕರಿನೀರು’ ಮುಂತಾದ ಕಾದಂಬರಿಗಳು ಶ್ರೇಷ್ಠ ಕೃತಿಗಳಾಗಿವೆ. ಆದರೆ ಅವುಗಳ ಸುತ್ತ ನಡೆಯಬೇಕಾದ ಚರ್ಚೆಗಳು ನಡೆದಿಲ್ಲ. ವಿಮರ್ಶೆ ಇಂಥ ಶ್ರೇಷ್ಠ ಕೃತಿಗಳನ್ನು ಪರಿಗಣಿಸಿಲ್ಲವೇ? ಕೇವಲ ಮಹಿಳೆಯರದೆಂದು ದೂರವಿರಿಸುತ್ತಿದೆಯೇ? ಎಂಬ ಪ್ರಶ್ನೆಗಳು ಹುಟ್ಟುತ್ತವೆ.” ಎಂದು ಬೇಸರ ವ್ಯಕ್ತಪಡಿಸಿದರು.