23 ಮಾರ್ಚ್ 2023, ಪುತ್ತೂರು: ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು ಪ್ರತೀ ವರ್ಷದಂತೆ ಈ ವರ್ಷವೂ ಇದರ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ “ನರ್ತನಾವರ್ತನ – 2023” ಮಾರ್ಚ್ 05 ಭಾನುವಾರದಂದು ಸಂಜೆ 5:30ಕ್ಕೆ ಪುತ್ತೂರಿನ ಜೈನ ಭವನದಲ್ಲಿ ನಡೆಯಿತು. ಕರಾವಳಿಯ ಹಿರಿಯ ಗುರುಗಳಾದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕರಾದ ತಮ್ಮ ಶಿಷ್ಯ ದೀಪಕ್ ಕುಮಾರ್ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಅತಿಯಾದ ಅಭಿಮಾನ-ಮೆಚ್ಚುಗೆ ವ್ಯಕ್ತ ಪಡಿಸುವುದರೊಂದಿಗೆ ದೀಪಕ್ ಕುಮಾರ್ ಇವರ ಸಾಧನೆಯಲ್ಲಿ ಅವರ ಸಹ ಧರ್ಮಿಣಿ ಶ್ರೀಮತಿ ಪ್ರೀತಿಕಲಾ ದೀಪಕ್ ಸಂಗೀತ ನಿರ್ದೇಶನದೊಂದಿಗೆ ಪತಿಗೆ ಅಪೂರ್ವ ಸಹಕಾರ ನೀಡುವುದರ ಬಗ್ಗೆ ಮತ್ತು ಅಕಾಡೆಮಿಯ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ಗೋಪಾಲಕೃಷ್ಣ ಭಟ್, ಆಡಳಿತ ನಿರ್ದೇಶಕರು ದ್ವಾರಕಾ ಸಮೂಹ ಸಂಸ್ಥೆ ಇವರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
“ನರ್ತನಾವರ್ತನ – 2023” ನೃತ್ಯೋತ್ಸವದ ಈ ವೇದಿಕೆಯಲ್ಲಿ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ್ ಇವರಿಗೆ ಸಂಸ್ಥೆ ನೀಡುವ ವಿಶೇಷವಾದ “ಕಲಾಶ್ರಯ ಪ್ರಶಸ್ತಿ -2023”ನ್ನು ನೀಡಿ ಗೌರವಿಸಲಾಯಿತು. ವಿದುಷಿ ಸುಮಂಗಲ ರತ್ನಾಕರ್ ಮಂಗಳೂರಿನ “ನಾಟ್ಯಾರಾಧನಾ ಮತ್ತು ಯಕ್ಷ ಆರಾಧನಾ ಕಲಾ ಕೇಂದ್ರದ ನಿರ್ದೇಶಕರು. ಇವರು ಭರತ ನಾಟ್ಯದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆಗೆ ಈ ಪ್ರಶಸ್ತಿ ಸಂದಿದೆ. ಭರತನಾಟ್ಯದ ಮಾರ್ಗಪಥದಲ್ಲಿ ಪುಷ್ಪಾಂಜಲಿಯಿಂದ ತಿಲ್ಲಾನದವರೆಗೆ ಬರುವ ಅನೇಕ ನೃತ್ಯ ಬಂಧಗಳಲ್ಲಿ ಅದರಲ್ಲೂ ಸಾಹಿತ್ಯಿಕವಾಗಿ ಬರುವಂತಹ ಶಬ್ದಂ, ಕೌತ್ವಂ, ಪದಂ, ಜಾವಳಿ, ತಿಲ್ಲಾನ ಮುಂತಾದವುಗಳಲ್ಲಿ ಅತೀ ಹಚ್ಚು ಕನ್ನಡ ಸಾಹಿತ್ಯ ರಚನೆ ಮಾಡಿ, ಭರತನಾಟ್ಯ ಕ್ಷೇತ್ರಕ್ಕೆ ನೀಡಿ, ಕನ್ನಡದಲ್ಲಿ ನೃತ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಖ್ಯಾತಿ ಇವರದ್ದು. ಒಬ್ಬ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆಯ ತ್ಯಾಗ ಮತ್ತು ಪ್ರೋತ್ಸಾಹ ಇದೆ. ಇದು ನಾವು ಕೇಳಿದ ಉಕ್ತಿ. ಅದೇ ರೀತಿ ಒಬ್ಬ ಮಹಿಳೆಯ ಸಾಧನೆಯ ಹಿಂದೆ ಒಬ್ಬ ಪುರುಷನ ತ್ಯಾಗ ಮತ್ತು ಪ್ರೋತ್ಸಾಹ ಇದೆ ಎಂಬುದಕ್ಕೆ ವಿದುಷಿ ಶ್ರೀಮತಿ ಸುಮಂಗಲ ಇವರಿಗೆ ಇವರ ಪತಿ ಶ್ರೀ ರತ್ನಾಕರ ರಾವ್ ನೀಡುತ್ತಿರುವ ಸ್ಪೂರ್ತಿ ಸಹಕಾರವೇ ಜ್ವಲಂತ ಸಾಕ್ಷಿ. ಪತ್ನಿಗೆ ಶ್ರೀ ರತ್ನಾಕರ ರಾವ್ ನೀಡಿದ ಸಹಕಾರವನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಅವರನ್ನೂ ಗೌರವಿಸಲಾಯಿತು.
ಸಂಸ್ಥೆಯ ಸಂಗೀತ ನಿರ್ದೇಶಕಿ ಶ್ರೀಮತಿ ಪ್ರೀತಿಕಲಾ ಪ್ರಾರ್ಥಿಸಿ, ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದಾರೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸುಮಂಗಲಾ ಗಿರೀಶ್ ವಂದಿಸಿ, ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದ್ದಾರೆ.
ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು 1996ರಲ್ಲಿ ಆರಂಭಗೊಂಡು ಪ್ರತಿಭಾನ್ವಿತ ಕಲಾಸಂಪತ್ತನ್ನು ಭರತನಾಟ್ಯ ಕ್ಷೇತ್ರಕ್ಕೆ ನೀಡಿದ ಹಿರಿಮೆ ಈ ಸಂಸ್ಥೆಗಿದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆದು, ಭರತನಾಟ್ಯ ಕಿರಿಯ ದರ್ಜೆ (ಜೂನಿಯರ್) ಕಿರಿಯ ದರ್ಜೆ (ಸೀನಿಯರ್) ಮತ್ತು ವಿದ್ವತ್ ಪರೀಕ್ಷೆಗಳನ್ನು ಎದುರಿಸಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕೊಡುವ ಅನೇಕ ಶಿಷ್ಯ ವೇತನಗಳಿಗೆ ಇಲ್ಲಿಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
2007 ಸಂಸ್ಥೆಗೆ 10 ವರ್ಷ ತುಂಬಿದಾಗ ಒಂದು ದಿನದ ನೃತ್ಯೋತ್ಸವ ನರ್ತನಾವರ್ತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೃತ್ಯ ಉತ್ಸವ ಪ್ರತೀವರ್ಷ ಆವರ್ತನ ಆಗಬೇಕೆಂಬ ಉದ್ದೇಶದಿಂದ ವಿಂಶತಿಯ ನಂತರ “ನರ್ತನಾವರ್ತನ” ಎಂಬ ಕಲೋತ್ಸವವನ್ನು ಹಮ್ಮಿಕೊಂಡದ್ದು ನಾಟ್ಯಕ್ಷೇತ್ರದ ಬಗ್ಗೆ ಇವರಿಗಿರುವ ಕಾಳಜಿಯನ್ನು ತೋರಿಸುತ್ತದೆ.
