ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ ಅರ್ಪಿಸುವ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ ‘ನರ್ತನಾವರ್ತನಾ’ ದಿನಾಂಕ 03-03-2024 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶಾಂತಲಾ ನೃತ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆಗೈದು ಶುಭಹಾರೈಸಿದರು. ಇದೇ ವೇದಿಕೆಯಲ್ಲಿ ಪುತ್ತೂರಿನ ಡಾ. ಹರಿಕೃಷ್ಣ ಪಾಣಾಜೆ ಇವರಿಗೆ ಈ ಸಾಲಿನ ‘ಕಲಾಶ್ರಯ’ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪುತ್ತೂರಿನ ಪ್ರಖ್ಯಾತ ವೈದ್ಯ, ಎಸ್. ಡಿ. ಪಿ. ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್ ಇದರ ಆಡಳಿತ ನಿರ್ದೇಶಕ ಹಾಗೂ ಪುತ್ತೂರಿನಲ್ಲಿ ತನ್ನದೇ ಪರಿಕಲ್ಪನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನವನ್ನೊಳಗೊಂಡ 3 ದಿನಗಳ ವಿಶಿಷ್ಟ ‘ಕಲೋಪಾಸನಾ’ ನೃತ್ಯೋತ್ಸವವನ್ನು ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಹಾಗೂ ಕಲಾಪೋಷಕರಾದ ಇವರ ಕಲಾ ಪೋಷಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಅಭ್ಯಾಗತರಾಗಿ ಆಗಮಿಸಿದ ಶ್ರೀಮತಿ ಸುಧಾ ಶ್ರೀಪತಿ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೃತ್ಯ ಕಾರ್ಯಕ್ರಮ ನೀಡಲು ಆಗಮಿಸಿದ ಬೆಂಗಳೂರಿನ ವಿದ್ವಾನ್ ಪಿ. ಪ್ರವೀಣ್ ಕುಮಾರ್ ಹಾಗೂ ಹಿಮ್ಮೇಳ ಕಲಾವಿದರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ‘ವಂದೇ ಭಾರತಂ’ ಎಂಬ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ, ದೆಹಲಿಯ ಗಣರಾಜ್ಯೋತ್ಸವ ಅಂಗವಾಗಿ ನಡೆದ ಪರೇಡ್ ನಲ್ಲಿ ದೇಶದ ಪ್ರಧಾನಿಯ ಮುಂದೆ ನೃತ್ಯ ಮಾಡಲು ಆಯ್ಕೆಯಾದ 8 ಜನರ ತಂಡವನ್ನು ಗೌರವಿಸಲಾಯಿತು. ಹಾಗೂ ಇದೇ ತಂಡದಲ್ಲಿ ಭಾಗವಹಿಸಿದ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ 3ಮಂದಿ ಕಲಾವಿದೆಯರಾದ ಕುಮಾರಿ ಕ್ಷಮಾ, ಕುಮಾರಿ ಪ್ರಣಮ್ಯಾ ಮತ್ತು ಕುಮಾರಿ ಸ್ವಾತಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ವಿದ್ವಾನ್ ದೀಪಕ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದುಷಿ ಪ್ರೀತಿಕಲಾ ಪ್ರಾರ್ಥಿಸಿ, ತೇಜಸ್ವಿ ಅಂಬೆಗಲ್ಲು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಸೌಜನ್ಯ ಪಡುವೆಟ್ನಾರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಹಾಗೂ ಪುತ್ತೂರಿನ ಹಲವಾರು ನೃತ್ಯ ಕಲಾವಿದರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.
ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಅಂತರಾಷ್ಟ್ರೀಯ ಖ್ಯಾತಿಯ ಭಾರತನಾಟ್ಯ ಕಲಾವಿದರಾದ ಶ್ರೀ ಪಿ. ಪ್ರವೀಣ್ ಕುಮಾರ್ ಇವರಿಂದ ‘ಸಖ’ ಶೀರ್ಷಿಕೆಯ ನೃತ್ಯ ಪ್ರದರ್ಶನ ಗೊಂಡಿತು. ಪುರುಷಾಭಿವ್ಯಕ್ತಿ, ಯಾವುದೇ ಸ್ತ್ರೀ ಸಂವೇದನೆ ಇಲ್ಲದೆ ಕೇವಲ ಪುರುಷರ ಅಭಿವ್ಯಕ್ತಿಯಲ್ಲಿರುವಂಥಹ ಮಾರ್ಗ ಪದ್ದತಿಯ ಕಾರ್ಯಕ್ರಮ ಇದಾಗಿತ್ತು. ಇವರಿಗೆ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಅವರ ಶಿಷ್ಯರಾದ ಬೆಂಗಳೂರಿನ ಕುಮಾರಿ ಕೆ. ಎನ್. ನವ್ಯಶ್ರೀ, ಹಾಡುಗಾರಿಕೆಯಲ್ಲಿ ಬೆಂಗಳೂರಿನ ಶ್ರೀಯುತ ಆರ್. ರಘುರಾಮ್, ಮೃದಂಗದಲ್ಲಿ ಬೆಂಗಳೂರಿನ ಶ್ರೀ ಭವಾನಿ ಶಂಕರ್ ಹಾಗೂ ಕೊಳಲಿನಲ್ಲಿ ಬೆಂಗಳೂರಿನ ಶ್ರೀ ರಘುಸಿಂಹ ಸಹಕರಿಸಿದರು. ಧ್ವನಿ ಮತ್ತು ಬೆಳಕಿನಲ್ಲಿ ದೇವ್ ಪ್ರೊ ಸೌಂಡ್ಸ್ ಮಂಗಳೂರು ಹಾಗೂ ರಂಗಾಲಂಕಾರದಲ್ಲಿ ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಇದರ ಸದಸ್ಯರು ಸಹಕರಿಸಿದರು.