ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-96 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 02 ಜನವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ “ಸಮಸ್ಯೆಗಳ ಸರಮಾಲೆಯನ್ನು ಬದಿಗೊತ್ತಿ ವಿಜೃಂಭಣೆಯಿದ ಸಂಭ್ರಮಿಸುವುದಕ್ಕೆ ಸಾಧ್ಯ ಎನ್ನುವುದನ್ನು ಯಶಸ್ವೀ ಕಲಾವೃಂದ ಮಾಡಿ ತೋರಿಸಿದೆ. ಎಲ್ಲಾ ರೀತಿಯ ಸೌಲಭ್ಯ, ಸಂಪನ್ಮೂಲ, ಅವಕಾಶ ಇದ್ದಂತಹ ಸಂಸ್ಥೆಗಳಿಗೆ ನಿರಂತರವಾಗಿ ಕೆಲಸಗಳನ್ನು ಮಾಡುವುದು ಸಾಹಸವಾಗಿರುವ ಸಂದರ್ಭಗಳಲ್ಲಿ ಊಹೆಗೆ ನಿಲುಕದಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಚೇತೋಹಾರಿ ಶಕ್ತಿ ಯಶಸ್ವೀ ಕಲಾವೃಂದಕ್ಕಿದೆ. ಒಂದು ಜಾಗದಲ್ಲಿ ನಿರಂತರವಾಗಿ ಕಲಾ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವಷ್ಟು ದೊಡ್ಡ ಸಾಮಾಜಿಕ ಉಪಕಾರಿ ಯಾವುದೂ ಇಲ್ಲ. ಯಾಕೆಂದರೆ ಇದು ಬೆಳಕು ಹಚ್ಚುವ ಕಾರ್ಯ. ‘ನಾಟಕಾಷ್ಟಕ’ ಹೆಸರೇ ಆಕರ್ಷಕ. ಜೀವನ ಕೆಟ್ರೆ ನಾಟಕದಿಂದ ಸರಿ ಮಾಡಬಹುದು, ನಾಟಕನೇ ಕೆಟ್ರೆ? ಸರಿ ಮಾಡುವುದು ಹೇಗೆ? ಒಂದು ಕೆಟ್ಟ ನಾಟಕ ಮಾಡಿದರೆ ಒಂದು ಜೀವನವನ್ನೇ ಹಾಳು ಮಾಡಿದ ಹಾಗೆ. ಅಂದರೆ ನಾಟಕ ಕಟ್ಟುವಲ್ಲಿ ಅಷ್ಟು ಜವಾಬ್ದಾರಿ ಇರುತ್ತದೆ ಎಂದ ಬೇಂದ್ರೆಯವರು ಅಷ್ಟಾಂಗ ಯೋಗಕ್ಕೆ ಸಂಬಂಧಿಸಿದ ಲೇಖನ ಬರೆದು ಅದರ ಎಂಟು ಅಂಗಗಳನ್ನು ನಮ್ಮ ಮುಂದೆ ಚಿತ್ರಿಸುತ್ತಾರೆ. ಇಲ್ಲಿ ‘ನಾಟಕಾಷ್ಟಕ’, ನಾಟಕದ ಅಷ್ಟಾಂಗ ಯೋಗ ಪೂರಕವಾಗುವಂತಹ, ಸಮಗ್ರತೆಯನ್ನು ತಂದುಕೊಡುವಂತಹ ಯೋಗ ಇದು.” ಎಂದರು.
ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ “ಮೊಬೈಲೇ ಸರ್ವವೂ ಆದ ಈ ಕಾಲದಲ್ಲಿ ರಂಗಭೂಮಿ ನಾಟಕದಲ್ಲಿ ಪ್ರೇಕ್ಷಕರನ್ನು ಎಂಟು ದಿನಗಳ ಕಾಲ ತೊಡಗಿಸುವ ಕಾರ್ಯ ಶ್ಲಾಘನೀಯ. ಒಂದಷ್ಟು ಸಮಯವನ್ನು ಕಾರ್ಯಕ್ರಮ ಸಂಘಟನೆಗಾಗಿ ಮೀಸಲಿಟ್ಟು ಸದಾ ಕಾಲ ತೊಡಗಿಸಿಕೊಂಡ ಯಶಸ್ವೀ ಗೆಳೆಯರ ಸಾಧನೆ ಅಗಣಿತವಾದದ್ದು. ನಿರಂತರ ಕಲಾ ಚಟುವಟಿಕೆಗಳಿಂದ ಮನೆ ಮಾತಾಗಿರುವ ಸಂಸ್ಥೆ ಯಶಸ್ವೀ ಕಲಾವೃಂದ.” ಎಂದರು.
ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯುತ್ ಗುತ್ತಿಗೆದಾರ ಶ್ರೀಕಾಂತ್ ಶೆಣೈ ಕೋಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ಉರಾಳ, ‘ರಸರಂಗ ಕೋಟ’ದ ಸುಧಾ ಮಣೂರು, ‘ರಂಗ ಸಂಪದ’ ಕೋಟದ ಕಾರ್ಯದರ್ಶಿ ರಾಘವೇಂದ್ರ ತುಂಗ, ಧಮನಿ ಟ್ರಸ್ಟ್ ಇದರ ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಸುರಭಿ ಬೈಂದೂರು’ ತಂಡದ ಮಕ್ಕಳು ಅಭಿನಯಿಸಿದ ಕುಂದಾಪುರ ಕನ್ನಡದ ನಾಟಕ ‘ಮಕ್ಕಳ ರಾಮಾಯಣ’ ಪ್ರಸ್ತುತಿಗೊಂಡಿತು.