2016ನೇ ಇಸವಿಯಲ್ಲಿ ಸಂಸ್ಥೆಗೆ 20 ವರ್ಷ ತುಂಬಿದಾಗ ವಿಂಶತಿ ಉತ್ಸವ ಆರಂಭಿಸಿ, ಅಂದಿನಿಂದ ನೃತ್ಯೋತ್ಸವದ ಕಾರ್ಯಕ್ರಮವನ್ನು ಮಾಡುತ್ತಾ ಬಂದು, 2017ರಲ್ಲಿ “ನರ್ತನಾವರ್ತನ” ಎಂಬ ವಿಶೇಷ ನೃತ್ಯೋತ್ಸವವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡರು. 2017ರಲ್ಲಿ ಪುತ್ತೂರು ಪುರಭವನದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದೆ ಶ್ರೀಮತಿ ಮೀನಾಕ್ಷಿ ಶ್ರೀನಿವಾಸನ್ ಚೆನ್ನೈ ಇವರ ಹಿಮ್ಮೇಳ ಸಹಿತವಾದ ಕಾರ್ಯಕ್ರಮ ಆಯೋಜಿಸಿದ್ದು, ಅದು ಪೂರ್ಣ ರೀತಿಯಲ್ಲಿ ಯಶಸ್ವಿಯಾಗಿದ್ದು, ನಂತರ ಪ್ರತೀ ವರ್ಷ ಇದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸ್ಪೂರ್ತಿ ದೊರೆತಂತಾಯಿತು ಮತ್ತು 10 ಮತ್ತು 12ನೇ ವರ್ಷದಲ್ಲಿ ಸಣ್ಣ ಮಟ್ಟದಲ್ಲಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲಾಶ್ರಯ ಪ್ರಶಸ್ತಿ ನೀಡಿದ್ದರೂ, 2018ರಿಂದ “ನರ್ತನಾವರ್ತನ”ದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಚನೆ ನಿರ್ದೇಶಕ ದೀಪಕ್ ಇವರಿಗೆ ಬಲವಾಯಿತು.
2018ರಲ್ಲಿ ಎರಡು ದಿನದ ಕಾರ್ಯಕ್ರಮ ಸೇಂಟ್ ಫಿಲೋಮೀನಾ ಪ್ರೌಢಶಾಲೆಯಲ್ಲಿ ನಡೆದು ಮೊದಲನೇ ದಿನ ಸಂಸ್ಥೆಯಿಂದಲೇ ಧ್ವನಿ ಮುದ್ರಣಗೊಂಡು ನೃತ್ಯ ಸಂಯೋಜನೆಗೊಂಡ “ಕೊಲ್ಲೂರು ಶ್ರೀ ಮುಕಾಂಬಿಕೆ” ಎಂಬ ಪೌರಾಣಿಕ ನೃತ್ಯ ಪ್ರದರ್ಶನ ಮತ್ತು ಎರಡನೇ ದಿನ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಮತಿ ಜಾನಕಿ ರಂಗರಾಜನ್ ಚೆನ್ನೈ ಇವರ ಕಾರ್ಯಕ್ರಮ ನಡೆಸಿ, ಕಲಾಶ್ರಯ ಪ್ರಶಸ್ತಿಯನ್ನು ಮುಖವರ್ಣಿಕೆ ಮತ್ತು ರಂಗಸಜ್ಜಿಕೆಯಲ್ಲಿ ಪುತ್ತೂರಿನಂತಹ ಸಣ್ಣ ಊರಿನಲ್ಲಿ ಸಾಧನೆ ಮಾಡಿದ “ಭಾವನಾ ಕಲಾ ಆರ್ಟ್ಸ್” ಮಾಲಕರಾದ ವಿಘ್ನೇಶ್ ವಿಶ್ವಕರ್ಮ ಮತ್ತು ವನಿತಾ ವಿಘ್ನೇಶ್ ದಂಪತಿಗಳಿಗೆ “ಕಲಾಶ್ರಯ ಪ್ರಶಸ್ತಿ -2018 ನೀಡಲಾಯಿತು.
