‘ನಾಯಿ ನಾನು’ ನರೇಂದ್ರ ಎಸ್. ಗಂಗೊಳ್ಳಿಯವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಹದಿನೇಳು ಹೃದಯಸ್ಪರ್ಶಿ ಕಥೆಗಳಿವೆ. ಇವು ಜಗತ್ತಿನ ಸಮಸ್ತ ಜೀವಿಗಳಲ್ಲಿ ತಾನೇ ಎಲ್ಲಕ್ಕಿಂತ ಶ್ರೇಷ್ಠನೆಂದು ಬೀಗುವ ಮನುಷ್ಯನ ಹುಳುಕುಗಳನ್ನೂ, ಸ್ವಾರ್ಥ-ವಂಚನೆಗಳನ್ನೂ, ಮೂರ್ಖ ಆಲೋಚನೆಗಳನ್ನೂ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತವೆ. ಆದ್ದರಿಂದ ವಿಷಾದವೇ ಈ ಕಥೆಗಳ ಸ್ಥಾಯೀಭಾವ.
ಹೊರಗಿನಿಂದ ಸಭ್ಯನಾಗಿ ಕಾಣುವ ಒಬ್ಬ ವ್ಯಕ್ತಿಯಲ್ಲೂ ವಿಕೃತ ಕಾಮದ ಬೇರುಗಳು ಆಳಕ್ಕಿಳಿದಿರುತ್ತವೆ ಎಂಬುದಕ್ಕೆ ನಿದರ್ಶನವಾಗಿ ನಿಲ್ಲುವ ‘ಒಳ್ಳೆಯವನು’ ಎಂಬ ಕಥೆ ಇಂದಿನ ಸಮಾಜದಲ್ಲಿ ಪುಟ್ಟ ಹುಡುಗಿಯರ ಮೇಲೂ ಅತ್ಯಾಚಾರ ನಡೆಸುವ ಕ್ರೂರ ಪುರುಷರನ್ನು ಸ್ವವಿಮರ್ಶೆಗೊಳಪಡಿಸುತ್ತದೆ. ದೇವದಾಸಿ ಪದ್ಧತಿಯ ಪುರುಷ ಕ್ರೌರ್ಯವನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ ನಡೆಸ ಹೊರಟ ವ್ಯಕ್ತಿ ಆಂತರ್ಯದಲ್ಲಿ ಇನ್ನೂ ಬದಲಾಗದಿರುವ ಗೋಸುಂಬೆಯಾಗಿರುವುದನ್ನು ‘ಒಂದು ದೇವಿಯ ಕತೆ ‘ ತೆರೆದಿಡುತ್ತದೆ. ‘ಒಂದು ಚಪ್ಪಲಿಯ ಕತೆ ‘ ಆನ್ ಲೈನ್ ಖರೀದಿಯ ಥಳಕು ಬಳಕುಗಳ ಹಿಂದಿನ ಮೋಸದ ಕಥೆಯನ್ನು ಬಿತ್ತರಿಸುತ್ತದೆ. ಮಿತ್ರನಿಂದ ಪ್ರೇರಿತನಾಗಿ ಆನ್ ಲೈನ್ ಮೂಲಕ ದುಬಾರಿ ಹಣ ತೆತ್ತು ಆಕರ್ಷಕ ಚಪ್ಪಲಿ ಖರೀದಿಸುವ ಕಾಲೇಜು ವಿದ್ಯಾರ್ಥಿ ಬಡ ತಂದೆ ತಾಯಿ ತಂಗಿಯರ ಮುಂದೆ ಸಣ್ಣವನಾಗಿ ಪರಿತಪಿಸುತ್ತಾನೆ. ‘ ಬದುಕು ನಡೆಯುವುದಲ್ಲ ‘ ಕಥೆಯಲ್ಲಿ ವೇಶ್ಯಾವಾಟಿಕೆಯ ಜಾಲದೊಳಗೆ ಬೀಳುವ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ತನ್ನ ಜೀವನೋಪಾಯಕ್ಕಾಗಿ ಅದನ್ನು ಮುಂದುವರೆಸಿದರೆ ಇನ್ನೊಬ್ಬಳು ಆ ಕೂಪದಿಂದ ಎದ್ದು ಮೈಕೊಡವಿಕೊಂಡು ವೇಶ್ಯಾವಾಟಿಕೆಯನ್ನು ವಿರೋಧಿಸುವ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿ ಶ್ಲಾಘ್ಯ ಕಾರ್ಯವನ್ನು ಮಾಡುತ್ತಾಳೆ. ಹೀಗೆ ಕಥೆಯು ಎರಡು ವಿಭಿನ್ನ ಸಾಧ್ಯತೆಗಳನ್ನು ಮುಂದಿಡುತ್ತದೆ. ‘ಜನ ಗಣ ಮನ’ದಲ್ಲಿ ಬೇರೆಯವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತ ತನ್ನ ಹಾಗೂ ತನ್ನ ಕುಟುಂಬದವರು ಬಹಳ ಸಭ್ಯರೆಂದು ಹೇಳಿಕೊಳ್ಳುವ ವ್ಯಕ್ತಿಯ ಮಗನೇ ಒಬ್ಬ ಹೆಣ್ಣುಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿ ಜೈಲಿಗೆ ಹೋಗುವ ಪ್ರಸಂಗ ಸೃಷ್ಟಿಯಾಗುವ ವ್ಯಂಗ್ಯವಿದೆ.
