ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ : ಡಾ| ಜಯಶ್ರೀ
22 ಫೆಬ್ರವರಿ 2023, ಕಾಸರಗೋಡು: ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಸುಪ್ತ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಸೂಕ್ತ ವೇದಿಕೆ, ಪ್ರೋತ್ಸಾಹ ಅತ್ಯಗತ್ಯ. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಕಲ್ಪಿಸಿರುವ ನಾರಿ ಚಿನ್ನಾರಿ ವೇದಿಕೆ ಶ್ಲಾಘನೀಯ ಹಾಗೂ ಅಭಿನಂದನೀಯ ಎಂದು ಡಾ. ಜಯಶ್ರೀ ನಾಗರಾಜ್ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕವಾದ ನಾರಿ ಚಿನ್ನಾರಿಯನ್ನು ಫೆಬ್ರವರಿ 19ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಲೆ, ಸಂಸ್ಕೃತಿ ಪೋಷಣೆ ಮಾಡುತ್ತಿರುವ ರಂಗಚಿನ್ನಾರಿ ಇದೀಗ ನಾರಿ ಚಿನ್ನಾರಿ ಮಹಿಳಾ ಘಟಕದ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಬೆಳಕಿಗೆ ಬರಲು ಈ ವೇದಿಕೆ ಸೂಕ್ತ ಎಂದರು.
ಕಾಸರಗೋಡು ನಗರಸಭೆ ಕೌನ್ಸಿಲರ್ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಕಲಾವಿದೆ ಮತ್ತು ಚಲನಚಿತ್ರ ನಟಿ ರಂಜಿತಾ ಶೇಟ್ ಮಾತನಾಡಿ, ನಾರಿ ಚಿನ್ನಾರಿಯಂತಹ ವೇದಿಕೆ ಎಲ್ಲೆಡೆ ರೂಪುಗೊಳ್ಳಬೇಕು. ಈ ಮೂಲಕ ಮನೆಯಲ್ಲೇ ಉಳಿದುಕೊಂಡಿರುವ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದರು.
ಕಲಾವಿದೆ ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ ಗೀತಾ ರಾಮಚಂದ್ರ ಶೆಣೈ ಮಾತನಾಡಿ, ನಾರಿ ಚಿನ್ನಾರಿ ವೇದಿಕೆಯ ಮುಖಾಂತರ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಮುಂದೆ ತರುವ ಪ್ರಯತ್ನ ಮೆಚ್ಚುವಂತಹದ್ದು ಎಂದರು. ಇದೇ ಸಂದರ್ಭದಲ್ಲಿ ಸವಿತಾ ಟೀಚರ್ ಅವರನ್ನು ರಂಗಚಿನ್ನಾರಿ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಂಗಚಿನ್ನಾರಿಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ಗೀತಾ ಎಂ. ಭಟ್ ಸ್ವಾಗತಿಸಿ, ನಿರೂಪಿಸಿದರು. ಶ್ರೀಲತಾ ಟೀಚರ್ ವಂದಿಸಿದರು.
ಪ್ರತಿಭಾ ಸಿಂಚನ
ನಾರಿ ಚಿನ್ನಾರಿ ಉದ್ಘಾಟನೆಯ ಬಳಿಕ ದೀಯಾ ಶೆಣೈ ಬೀರಂತಬೈಲ್ (ಅಭಿನಯ ನೃತ್ಯ), ರಕ್ಷಾ ಸರ್ಪಂಗಳ (ಭಕ್ತಿಗೀತೆ), ಆದ್ಯಂತ ಅಡೂರು (ತಬಲಾ ಸಹಿತ ಭಾವ ಗಾಯನ), ಕನಿಹ ಅನಂತಪುರ (ಜಾನಪದ ನೃತ್ಯ), ಸುನಂದಾ, ಅಶ್ವಿತಾ ಬೆದ್ರಡ್ಕ ಕಂಬಾರು (ಕೀರ್ತನೆ) ಲಲಿತಾ ಉಪ್ಪಳ (ಶೋಭಾನೆ ಹಾಡು), ಪ್ರಣಮ್ಯ ನೀರ್ಚಾಲು (ಕವನ ವಾಚನ), ಶಿವ ಕುಮಾರ್ ನಾಯ್ಕಾಪು ಕುಂಬ್ಳೆ (ತಬಲಾ ವಾದನ) ರಮ್ಯಾ ರಾವ್ ಬಳಗ ಕಾಸರಗೋಡು (ಯಕ್ಷಗಾನ), ಅನ್ವಿತಾ ಕಾಮತ್ ಕಾಸರಗೋಡು (ಕೀರ್ತನೆ), ಗೌರಿ ಪ್ರಿಯ ಅಣಂಗೂರು (ಶಾಸ್ತ್ರೀಯ ಸಂಗೀತ), ಮೇಧಾ ನಾಯರ್ಪಳ್ಳ (ಕಾವ್ಯ ವಾಚನ) ಮೊದಲಾದವರಿಂದ ಪ್ರತಿಭಾ ಸಿಂಚನ ನಡೆಯಿತು.