2019ರಲ್ಲಿ ಮಲೇಶ್ಯಾದ ಬಹಳ ಸುಪ್ರಸಿದ್ದ ನರ್ತಕರಾದ ಶಂಕರ್ ಕಂದ ಸ್ವಾಮಿ ಇವರ ನೃತ್ಯವನ್ನು ಪುತ್ತೂರಿನ ಬಂಟರ ಭವನದಲ್ಲಿ ಏರ್ಪಡಿಸಿ, “ಕಲಾಶ್ರಯ ಪ್ರಶಸ್ತಿ -2019”ನ್ನು ಶ್ರೀಮತಿ ಪ್ರತಿಭಾ ಸಾಮಗರಿಗೆ ‘ನೃತ್ಯ ವಿಮರ್ಶೆ’ಗಾಗಿ ನೀಡಲಾಯಿತು. 2020ರಲ್ಲಿ ಕ್ರಿಸ್ಟೋಫರ್ ಗುರುಸ್ವಾಮಿ ಚೆನ್ನೈ ಇವರ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿತ್ತು. ಇವರು ತಮ್ಮ ಹಿಮ್ಮೇಳ ತಂಡದ ಸಹಿತ ಬಂದು ಅದ್ಭುತ ಕಾರ್ಯಕ್ರಮ ನೀಡಿದರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. “ಕಲಾಶ್ರಯ ಪ್ರಶಸ್ತಿ -2020”ನ್ನು ‘ಧ್ವನಿ’ ಮತ್ತು ‘ಬೆಳಕು’ ವಿಭಾಗಕ್ಕೆ ನೀಡಿದ್ದು, ಮಂಗಳೂರಿನ ‘ದೇವು ಸೌಂಡ್ಸ್’ ಇವರ ಪಾಲಿಗೆ ಪ್ರಶಸ್ತಿ ಬಂದಿತ್ತು.
2021ರಲ್ಲಿ ಕರ್ನಾಟಕದ ಪಾರ್ಶ್ವನಾಥ್ ಉಪಾಧ್ಯಾಯ ಬಹಳ ಪ್ರಸಿದ್ಧ ತಂಡ “ಅಭಾ” ಎಂಬ ರಾಮಾಯಣದ ವಿಷಯಾಧಾರಿತ ಪ್ರಸ್ತುತಿಯನ್ನು ಹಿಮ್ಮೇಳನದೊಂದಿಗೆ ವಿಶಿಷ್ಟ ರೀತಿಯಲ್ಲಿ ಪ್ರಸ್ತುತ ಪಡಿಸಿತು. ಭರತನಾಟ್ಯದ ಉಡುಗೆಯನ್ನು ಅಚ್ಚುಕಟ್ಟಾಗಿ ಹೊಲಿದು ಕೊಡುವ ಮತ್ತು ಅದರಲ್ಲೇ ಸಾಧನೆ ಮಾಡಿದ ಮಂಗಳೂರಿನ ಸುನಿಲ್ ಉಚ್ಚಿಲ್ ದಂಪತಿಗಳಿಗೆ “ಕಲಾಶ್ರಯ ಪ್ರಶಸ್ತಿ -2021”ನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವೂ ಪುತ್ತೂರಿನ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆಯಿತು.
2022ರಲ್ಲಿ ಪುತ್ತೂರು ಪುರಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಉದಯೋನ್ಮುಖ ಕಲಾವಿದೆ ಶ್ರೀಮತಿ ಶ್ವೇತಾ ಪ್ರಚಂಡೆ ಚೆನ್ನೈ ಇವರು ಹಿಮ್ಮೇಳ ಸಹಿತ ಅದ್ಬುತ ಕಾರ್ಯಕ್ರಮ ನೀಡಿದರು. ಕಲೆಗೆ ಬಹಳ ಪ್ರೋತ್ಸಾಹ ನೀಡಿದ, ಕಲಾಪೋಷಕರಾಗಿ ಬಹಳ ಕೆಲಸ ಮಾಡಿದ ಮುಳಿಯ ಆಭರಣ ಮಳಿಗೆಯ ಆಡಳಿತ ನಿರ್ದೇಶಕರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಇವರಿಗೆ “ಕಲಾಶ್ರಯ ಪ್ರಶಸ್ತಿ -2022”ನ್ನು ನೀಡಿ ಸಂಸ್ಥೆ ಪುರಸ್ಕರಿಸಿತು.