ಅಪ್ಪ ತನಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ಮರೆತು ಅಪ್ಪನನ್ನು ವಿನಾಕಾರಣ ಕಡೆಗಣಿಸುವ ಮಗನಿಗೆ ಅಜ್ಜ ಅಪ್ಪನ ಹೆಸರಿನಲ್ಲಿ ಪತ್ರ ಬರೆದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದಾಗ ಮಗನಲ್ಲಾಗುವ ಪರಿವರ್ತನೆಯ ಕಥೆ ‘ಅಪ್ಪನ ಶವ’ ಮನಕಲಕುತ್ತದೆ. ರೈತರು ಕೃಷಿಗಾಗಿ ಸಾಲಮಾಡಿ ಕಿತ್ತು ತಿನ್ನುವ ಬಡತನದಿಂದಾಗಿ ಸಾಲ ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ರಾಜಕಾರಣಿಗಳ ಪೊಳ್ಳು ಆಶ್ವಾಸನೆಯ ಪ್ರಹಸನದ ಕಥೆ ‘ನಾನು ರೈತನ ಮಗ’ ಪ್ರಸ್ತುತ ಸಂದರ್ಭದಲ್ಲಿ ಬಹಳ ಮಹತ್ವದ್ದು. ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದ ವಿಜ್ಞಾನಿಯೊಬ್ಬನಿಗೆ ಅವನ ಮಿತ್ರನೇ ದ್ರೋಹ ಬಗೆದು ಅವನ ಪ್ರಯೋಗದ ಫಲವನ್ನು ಉಣ್ಣಲು ಹವಣಿಸುವ ಕಥೆ ‘ಕಾಣದಂತೆ ಮಾಯವಾದನು’ ಒಂದು ಫ್ಯಾಂಟಸಿ. ಅಸಹಾಯಕಳಾದ ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡಿ ಬಳಸಿಕೊಳ್ಳಲು ಹವಣಿಸುವ ಬಾಸ್ ಮತ್ತು ಕೊನೆಗೆ ಅನಿರೀಕ್ಷಿತವಾಗಿ ಅವಳಿಗೆ ಸಿಗುವ ದೊಡ್ಡ ಮೊತ್ತದ ಪರಿಹಾರ ಧನವು ಅವಳಿಗೆ ಬಿಡುಗಡೆ ಸಿಗುವ ಕಥೆ ‘ಯಾವುದೀ ಪ್ರವಾಹವು’. ಸರಕಾರದ ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಬಡವರ ಮನೆಗಳನ್ನು ನೆಲಸಮ ಮಾಡುವ ರಾಕ್ಷಸ ಯಂತ್ರದ ಕ್ರೌರ್ಯ ಹಾಗೂ ವಿಧಿ ವಿಪರ್ಯಾಸವೆಂಬಂತೆ ಆ ಯಂತ್ರವು ಅಪಘಾತಕ್ಕೀಡಾಗಿ ಅದರೊಳಗಿದ್ದ ಅಧಿಕಾರಿಗಳು ಸುಟ್ಟು ಕರಕಲಾಗುವುದು -ಇವೆರಡೂ ‘ಸತ್ಯಮೇವ ಜಯತೇ’ ಎಂಬ ವಿನ್ಯಾಸದಲ್ಲಿ ರಚಿತವಾದವು.
