ಚೆನ್ನೈ: ನಟನ ತನ್ನ ಚಟುವಟಿಕೆಯ ಭಾಗವಾಗಿ ಇದೇ 13-07-2023ರಂದು ಸಂಜೆ ಚೆನ್ನೈಯ ಮೈಲಾಪೊರೆಯ ‘ಭವನ್ಸ್ ಮೈನ್ ಆಡಿಟೋರಿಯಂ’ನಲ್ಲಿ ನಡೆಯಲಿರುವ ಚೆನ್ನೈಯ ರಾಷ್ಟ್ರೀಯ ಬಹುಭಾಷಾನಾಟಕೋತ್ಸವದಲ್ಲಿ ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯ ಹಾಡು’ ನಾಟಕವು ಪ್ರದರ್ಶನಗೊಳ್ಳಲಿದೆ.
ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ. ನಟನದ ಶ್ರೀ ಮೇಘ ಸಮೀರ ಮತ್ತು ದಿಶಾ ರಮೇಶ್ ಅವರು ಅಭಿನಯಿಸುತ್ತಿದ್ದು, ನಾಡಿನ ಹೆಸರಾಂತ ರಂಗತಜ್ಞ ಡಾ. ಶ್ರೀಪಾದ ಭಟ್ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ಚೆನ್ನೈಯ ಭಾರತೀಯ ವಿದ್ಯಾ ಭವನ ಆಯೋಜನೆಯಲ್ಲಿ ನಡೆಯುತ್ತಿರುವ ಈ ನಾಟಕೋತ್ಸವದಲ್ಲಿ ಕನ್ನಡ ನಾಡಿನಿಂದ ಆಯ್ಕೆಯಾದ ಏಕೈಕ ನಾಟಕ ಇದಾಗಿದೆ.
ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲಾ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು. ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲಾ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ.
ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್ ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕ, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸುತ್ತಾನೆ.