‘ರಾಮಜ್ಜನ ಕಾಗೆ’ ಮನುಷ್ಯ ಮತ್ತು ಪಕ್ಷಿಗಳ ನಡುವಣ ಸಂಬಂಧದ ಕಥೆ. ಎಲ್ಲರಿಂದ ತಿರಸ್ಕಾರಕ್ಕೊಳಗಾಗುವ ಕಾಗೆಯಂಥ ಸಾಧು ಹಕ್ಕಿಯನ್ನು ಅಪಾರವಾಗಿ ಪ್ರೀತಿಸುವ ರಾಮಜ್ಜ ಸತ್ತಾಗ ಆ ಕಾಗೆಯು ಅವನ ಚಿತೆಗೆ ಹಾರಿ ಸಾಯುವ ಕಥೆ ಮನೋಜ್ಞವಾಗಿದೆ. ‘ಸಣ್ಣಿ’ ಅನಾಥ ಹುಡುಗಿ ಸಣ್ಣಿ ಚೆನ್ನ ಎಂಬವನ ಜತೆಗೆ ಕೆಲವು ಕಾಲ ಬದುಕಿ ಅವನು ಬಿಟ್ಟು ಹೋದಾಗ ತನ್ನ ಮಗುವಿಗೋಸ್ಕರ ವೇಶ್ಯಾವೃತ್ತಿಗೆ ಇಳಿದ ಸಂದರ್ಭದಲ್ಲಿ ಅವಳ ಮಗು ಸತ್ತು ಹೋಗುವ ಕರುಣಾಜನಕ ಕಥೆ. ‘ಬದ್ಕಿನ್ ಯಾಸು’ ಪೂರ್ತಿಯಾಗಿ ಅಪ್ಪಟ ಕುಂದಾಪುರ ಭಾಷೆಯಲ್ಲಿದೆ.
ಶೀರ್ಷಿಕೆಯ ಕಥೆ ‘ನಾಯಿ ನಾನು’ ಒಂದು ಹೃದಯ ವಿದ್ರಾವಕ ಕಥೆ. ಈ ಜಗತ್ತಿನಲ್ಲಿ ಶ್ವಾನಪ್ರಿಯರಿದ್ದರೂ ಎಲ್ಲರೂ ಗಂಡು ನಾಯಿಯನ್ನೇ ಬಯಸಿ ಹೆಣ್ಣು ನಾಯಿಯನ್ನು ಕಡೆಗಣಿಸುವ ಮತ್ತು ತಮ್ಮ ಲಾಭಕ್ಕೋಸ್ಕರವಷ್ಟೇ ಪ್ರಾಣಿಗಳನ್ನು ಸಾಕುವ ಮನುಷ್ಯರ ಸ್ವಾರ್ಥ ಬುದ್ಧಿಯೆಡೆಗೆ ಈ ಕಥೆ ಕ್ಷ-ಕಿರಣ ಬೀರುತ್ತದೆ. ಇಲ್ಲಿ ಹುಟ್ಟಿನಿಂದ ಸಾವಿನ ತನಕವೂ ಪಡಬಾರದ ಯಾತನೆ ಅನುಭವಿಸುವ ಒಂದು ಹೆಣ್ಣುನಾಯಿ ತನ್ನ ಕಥೆಯನ್ನು ತಾನೇ ಹೇಳುತ್ತದೆ. ಬಹಳ ವಿಶಿಷ್ಟವಾದ ಒಂದು ಕಥೆಯಿದು. ಸಂಕಲನದ ಎಲ್ಲ ಕಥೆಗಳೂ ಮನುಷ್ಯ ಸ್ವಭಾವದ ವಿವಿಧ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಪ್ರತಿಯೊಂದು ಕಥೆಯೂ ವಸ್ತು, ವಿನ್ಯಾಸ, ತಂತ್ರ ಹಾಗೂ ಕಥನ ಶೈಲಿಗಳಿಂದ ಓದುಗರ ಗಮನ ಸೆಳೆಯುವ ಶಕ್ತಿಯನ್ನು ಹೊಂದಿದೆ.
ನರೇಂದ್ರ ಎಸ್. ಗಂಗೊಳ್ಳಿ
ಪಾರ್ವತಿ ಜಿ. ಐತಾಳ್